FACT CHECK | ಮಧ್ಯಪ್ರದೇಶದ ವಿಡಿಯೋವನ್ನು ಪಶ್ಚಿಮ ಬಂಗಾಳದ್ದು ಎಂದು ತಪ್ಪಾಗಿ ಹಂಚಿಕೆ

ವಕ್ಫ್ ತಿದ್ದುಪಡಿ ಕಾಯ್ದೆ – 2025 ರ ವಿರುದ್ಧ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಮುರ್ಷಿದಾಬಾದ್‌ನಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಇಬ್ಬರು ಹಿಂದೂಗಳಾದ ಚಂದನ್ ದಾಸ್ ಮತ್ತು ಹರಗೋಬಿಂದ್ ದಾಸ್ ಗುಂಪು ದಾಳಿಯಲ್ಲಿ ಸಾವನ್ನಪ್ಪಿದರೆ, ಒಬ್ಬ ಮುಸ್ಲಿಂ ವ್ಯಕ್ತಿ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಹಲವಾರು ಸುದ್ದಿ ವರದಿಗಳು ತಿಳಿಸಿವೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ನೂರಾರು ಹಿಂದೂಗಳು ತಮ್ಮ ಮನೆಗಳನ್ನು ತೊರೆದು ಮಾಲ್ಡಾ ನಗರವನ್ನು ಆಶ್ರಯಕ್ಕಾಗಿ ತಲುಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಗುಂಪೊಂದು ಮನೆಯ ಮೇಲೆ ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಈ ಮನೆಯ ಗೋಡೆಗಳ ಮೇಲೆ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಫೋಟೋವನ್ನು ನೇತುಹಾಕಲಾಗಿದೆ. ಈ ವಿಡಿಯೋ ಪಶ್ಚಿಮ ಬಂಗಾಳದ್ದು ಎಂದು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಹಿಂದೂಗಳ ಮನೆಗಳು- ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಕೊಲ್ಲಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಏಪ್ರಿಲ್ 16, 2025 ರಂದು ಈ ವಿಡಿಯೋವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನ ಬಂಗ್ಲಾದೇಶ ವಲ್ಲ. ನಮ್ಮ ದೇಶಾನೇ ಪಚ್ಚಿಮ ಬಂಗಾಳ. ಪಾಕಿಸ್ತಾನ ಹಾಗೆ ಬಾಂಗ್ಲಾದೇಶದಂತೆಯೇ, ಪಶ್ಚಿಮ ಬಂಗಾಳದಲ್ಲಿಯೂ ಸಹ, ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ ಮತ್ತು ಹಿಂದೂಗಳು ಪ್ರತಿಭಟಿಸಿದರೆ ಅವರನ್ನು ಕೊಲ್ಲಲಾಗುತ್ತಿದೆ. ಏಕೆಂದರೆ ಗಲಭೆಕೋರರಿಗೆ ತಿಳಿದಿದೆ, ನಾವು ಏನೇ ಮಾಡಿದರೂ ಮಮತಾ ಬ್ಯಾನರ್ಜಿ ಅವರ ಸರ್ಕಾರ ನಮ್ಮೊಂದಿಗೆ ಇದೆ ಯಾರಿಗೂ ಶಿಕ್ಷೆಯಾಗಲು ಬಿಡುವುದಿಲ್ಲ ಎಂದು. ಹಾಗೆ ವಿಡಿಯೋ ಪೂರ್ತಿ ನೋಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಕಾಣುತ್ತೆ. ಈ ವಿಡಿಯೋ ನೋಡಿ ನಿಮಗೆ ಏನ್ ಅರ್ಥ ಅಯ್ತು ಅಂತ ಕಾಮೆಂಟ್ ಮಾಡಿ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಆಧ್ಯಮಗಳಲ್ಲಿ ಹಮಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ಮತ್ತು ರಾಜ್ಯಸಭಾ ಸಂಸದ ರಾಮ್‌ಜಿ ಗೌತಮ್ ಅವರು ಮಾರ್ಚ್ 7, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, “ಮಧ್ಯಪ್ರದೇಶದಲ್ಲಿ ಜಂಗಲ್ ರಾಜ್ ಜಾರಿಯಲ್ಲಿದೆ. ಬಿಜೆಪಿ ಸರ್ಕಾರ ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸೆಹೋರ್‌ನ ಬಕ್ತರಾ ಗ್ರಾಮದಲ್ಲಿ, 500 ಗೂಂಡಾಗಳು ದಲಿತ ವಸಾಹತು ಪ್ರದೇಶದಲ್ಲಿ ಗಲಾಟೆ ಮಾಡಿ, ಅನೇಕ ಜನರನ್ನು ಹೊಡೆದು ಕೊಂದು, ಮನೆಯ ಬಾಗಿಲುಗಳನ್ನು ಮುರಿದು, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಪೊಲೀಸ್ ಪಡೆ ಮೂಕ ಪ್ರೇಕ್ಷಕರಾಗಿದೆ” ಎಂದು ಬರೆದಿದ್ದಾರೆ.

ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಸರ್ಚ್ ನಡೆಸಿದಾಗ, ಝೀ ನ್ಯೂಸ್‌ನ ಯೂಟ್ಯೂಬ್ಚಾನೆಲ್‌ನಲ್ಲಿ ಮಾರ್ಚ್ 7, 2025 ರಂದು ಅಪ್‌ಲೋಡ್ ಮಾಡಲಾದ ವಿಡಿಯೋ ವರದಿ ಲಭ್ಯವಾಗಿದೆ. ಇದರಲ್ಲಿ ವೈರಲ್ ವಿಡಿಯೋವನ್ನು ಸಹ ಕಾಣಬಹುದು. ಈ ವರದಿಯ ವಿವರಣೆಯಲ್ಲಿ, “ಸೆಹೋರ್‌ನ ಬಕ್ತರಾ ಗ್ರಾಮದಲ್ಲಿ ದಲಿತ ಮತ್ತು ಕಿರಾರ್ ಸಮುದಾಯದ ನಡುವೆ ಗಲಾಟೆ ನಡೆದಿದೆ. ಬಬಲೇಶ್ ಚೌಹಾಣ್ ಹತ್ಯೆಯ ನಂತರ ವಿವಾದ ಉಲ್ಬಣಗೊಂಡಿತು. ಅನಿಯಂತ್ರಿತ ಜನಸಮೂಹವು ಅನೇಕ ಸ್ಥಳಗಳಲ್ಲಿ ಬೆಂಕಿ ಹಚ್ಚಿತು. ವಾಸ್ತವವಾಗಿ, ಕಿರಾರ್ ಸಮುದಾಯದ ಜನರು ಅಂಗಡಿಗಳಿಂದ ದಲಿತ ಸಮುದಾಯದ ಜನರಿಗೆ ಸರಕುಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು. ಕಿರಾರ್ ಸಮುದಾಯದ ಬಹಿಷ್ಕಾರದ ನಂತರ ಉದ್ವಿಗ್ನತೆ ಉಂಟಾಗಿದೆ. ಅದರ ನಂತರ ಈ ಗಲಭೆ ನಡೆದಿದೆ. ಗಲಭೆಯ ಸಮಯದಲ್ಲಿ, ವೀಡಿಯೊ ಮಾಡಿದವರ ಮೊಬೈಲ್ ಫೋನ್‌ಗಳನ್ನು ಕಿತ್ತು ಸುಟ್ಟುಹಾಕಲಾಯಿತು” ಎಂಬ ಮಾಹಿತಿ ಇದರಲ್ಲಿದೆ.

ದೈನಿಕ್ ಭಾಸ್ಕರ್ ಕೂಡ ಮಾರ್ಚ್ 7, 2025 ರಂದು ಈ ಘಟನೆ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಕೊಲೆ ಆರೋಪಿ ಸಂಜಯ್ ಅಹಿರ್ವಾರ್ ಮತ್ತು ಬಬಲೇಶ್ ಚೌಹಾಣ್ ಒಟ್ಟಿಗೆ ಮದ್ಯಪಾನ ಮಾಡುತ್ತಿದ್ದರು. ಈ ಸಮಯದಲ್ಲಿ ಅವರ ನಡುವೆ ಜಗಳ ನಡೆದಿದೆ. ಅದೇ ರಾತ್ರಿ ಸಂಜಯ್ ಬಬಲೇಶ್ ವಿರುದ್ಧ ದೌರ್ಜನ್ಯ ಕಾಯ್ದೆಯಡಿಯಲ್ಲಿ ಹಲ್ಲೆಯ ಜೊತೆಗೆ ಪ್ರಕರಣ ದಾಖಲಿಸಿದರು. ಆದರೆ ಇದಾದ ನಂತರ, ಬಬಲೇಶ್ ಚೌಹಾಣ್ ಅವರ ಶವವನ್ನು ಬೆಳಿಗ್ಗೆ ಹೊರತೆಗೆಯಲಾಯಿತು. ಇದಾದ ನಂತರ, ಅವರ ಕುಟುಂಬ ಮತ್ತು ಸಮುದಾಯದ ಸದಸ್ಯರು ಮೃತ ದೇಹವನ್ನು ಇಟ್ಟುಕೊಂಡು ಪ್ರತಿಭಟಿಸಿದರು. ಈ ಸಮಯದಲ್ಲಿ, ಕೋಪಗೊಂಡ ಜನರು ಅಂಗಡಿಗೆ ಬೆಂಕಿ ಹಚ್ಚಿದರು ಮತ್ತು ಕೆಲವು ಮನೆಗಳಿಗೆ ನುಗ್ಗಿ ಜನರನ್ನು ಥಳಿಸಿದರು’’ ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಧ್ಯಪ್ರದೇಶದ ಘಟನೆಯ ವಿಡಿಯೋವನ್ನು ಸುಳ್ಳು ಮತ್ತು ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋ ಪಶ್ಚಿಮ ಬಂಗಾಳದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಂದೂ ಧರ್ಮವನ್ನು ಕೊಳಕು ಅಂದ್ರಾ ಮಮತಾ ಬ್ಯಾನರ್ಜಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights