FACT CHECK | ವೀಸಾ ರದ್ದು ಮಾಡಿದ್ದಕ್ಕೆ ರಾತ್ರೋ ರಾತ್ರಿ ಭಾರತದಿಂದ ಓಡಿ ಹೋಗುತ್ತಿರವ ಪಾಕಿಸ್ತಾನಿ ಪ್ರಜೆಗಳು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಪಹಲ್ಗಾಮ್ನಲ್ಲಿ ಘಟನೆ ನಂತರ ಭಾರತವು ಪಾಕಿಸ್ತಾನಿಯರಿಗೆ ನೀಡಲಾಗಿದ್ದ ಎಲ್ಲಾ ರೀತಿಯ ವೀಸಾಗಳನ್ನು ರದ್ದುಗೊಳಿಸಿದೆ. ವೀಸಾ ಹೊಂದಿರುವ ಎಲ್ಲಾ ಪಾಕಿಸ್ತಾನಿಯರು ಏಪ್ರಿಲ್ 27 ರೊಳಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿತ್ತು. ಇದೇ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಸಾವಿರಾರು ಜನ ಸಮೂಹವೊಂದು ಓಡಾಡುತ್ತಿರುವ ದೃಶ್ಯಗಳಿವೆ. ಪ್ರಧಾನಿ ಮೋದಿ ಅವರ ಆದೇಶದ ನಂತರ ಈ ಎಲ್ಲಾ ಪಾಕಿಸ್ತಾನಿಯರು ತಮ್ಮ ದೇಶಕ್ಕೆ ಹಿಂತಿರುಗುತ್ತಿದ್ದಾರೆ ಎಂದು ಹೇಳಿ ಇದನ್ನು ಹಂಚಿಕೊಳ್ಳಲಾಗುತ್ತಿದೆ.
मोदी जी के आदेश के बाद भारत से भागते पाकिस्तानी डंडा घुसा दो गांव में
जो शराफत से ना जाए कूटों सालों को हमारे लोगों को मारकर ज़िंदा नहीं जाने चाहिए
मोदी जी की शराफ़त है की मारने का आदेश नहीं 48 घंटे में भारत छोड़ने का आदेश दिया है pic.twitter.com/ehxhiq1aqj
— शिवन्या शर्मा (@shivanya33) April 24, 2025
ಶಿವನ್ಯಾ ಶರ್ಮಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ಮೋದಿ ಜೀ ಅವರ ಆದೇಶದ ನಂತರ ಭಾರತದಿಂದ ಪಾಕಿಸ್ತಾನಿಗಳು ಓಡಿಹೋಗುತ್ತಿದ್ದಾರೆ. ಸಭ್ಯವಾಗಿ ಇಲ್ಲಿಂದ ಹೋಗದವರನ್ನು ಚೆನ್ನಾಗಿ ನೋಡಿಕೊಳ್ಳಿ. ನಮ್ಮ ಜನರನ್ನು ಕೊಂದವರನ್ನು ಜೀವಂತವಾಗಿ ಬಿಡಲೇಬಾರದು. ಪುಣ್ಯಕ್ಕೆ ಮೋದಿ ತಮ್ಮ ಒಳ್ಳೆಯತನದಿಂದ ಕೊಲ್ಲುವ ಆದೇಶವನ್ನು ನೀಡಿಲ್ಲ. ಕೇವಲ 48 ಗಂಟೆಗಳಲ್ಲಿ ಭಾರತವನ್ನು ತೊರೆಯುವಂತೆ ಆದೇಶಿಸಿದ್ದಾರೆ,” ಎಂದು ಬರೆಯಲಾಗಿದೆ.
ಇದೇ ರೀತಿಯ ಹೇಳಿಕೆಗಳೊಂದಿಗೆ ವಿಡಿಯೋವನ್ನು ಬಿಜೆಪಿ ಕಾರ್ಯಕರ್ತರಾದ ಪ್ರಮೋದ್ ಕಶ್ಯಪ್ ಗಾಜಿಯಾಬಾದ್ ಯುಪಿ ಮತ್ತು ರೇಣು ಯಾದವ್ ಎಂಬವರೂ ತಮ್ಮ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪ್ರತಿಪಾದಿಸಿ ಹಂಚಿಕೊಂಡಿರುವಂತೆ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ, ಭಾರತದಲ್ಲಿರುವ ಪಾಕಿಸ್ತಾನಿ ಜನರ ವೀಸಾ ರದ್ದುಗೊಳಿಸಿದ್ದ ಪರಿಣಾಮ ಎಲ್ಲರೂ ಹೀಗೆ ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ ಎಂಬುದು ನಿಜವೆ ಎಂದು ಪರಿಶೀಲಿಸಲು, ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಇದಕ್ಕೆ ಸಂಬಂಧಿಸಿದ ಕೆಲವು ಸುದ್ದಿಗಳು ಸಿಕ್ಕಿವೆ. ಇದರಲ್ಲಿ ಏಪ್ರಿಲ್ 23, 2025ರಂದು ಸರ್ಕಾರವು ವೀಸಾದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಗಳ ಒಳಗಾಗಿ ಭಾರತವನ್ನು ತೊರೆಯಲು ಸೂಚಿಸಿದೆ ಎಂದು ಉಲ್ಲೇಖವಾಗಿದೆ.
ಇನ್ನು ವಿಡಿಯೋ ನಿಜವೇ ಎಂದು ತಿಳಿದುಕೊಳ್ಳಲು ಇದರ ಪ್ರಮುಖ ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಲಾಯಿತು. ಆಗ ನಮಗೆ ಕೆಲವು ಲಿಂಕ್ಗಳು ಸಿಕ್ಕವು. ಈ ಎಲ್ಲಾ ಲಿಂಕ್ಗಳನ್ನು ಪರಿಶೀಲಿಸಿದಾಗ, ವೈರಲ್ ಆಗುತ್ತಿರುವ ಈ ವಿಡಿಯೋ ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ಮುಂಚೆಯೇ ಅಂತರ್ಜಾಲದಲ್ಲಿ ಲಭ್ಯವಿರುವುದು ಕಂಡುಬಂದಿದೆ. ಆದರೆ ಈ ವಿಡಿಯೋವನ್ನು ಪಹಲ್ಗಾಮ್ ದಾಳಿಗೆ ತಳುಕು ಹಾಕಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನಿ ಪ್ರಜೆಗಳು ಏಕಕಾಲದಲ್ಲಿ ಓಡಿ ಹೋಗುವುದು ಸತ್ಯಕ್ಕೆ ದೂರವಾದದ್ದು.
ಏಪ್ರಿಲ್ 13, 2025ರಂದು ‘Rihlat Asra ILa Al-Jannah’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ‘ಎಲ್ಲವೂ ಅಲ್ಲಾಹನ ಆಸ್ಥಾನದಲ್ಲಿ ಸಿಗುತ್ತದೆ, ನಮ್ಮ ಕೋರಿ ಮತ್ತು ಪ್ರಾರ್ಥನೆಗಳು ಸತ್ಯವಾಗಿರಬೇಕು ಅಷ್ಟೇ’ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಆದರೆ ವಿಡಿಯೋ ಬಗ್ಗೆ ಇದರಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಭಾರತ ಸರ್ಕಾರ ಪಾಕಿಸ್ತಾನಿಯರು ಭಾರತವನ್ನು ತೊರೆಯುವಂತೆ ಆದೇಶ ಹೊರಡಿಸಿದ್ದು ಏಪ್ರಿಲ್ 23ರಂದು. ಆದರೆ, ಈ ವಿಡಿಯೋವನ್ನು ಏಪ್ರಿಲ್ 13ರಂದೇ ಅಪ್ಲೋಡ್ ಮಾಡಲಾಗಿತ್ತು. ಇದರ ಜೊತೆಗೆ ಅವಿಜಿತ್ ಮಲಾಕಾರ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಈ ವಿಡಿಯೋ ಫೆಬ್ರವರಿ 18ರಂದೇ ಅಪ್ಲೋಡ್ ಆಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ದೃಢಪಟ್ಟಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೀಸಾದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಗಳ ಒಳಗಾಗಿ ಭಾರತವನ್ನು ತೊರೆಯಲು ಸೂಚಿಸಿದ ಕಾರಣಕ್ಕೆ ಪಾಕಿಸ್ತಾನಿಗಳು ಓಡಿ ಹೋಗುತ್ತಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಳೆಯದ್ದಾಗಿದ್ದು, ಇದಕ್ಕೂ ಪಾಕಿಸ್ತಾನಿಯರು ಭಾರತ ತೊರೆಯಲು ಹೇಳಿರುವುದಕ್ಕೂ ಯಾವುದೇ ಸಂಬಂಧವಿಲ್ಲ.ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಪೂರ್ವ ನಿಯೋಜಿತ ಎಂದು ಹೇಳಿದ್ರಾ ಭಾರತೀಯ ಸೇನೆ ಅಧಿಕಾರಿ?

