FACT CHECK | ಮೊಸಾದ್ ಏಜೆಂಟ್ ಎಂಬ ಅನುಮಾನದ ಮೇಲೆ ಮುಸ್ಲಿಂ ನಾಗರಿಕರೊಬ್ಬರನ್ನು ಇರಾನ್ ಮಿಸೈಲ್‌ಗೆ ಕಟ್ಟಿ ಸ್ಫೋಟಿಸಿದೆಯೇ?

ಇರಾನ್‌ ತನ್ನ ಒಬ್ಬ ಮುಸ್ಲಿಂ ನಾಗರಿಕನನ್ನು ಬ್ಯಾಲಿಸ್ಟಿಕ್‌ ಮಿಸೈಲ್‌ಗೆ ಕಟ್ಟಿ ಸ್ಫೋಟಿಸಿದೆ ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.  ಒಬ್ಬ ವ್ಯಕ್ತಿಯನ್ನು ಕುರ್ಚಿಯಲ್ಲಿ ಕೂರಿಸಿ ಆತನನ್ನು ಬಳ್ಳಿಯಿಂದ ಕಟ್ಟಲಾಗಿದೆ. ಜೊತೆಗೆ ಆ ಬಳ್ಳಿಯನ್ನು ಅಲ್ಲೆ ಪಕ್ಕದಲ್ಲಿದ್ದ ಕ್ಷಿಪಣಿಗೂ ಸೇರಿಸಲಾಗಿದೆ.

ಈ ಫೋಟೋವನ್ನು ಹಂಚಿಕೊಂಡ ಫೇಸ್​ಬುಕ್ ಬಳಕೆದಾರರು, ‘‘ಇರಾನ್ ತನ್ನ ನಾಗರಿಕರ ಮೇಲೆ ಹೇಗೆ ದಬ್ಬಾಳಿಕೆ ನಡೆಸುತ್ತಿದೆ ನೋಡಿ, ಮೊಸಾದ್ ಏಜೆಂಟ್ ಎಂಬ ಅನುಮಾನದ ಮೇಲೆ ಅದರ ಮುಸ್ಲಿಂ ನಾಗರಿಕರೊಬ್ಬರನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗೆ ಕಟ್ಟಿ ಸ್ಫೋಟಿಸಲಾಯಿತು’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಮೊದಲಿಗೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಫೋಟೋ ನೈಜ್ಯತೆಗೆ ದೂರವಾದಂತಿದೆ. ಬಳ್ಳಿಯಲ್ಲಿ ಕಟ್ಟಿರುವ ವ್ಯಕ್ತಿ ಯಾವುದೇ ನೋವು ಅನುಭವಿಸುದು ಅಥವಾ ಬಿಡಿಸಲು ಪ್ರಯತ್ನಿಸುವುದು ಕಾಣುವುದಿಲ್ಲ. ಅಲ್ಲದೆ ಆತನ ಒಂದು ಕೈ ಮಾತ್ರ ಕಾಣಿಸುತ್ತದೆ. ಇನ್ನು ಕಟ್ಟಿರುವ ಬಳ್ಳಿ ಕೂಡ ವಿರೂಪಗೊಂಡಂತೆ ಕಾಣುತ್ತದೆ.

 

ಹೀಗಾಗಿ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿಸಿರಬಹುದು ಎಂಬ ಅನುಮಾನ ಹುಟ್ಟಿತು. ಹೀಗಾಗಿ ನಾವು ಎಐ ಪತ್ತೆ ಸಾಧನ WasitAI ಮತ್ತು IsitAI ಮೂಲಕ ಪರೀಕ್ಷೆ ನಡೆಸಿದ್ದೇವೆ. WasitAI ಈ ವೈರಲ್ ಫೋಟೋ ಖಚಿತವಾಗಿ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ. ಹಾಗೆಯೆ IsitAI ಈ ಫೋಟೋ ಶೇ. 99 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ.

ಹೀಗಾಗಿ ಮೊಸಾದ್ ಏಜೆಂಟ್ ಎಂದು ಇರಾನ್ ತನ್ನ ಮುಸ್ಲಿಂ ನಾಗರಿಕರೊಬ್ಬರನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗೆ ಕಟ್ಟಿ ಸ್ಫೋಟಿಸಿದೆ ಎಂದು ವೈರಲ್ ಆಗುತ್ತಿರುವ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿತವಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೊಸಾದ್ ಏಜೆಂಟ್ ಎಂದು ಇರಾನ್ ತನ್ನ ಮುಸ್ಲಿಂ ನಾಗರಿಕರೊಬ್ಬರನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗೆ ಕಟ್ಟಿ ಸ್ಫೋಟಿಸಿದೆ ಎಂದು ವೈರಲ್ ಆಗುತ್ತಿರುವ ಫೋಟೋ AI ನಿಂದ ನಿರ್ಮಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಇಸ್ರೇಲ್ ದಾಳಿಗೆ ಹೆದರಿ ಇರಾನ್ ಜನರು ಪಾಕಿಸ್ತಾನಕ್ಕೆ ಹೋಗುತ್ತಿರುವುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights