FACT CHECK | ಭಾರತೀಯ ಮುಸ್ಲಿಂ ಮಹಿಳೆಯೊಬ್ಬರು ಮಗನ ಮೂತ್ರ ಬೆರೆಸಿದ ಊಟವನ್ನು ಗ್ರಾಹಕರಿಗೆ ನೀಡಿದ್ದು ನಿಜವೇ?
ರೆಸ್ಟೋರೆಂಟ್ವೊಂದರಲ್ಲಿ ಮುಸ್ಲಿಂ ಮಹಿಳೆ ತನ್ನ ಬಾಲಕನಿಂದ ಉಚ್ಚೆಹೊಯ್ಯಿಸಿ, ಅದೇ ಆಹಾರವನ್ನು ಗ್ರಾಹಕರಿಗೆ ಬಡಿಸುತ್ತಿದ್ದಾಳೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
![]()
ಫೇಸ್ಬುಕ್ ನಲ್ಲಿ ಈ ವೈರಲ್ ವೀಡಿಯೋ ಕಂಡುಬಂದಿದ್ದು, “ನೋಡಿ ಹೋಟೆಲ್ ನಲ್ಲಿ ತನ್ನ ಮಗನಿಂದ ಉಚ್ಚೆ ಹೊಯ್ಸಿ ಅದನ್ನ ಊಟದಲ್ಲಿ ಬೆರೆಸಿ ಗ್ರಾಹಕರಿಗೆ ತಿನ್ನಿಸುತ್ತಿರುವ ಮುಲ್ಲಿ ಹೋಗಿ ಹಿಂದುಗಳೇ ತಿಂದು ಬನ್ನಿ” ಎಂದು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
1.05 ನಿಮಿಷದ ಈ ವೀಡಿಯೋದಲ್ಲಿ ಬಾಲಕನೊಬ್ಬ ಅಡುಗೆ ಕೋಣೆಯಲ್ಲಿ ಮೂತ್ರ ಮಾಡುತ್ತಾನೆ. ಅಲ್ಲೇ ಇದ್ದ ಅಡುಗೆಯಾಕೆ ಅದು ತಪ್ಪು ಎಂದು ಭಾವಿಸದೇ ಅಲ್ಲೇ ಮೂತ್ರ ಮಾಡಲು ಬಿಟ್ಟು ಬಳಿಕ ಬಾಲಕನ ಮರ್ಮಾಂಗವನ್ನು ಮುಟ್ಟಿದ್ದೂ ಅಲ್ಲದೇ ಅದೇ ಕೈಯಲ್ಲಿ ಗ್ರಾಹಕರಿಗೆ ನೀಡುವ ಪ್ಲೇಟ್ ಗೆ ಆಹಾರ ಹಾಕುವುದನ್ನು ಕಾಣಬಹುದು.
ಹಾಗಿದ್ದರೆ ಈ ವಿಡಿಯೋ ನಿಜವಾಗಿಯೂ ಎಲ್ಲಿಂದ ಬಂದಿದೆ ಮತ್ತು ಈ ಘಟನೆ ಯಾವಾಗಿನದ್ದು ಎಂಬ ಯಾವ ಮಾಹಿತಿಯನ್ನು ಬಳಕೆದಾರರು ಹಂಚಿಕೊಂಡಿಲ್ಲ. ಹಾಗಾಗಿ ಇದನ್ನು ಭಾರತೀಯ ಮುಸ್ಲಿಂ ಸಮುದಾಯದವರು ಮಾಡಿದ್ಧಾರೆ ಎಂಬ ಅಭಿಪ್ರಾಯ ಅಥವಾ ಸಂದೇಹ ಮೂಡುವ ಸಾಧ್ಯತೆಯಿದ್ದು ಇದನ್ನು ಕೂಲಕುಂಶವಾಗಿ ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ ಈ ವಿಡಿಯೋ ಮಲೇಷ್ಯಾದ ಎಂಬ ಮಾಹಿತಿ ಲಭ್ಯವಾಗಿದೆ.
![]()
ಡಿಸೆಂಬರ್ 16, 2022ರ ಮಲಯ್ ಮೇಲ್ ವರದಿಯ ಪ್ರಕಾರ, “ಅಡುಗೆ ಮನೆಯಲ್ಲಿ ಮಗು ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ: ಜೋಹೋರ್ ಆರೋಗ್ಯ ಅಧಿಕಾರಿಗಳು ಕೋಟಾ ಟಿಂಗಿ ರೆಸ್ಟೋರೆಂಟ್ ಅನ್ನು ಮುಚ್ಚಿದರು. ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ನೈರ್ಮಲ್ಯದ ಕೊರತೆಯಿರುವ ಅಡುಗೆ ಪದ್ಧತಿಗಳ ವೀಡಿಯೊ ವೈರಲ್ ಆದ ನಂತರ, ಜೋಹರ್ ಆರೋಗ್ಯ ಅಧಿಕಾರಿಗಳು ಕೋಟಾ ಟಿಂಗಿಯಲ್ಲಿರುವ ರೆಸ್ಟೋರೆಂಟ್ ಅನ್ನು ಹಲವು ಉಲ್ಲಂಘನೆಗಳ ಕಾರಣಕ್ಕಾಗಿ ಇಂದು ಮುಚ್ಚಲು ಆದೇಶಿಸಿದರು. ಕೋಟಾ ಟಿಂಗಿಯ ಹೆರಿಟೇಜ್ ಮಾಲ್ನಲ್ಲಿರುವ ಈ ರೆಸ್ಟೋರೆಂಟ್ ಅನ್ನು ವಿದೇಶಿಯರೇ ನಿರ್ವಹಿಸುತ್ತಿದ್ದು, ಆಹಾರ ನಿರ್ವಹಣೆಗೆ ಅಗತ್ಯವಾದ ಪ್ರಮಾಣೀಕರಣವನ್ನು ಹೊಂದಿರಲಿಲ್ಲ. ಮುಚ್ಚುವ ಆದೇಶವು ಎರಡು ವಾರಗಳ ಅವಧಿಗೆ ಇರುತ್ತದೆ ಎಂದು ವರದಿಯಾಗದೆ.”
![]()
ಡಿಸೆಂಬರ್ 16, 2022ರಂದು ಓರಿಂಯಂಟಲ್ ಡೈಲಿ ಪ್ರಕಟಿಸಿದ ವರದಿಯಲ್ಲಿ “ಆಹಾರ ಅಂಗಡಿಯ ಅಡುಗೆಮನೆಯಲ್ಲಿ ಒಬ್ಬ ಹುಡುಗ ಮೂತ್ರ ವಿಸರ್ಜನೆ ಮಾಡಿದ. ಅಡುಗೆಯವಳು ತನ್ನ ಕೈಗಳಿಂದ ಹುಡುಗನ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿದಳು ಮತ್ತು ಅದೇ ಕೈಗಳನ್ನು ತೊಳೆಯದೆ ಆಹಾರವನ್ನು ತಟ್ಟೆಯಲ್ಲಿ ಇಟ್ಟಳು. ನೆಟಿಜನ್ಗಳು ಘಟನೆಯ ಚಿತ್ರಗಳನ್ನು ಚಿತ್ರೀಕರಿಸಿದ್ದು ಎಷ್ಟು ಅಸಹ್ಯಕರ ಎಂದು ಉದ್ಗರಿಸಿದ್ದಾರೆ. ಸೋಮವಾರ ಇಝ್ಹೈಕಲ್ ಎಂಬ ಟಿಕ್ಟಾಕ್ ಬಳಕೆದಾರರು 1 ನಿಮಿಷ ಮತ್ತು 24 ಸೆಕೆಂಡುಗಳ ಕಿರು ವೀಡಿಯೋ ಚಿತ್ರೀಕರಿಸಿದ್ದು, ಮೇಲಿನ ಘಟನೆ ಕೋಟಾ ಟಿಂಗಿಯಲ್ಲಿರುವ H&M ಬಟ್ಟೆ ಅಂಗಡಿಯಲ್ಲಿರುವ ಆಹಾರ ಮಳಿಗೆಯಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ.” ಎಂದಿದೆ. (ಚೀನಿ ಭಾಷೆಯಿಂದ ಭಾಷಾಂತರಿಸಲಾಗಿದೆ)
![]()
