FACT CHECK | ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಾಗ ಕಣ್ಣೀರು ಹಾಕಿದ್ರಾ ಓವೈಸಿ?

ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್​ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಿತು. ಲೋಕಸಭೆಯ ನಂತರ, ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು ರಾಜ್ಯಸಭೆಯಲ್ಲಿಯೂ ಅಂಗೀಕರಿಸಲಾಗಿದೆ. ವಕ್ಫ್‌ ಮಸೂದೆಗೆ ಅಂಗೀಕಾರ ದೊರೆತ ನಂತರ ಸಂಸತ್‌ನಲ್ಲಿ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಏಪ್ರಿಲ್ 3, 2025 ರಂದುಫೇಸ್​ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ಅಸಂಖ್ಯಾತ ಬಡವರ ಹಾಗೂ ರೈತರ ಆಸ್ತಿಯನ್ನು ನುಂಗಿ ನೀರು ಕುಡಿದಿದ್ದ ವಕ್ಫ್ ಬೋರ್ಡ್ ಮಂಡಳಿಯ ಪರ ಲೋಕಸಭೆಯಲ್ಲಿ ವಾದ ಮಾಡಿ ಅಸಂಖ್ಯಾತ ಬಡವರ ಹಾಗೂ ರೈತರ ಕಣ್ಣೀರಿಗೆ ಕಾರಣವಾಗಿದ್ದ ಓವೈಸಿ ನಿನ್ನೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಸಿಕ್ಕಿದ ನಂತರ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೊವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ನ್ಯೂಸ್‌ ಮೀಟರ್ ಪರಿಶೀಲಿಸಿದ್ದು, ವೈರಲ್ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ವರದಿ ಮಾಡಿದೆ.

ವೈರಲ್ಮೊ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಯಲು, ಯೂಟ್ಯೂಬ್​ನಲ್ಲಿ ಅಸಾದುದ್ದೀನ್ ಓವೈಸಿ ಪಾರ್ಲಿಮೆಂಟ್ ಎಂಬ ಕೀ ವರ್ಡ್ ಬಳಸಿ ಕಳೆದ 24 ಗಂಟೆಯ ಸುದ್ದಿಯನ್ನುಸರ್ಚ್ ಮಾಡಿದಾಗ, ವಕ್ಫ್ ತಿದ್ದುಪಡಿ ಮಸೂದೆಯ ಕುರಿತಾದ ಸಂಸತ್ತಿನ ಅಧಿವೇಶನದಲ್ಲಿ ಅಸಾದುದ್ದೀನ್ ಬಿಳಿ ಉಡುಪಿನಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಆದರೆ, ವೈರಲ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಓವೈಸಿ ನೀಲಿ ಬಣ್ಣದ ಉಡುಪನ್ನು ಧರಿಸಿರುವುದು ಕಂಡುಬಂದಿದೆ.

ಈ ಮೂಲಕ ವೈರಲ್ ಆಗುತ್ತಿರುವ ವೀಡಿಯೊ ಇತ್ತೀಚಿನದ್ದಲ್ಲ ಎಂಬುದು ಸ್ಪಷ್ಟವಾಯಿತು. ಬಳಿಕ ವೈರಲ್ ವೀಡಿಯೊದಲ್ಲಿ ನಾವು ‘‘AIMIM RR ಜಿಲ್ಲೆ’’ ಎಂಬ ವಾಟರ್‌ಮಾರ್ಕ್ ಅನ್ನು ಸಹ ಗಮನಿಸಿದ್ದೇವೆ. ಈ ಕುರಿತು ಹುಡುಕಿದಾಗ @aimim_rr_district ನ ಇನ್​ಸ್ಟಾಗ್ರಾಮ್ ಖಾತೆ ನಮಗೆ ಸಿಕ್ಕಿದೆ. ಈ ಅಕೌಂಟ್​ನಲ್ಲಿ ಆಗಸ್ಟ್ 7, 2024 ರಂದು ಇದೇ ವೈರಲ್ ವೀಡಿಯೊ ಹಂಚಿಕೊಂಡಿರುವುದು ಕಂಡುಬಂದಿದೆ. ಇದಕ್ಕೆ ‘‘ಇಂದು (ಲೋಕಸಭೆ) ಸಂಸತ್ತಿನಲ್ಲಿ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಸಾಹಬ್ ಅವರ ದೃಶ್ಯಗಳು’’ ಎಂಬ ಕ್ಯಾಪ್ಶನ್ ನೀಡಲಾಗಿದೆ.

ಯೂಟ್ಯೂಬ್​ನಲ್ಲಿ ಆಗಸ್ಟ್ 7, 2024 ರ ಲೋಕಸಭಾ ಅಧಿವೇಶನವನ್ನು ಸರ್ಚ್ ಮಾಡಿದಾಗ ಒಡಿಶಾಲೈವ್ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮಿಂಗ್‌ ಮಾಡಲಾದ ವೀಡಿಯೊ ನಮಗೆ ಕಂಡುಬಂತು. ಇದರಲ್ಲಿ ಸುಮಾರು 4:46:55 ಗಂಟೆಗಳ ಸಮಯದಲ್ಲಿ ಅದೇ ವೈರಲ್ ಕ್ಲಿಪ್ ಅನ್ನು ನಾವು ಕಂಡುಕೊಂಡಿದ್ದೇವೆ, ಇಲ್ಲಿ ಓವೈಸಿ ಕೇವಲ ಕಣ್ಣುಗಳನ್ನು ಉಜ್ಜುತ್ತಿದ್ದಾರಷ್ಟೆ, ಅಳುತ್ತಿಲ್ಲ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ. ಹೀಗಾಗಿ 2025 ರ ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ಅಸದುದ್ದೀನ್ ಓವೈಸಿ ಸಂಸತ್ತಿನಲ್ಲಿ ಅಳುತ್ತಿರುವುದನ್ನು ತೋರಿಸುವ ವೀಡಿಯೊ ಹಳೆಯದು ಮತ್ತು ವಾಸ್ತವವಾಗಿ ಅಲ್ಲಿಯೂ ಅಳುತ್ತಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 2024ರಲ್ಲಿ ಲೋಕಸಭಾ ಅಧಿವೇಶ ನಡೆಯುತ್ತಿದ್ದ ವೇಳೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಮ್ಮ ಕಣ್ಣುಗಳನ್ನು ಉಜ್ಜುತ್ತಿರುವ ಹಳೆಯ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ವಕ್ಫ್ ತಿದ್ದುಪಡಿ ಮಸೂದೆ 2025ರ ಸಂದರ್ಭದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ನ್ಯೂಸ್‌ ಮೀಟರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅರವಿಂದ್ ಕೇಜ್ರಿವಾಲ್‌ರನ್ನು ಭೇಟಿಯಾಗಲು ಭಾರತಕ್ಕೆ ಬರ್ತಾರಾ ಸುನಿತಾ ವಿಲಿಯಮ್ಸ್‌?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights