FACT CHECK | ಭಾರತೀಯ ಸೇನೆಯು ಉಗ್ರನನ್ನು ಸೆರೆ ಹಿಡಿದಿದೆ ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆಯು ಉಗ್ರನನ್ನು ಸೆರೆ ಹಿಡಿದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದರು. ಪ್ರತೀಕಾರವೆಂಬಂತೆ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
आगे शेयर जरूर करे भारतीय आर्मी ने पकड़ा जिंदा आंतकवादी ।। @RahulGandhi @Barmer_Harish @hanumanbeniwal pic.twitter.com/GyzkoRsLEW
— Sukhdev Gujar (@SukhdevGujar13) April 25, 2025
ಸುಖದೇವ್ ಗುರ್ಜರ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ‘ಇದನ್ನು ಶೇರ್ ಮಾಡಿ, ಭಾರತೀಯ ಸೇನೆಯು ಖತರ್ನಾಕ್ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದೆ,’ ಎಂದು ಬರೆದಿದ್ದಾರೆ.
आगे शेयर जरूर करे भारतीय आर्मी ने पकड़ा जिंदा आंतकवादी ।। भारतीय सीमा मे घुसने की कोशिस कर रहा था #KashmirTerroristAttack #PahalgamTerroristAttack pic.twitter.com/fLU52iLTv6
— RAHUL Kumar (@Rahul112113118) April 26, 2025
ಇದೇ ರೀತಿಯ ಹೇಳಿಕೆಗಳೊಂದಿಗೆ ಸೀತಾರಾಮ್ ಮತ್ವಾ ಜಾಟ್ (ಆರ್ಎಲ್ಪಿ), ರಾಹುಲ್ ಕುಮಾರ್, ಕ್ರಾಂತಿಕಾರಿ ವೀರ್, ಅನಿಕೇತ್ ಕುಮಾರ್, ಮುನ್ನಾ ಕುಮಾರ್ ಮತ್ತು ನೀರಜ್ ತ್ರಿಪಾಠಿ ಎಂಬ ಎಕ್ಸ್ ಖಾತೆಗಳಿಂದಲೂ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳ ನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 27ರಂದು ಎನ್ಡಿಟಿವಿ ಮತ್ತು ಇಂಡಿಯಾ ಟುಡೇ ಪ್ರಕಟಿಸಿದ ವರದಿಗಳು ಲಭ್ಯವಾಗಿವೆ.
ಈ ವರದಿಗಳಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ನಂತರ ಲಷ್ಕರ್ ಉಗ್ರ ಜಮೀಲ್ ಅಹ್ಮದ್ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಆಮಿರ್ ನಜೀರ್ ಅವರ ಮನೆಗಳನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ ಎಂದು ಹೇಳಲಾಗಿದೆ. ಇದಕ್ಕೂ ಒಂದು ದಿನ ಮೊದಲು ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಇಬ್ಬರು ಉಗ್ರರಾದ ಅದ್ನಾನ್ ಶಫಿ ಮತ್ತು ಫಾರೂಕ್ ಅಹ್ಮದ್ ಅವರ ಮನೆಗಳನ್ನು ಬಾಂಬ್ನಿಂದ ಸ್ಫೋಟಿಸಲಾಗಿತ್ತು.
ಶುಕ್ರವಾರದಂದು ಕೂಡ ಲಷ್ಕರ್ ಉಗ್ರ ಆದಿಲ್ ಹುಸೇನ್ ಠೋಕರ್ನ ಮನೆಯನ್ನು ಸಹ ಭದ್ರತಾ ಪಡೆಗಳು ಬಾಂಬ್ನಿಂದ ಸ್ಫೋಟಿಸಿದ್ದರು. ಆದರೆ, ಯಾವುದೇ ಉಗ್ರನನ್ನು ಸೆರೆಹಿಡಿದ ವರದಿಗಳಿಲ್ಲ.
ಹೀಗಾಗಿ ವಿಡಿಯೋದ ಹಿನ್ನೆಲೆಯನ್ನು ಕಂಡುಕೊಳ್ಳಲು ಇದರ ಪ್ರಮುಖ ಫ್ರೇಮ್ಗಳನ್ನು ಸ್ಕ್ರಿನ್ ಗ್ರ್ಯಾಬ್ ತೆಗೆದು ಗೂಗಲ್ ಲೆನ್ಸ್ ಸಹಾಯದಿಂದ ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದೆವು. ಆಗ ಕೆಲವು ಯೂಟ್ಯೂಬ್ನ ಲಿಂಕ್ಗಳು ನಮಗೆ ಸಿಕ್ಕಿದವು. ಇದರಿಂದ ಈ ವಿಡಿಯೋಗಳು ಸುಮಾರು ಒಂದು ತಿಂಗಳಿನಿಂದ ಅಂತರ್ಜಾಲದಲ್ಲಿ ಲಭ್ಯವಿದೆ ಎಂದು ತಿಳಿದು ಬಂತು.
ಹೀಗಿದ್ದೂ ಈ ವಿಡಿಯೋಗಳು ನಿಜವೇ ಅಥವಾ ಸುಳ್ಳಾ ಎಂಬುದರ ವಿವರ ಲಭ್ಯವಾಗಿಲ್ಲ. ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದ್ದ ಎಂಬುದರ ಮಾಹಿತಿ ಕೂಡ ಲಭ್ಯವಾಗಿಲ್ಲ.
ಟೆಕ್ನಿಕಲ್ ಭಾಯಿ ವ್ಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋವನ್ನು ಮಾರ್ಚ್ 25, 2025ರಂದು ಅಪ್ಲೋಡ್ ಮಾಡಲಾಗಿದ್ದರೆ, ಸೋನಾ ದೇವಿ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಮಾರ್ಚ್ 31, 2025ರಂದು ಮತ್ತು ಮಹಾದೇವ್ ಚಾನೆಲ್ನಲ್ಲಿ ಏಪ್ರಿಲ್ 5, 2025 ರಂದು ಅಪ್ಲೋಡ್ ಮಾಡಲಾಗಿದೆ. ಈ ಎಲ್ಲಾ ದಿನಾಂಕಗಳು ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗಿಂತ ಮೊದಲಿನವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಯಾವುದೋ ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಂಡು, ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತೀಯ ಸೇನೆಯು ಉಗ್ರನೊಬ್ಬನನ್ನು ಬಂಧಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಪಹಲ್ಗಾಮ್ ಘಟನೆಗೂ ಮುನ್ನವೇ ಈ ವಿಡಿಯೋ ಅಂತರ್ಜಾಲದಲ್ಲಿ ಲಭ್ಯವಿತ್ತು. ಹಾಗಾಗಿ ಪೋಸ್ಟ್ನ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತೀಯ ಸೇನೆ ಪಾಕಿಸ್ತಾನದ ಯುದ್ಧ ಸಾಮಗ್ರಿ ಡಿಪೋವನ್ನು ಉಡಾಯಿಸಿದೆ ಎಂಬುದು ಸುಳ್ಳು