ಡಿಸೆಂಬರ್ 17, 2022ರ ವರ್ಲ್ಡ್ ಆಫ್ ಬಝ್ ವರದಿಯ ಪ್ರಕಾರ, “ಜೋಹರ್ನ ಕೋಟಾ ಟಿಂಗಿಯಲ್ಲಿರುವ ಶಾಪಿಂಗ್ ಮಾಲ್ನಲ್ಲಿರುವ ರೆಸ್ಟೋರೆಂಟ್ ಅನ್ನು ಜೋಹರ್ ಆರೋಗ್ಯ ಪ್ರಾಧಿಕಾರವು ಬಲವಂತವಾಗಿ ಮುಚ್ಚಿಸಿದೆ. ಅಲ್ಲಿ ಕೆಲಸಗಾರನ ಮಗು ಮೂತ್ರ ವಿಸರ್ಜನೆ ಮಾಡುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ವೀಡಿಯೋದಲ್ಲಿ, ಕೆಲಸಗಾರ್ತಿ ಅಡುಗೆ ಮಾಡುತ್ತಾ ತನ್ನ ಮಗನನ್ನು ‘ನಿರ್ವಹಿಸುತ್ತಿರುವ’ ದೃಶ್ಯವು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿತು. ಜೋಹೋರ್ ಆರೋಗ್ಯ ಮತ್ತು ಏಕತಾ ಸಮಿತಿಯ ಅಧ್ಯಕ್ಷ ಲಿಂಗ್ ಟಿಯಾನ್ ಸೂನ್ ಅವರ ಪ್ರಕಾರ, ಕೋಟಾ ಟಿಂಗ್ಗಿಯಲ್ಲಿರುವ ಔಟ್ಲೆಟ್ನಲ್ಲಿ ಶುಚಿತ್ವದ ಮಟ್ಟವು ತೃಪ್ತಿಕರವಾಗಿಲ್ಲ ಎಂದು ತಪಾಸಣೆಯಲ್ಲಿ ಕಂಡುಬಂದಿದೆ.” ಎಂದಿದೆ.
ವೈರಲ್ ವೀಡಿಯೋವನ್ನು ಹೋಲುವ ಕ್ಲಿಪ್ಅನ್ನು ವರ್ಲ್ಡ್ ಆಫ್ ಬಝ್ ವರದಿಯಲ್ಲಿರುವುದನ್ನು ಕಾಣಬಹುದು.
ಇದರೊಂದಿಗೆ ಈ ವರದಿಗಳಲ್ಲಿ ಹೇಳಿರುವ ಜೋಹೊರ್ ಬಾಹ್ರು ಎಂಬ ಪ್ರದೇಶ ಮಲೇಷ್ಯಾದ ಒಂದು ನಗರ ಎಂದು ತಿಳಿದುಬಂದಿದೆ. 2022ರಲ್ಲಿ ಮಲೇಷ್ಯಾದಲ್ಲಿ ನಡೆದ ಘಟನೆ ಇದಾಗಿದ್ದು, ಈ ಆಹಾರ ಕೇಂದ್ರವನ್ನು ಮುಚ್ಚಿಸಲಾಗಿದೆ ಎಂದು ಕಂಡುಬಂದಿದೆ. ಮತ್ತು ಇದು ಭಾರತದ್ದಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2022ರಲ್ಲಿ ಮಲೇಷ್ಯಾದ ಜೋಹೊರ್ ಬಾಹ್ರು ಎಂಬ ಪ್ರದೇಶದಲ್ಲಿರುವ ರೆಸ್ಟೋರೆಂಟ್ವೊಂದರಲ್ಲಿ ಶುಚಿಯಾಗಿಲ್ಲದ ಆಹಾರವನ್ನು ವಿತರಿಸಿದ ಮಹಿಳೆಯೊಬ್ಬರ ವಿಡಿಯೋವನ್ನು, ಭಾರತದ ಮುಸ್ಲಿಂ ಮಹಿಳೆಯೊಬ್ಬರು ಮಗುವಿನಿಂದ ಮೂತ್ರ ಮಾಡಿಸಿ ಅದೇ ಅಡುಗೆಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಕೋಮು ಮತ್ತು ಸುಳ್ಳು ನಿರುಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಲಿ ನೀಡಲು ಗೋವು ಯೋಗ್ಯವಾದ ಪ್ರಾಣಿ ಎಂದು ಹೇಳಿದ್ರಾ ಪ್ರಧಾನಿ ಮೋದಿ?

