ಫ್ಯಾಕ್ಟ್‌ಚೆಕ್: ಭಾರತದಲ್ಲಿ ಮೊಸಳೆ ವಿರುದ್ಧ ಹೋರಾಡಿದ ಬಾಲಕ ಎಂಬ ವಿಡಿಯೋ ನಿಜವೇ?

ಚಂಬಲ್ ನದಿಯಲ್ಲಿ ಬಾಲಕನೊಬ್ಬ ಮುಳುಗುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತದ ಚಂಬಲ್ ನದಿಯಲ್ಲಿ ಮುಳುಗುತ್ತಿದ್ದ ಹುಡುಗನನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದ ವೀಡಿಯೊ ಎಂದು ವಿಡಿಯೊವನ್ನು ವೈರಲ್ ಮಾಡಲಾಗಿದೆ.

” ಮೊಸಳೆಗಳಿಂದ ತುಂಬಿದ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಸಿರು ಬಿಗಿಹಿಡಿಯುವ ವೀಡಿಯೊವು ದೋಣಿಯಲ್ಲಿದ್ದ ರಕ್ಷಣಾ ತಂಡವು ಬಾಲಕನ ಸಮೀಪಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ.”

https://twitter.com/upcopsachin/status/1562696753270628352

ಇದೇ ವೇಳೆ ಮೊಸಳೆಗಳು ಸಹ ಬಾಲಕನನ್ನು ಸುತ್ತುತ್ತಿರುವುದನ್ನು ಸಹ ನೀವು ನೋಡಬಹುದು. ಹುಡುಗನು ಭಯಗೊಂಡರು ಧೈರ್ಯದಿಂದ ಹೋರಾಡಿದ್ದಾನೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆಯು ಚಂಬಲ್ ನದಿಯ ತೀರದಲ್ಲಿ ನಡೆದಿದೆ ಎನ್ನಲಾಗಿದೆ. ಹಾಗಿದ್ದರೆ ಈ ವೈರಲ್ ವಿಡಿಯೊದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

IRS ಅಧಿಕಾರಿ ಡಾ ಭಗೀರತ್ ಚೌಧರಿ ಸೇರಿದಂತೆ ಅನೇಕರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಂತರ, NDTV, DNA, the Navbharat Times, CNN-News18, Latestly, the Free Press Journal, ಮತ್ತು India Today ಮುಂತಾದ ಸುದ್ದಿವಾಹಿನಿಗಳು ಇದೇ ಕಥೆಯನ್ನು ವರದಿ ಮಾಡಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಹುಡುಗನೊಬ್ಬ ಮುಳುಗುತ್ತಿರುವ ವಿಡಿಯೋವನ್ನ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ತಂಡ ವೈರಲ್ ಸುದ್ದಿಯು ತಪ್ಪುದಾರಿಗೆಳೆಯುವಂತಿದೆ ಎಂದು ವರದಿ ಮಾಡಿದೆ. ವೈರಲ್ ವಿಡಿಯೋ ಚಂಬಲ್ ನದಿಯದ್ದೇ ಎಂದು ಪರಿಶೀಲಿಸಿರುವ ಇಂಡಿಯಾ ಟುಡೇ ವೀಡಿಯೊವು ಸುಮಾರು ಒಂದು ವರ್ಷದ ಹಳೆಯದು ಮತ್ತು ಭಾರತದಲ್ಲ ಎಂದು ಕಂಡುಹಿಡಿದಿದೆ. ಈ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಜೂನ್ 19 ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಕ್ಲಿಪ್‌  ಲಭ್ಯವಾಗಿದ್ದು ವೀಡಿಯೊವನ್ನು ಬಾಂಗ್ಲಾದೇಶದ ಸಿಲ್ಹೆಟ್‌ಗೆ ಜಿಯೋಟ್ಯಾಗ್ ಮಾಡಲಾಗಿದೆ. ಆದರೆ, ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ.

ಮುಳುಗುತ್ತಿದ್ದ ಬಾಲಕನನ್ನು ಮೇಲೆತ್ತಲು ಸಹಾಯ ಮಾಡಿದ ವ್ಯಕ್ತಿ ಬಾಂಗ್ಲಾದೇಶದ ಜನಪ್ರಿಯ ಉಡುಗೆಯಾದ ಲುಂಗಿಯನ್ನು ಧರಿಸಿರುಉದನ್ನು ಕಾಣಬಹುದಾಗಿದೆ. ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸರಿಯಾದ ಸಮವಸ್ತ್ರವಿಲ್ಲದೆ ಇಂತಹ ಕಾರ್ಯಾಚರಣೆ ನಡೆಸುವ ಸಾಧ್ಯತೆಯೂ ತೀರಾ ಕಡಿಮೆ.

ಮತ್ತಷ್ಟು ಸರ್ಚ್ ಮಾಡಿದಾಗ 27 ಆಗಸ್ಟ್ 2021 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಲಭ್ಯವಾಗಿದೆ. ಇದೇ ರೀತಿ ನೀರಿನಲ್ಲಿ ಮುಳುಗುತ್ತಿರುವ ಹುಡುಗನನ್ನು ದೋಣಿಯಲ್ಲಿ ಬಂದು ರಕ್ಷಿಸುವುದನ್ನು ತೋರಿಸಿದೆ. ಪದ್ಮ ಮತ್ತು ಮೇಘನಾ ನದಿಗಳು ಬಂಗಾಳಕೊಲ್ಲಿಯನ್ನು ಸಂಧಿಸುವ ಚಂದ್‌ಪುರ ಕೊಲ್ಲಿಯ ಘಟನೆ ಎಂದು ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಎರಡು ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎರಡೂ ವಿಡಿಯೋಗಳು ಒಂದೇ ಘಟನೆಗೆ ಸಂಬಂಧಿಸಿದೆ ಎಂದು ಸ್ಪಷ್ಟವಾಗುತ್ತದೆ. ಆದರೆ ಇದು 2021 ರಲ್ಲಿ ನಡೆದ ಘಟನೆ ಎಂದು ಹೇಳಲಾಗಿದೆ.

ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಇಂಡಿಯಾ ಟುಡೆ ಬಾಂಗ್ಲಾದೇಶ ಮೂಲದ ಪತ್ರಕರ್ತ ಮೊಹಮ್ಮದ್ ಹುಸೇನ್ ತಾರೆಕ್ (http://bitly.ws/tIra) ಅವರನ್ನು ಸಂಪರ್ಕಿಸಿದ್ದು, ಅವರು ಇಂಡಿಯಾ ಟುಡೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಘಟನೆಯು  ಒಂದು ವರ್ಷ ಹಳೆಯದು ಮತ್ತು ಚಂದ್‌ಪುರದಿಂದ ಎಂದು AFWA ಗೆ ದೃಢಪಡಿಸಿದ್ದಾರೆ. “ಈ ಸ್ಥಳವನ್ನು ಹಿಲ್ಸಾ ಅಭಯಾರಣ್ಯ ಎಂದು ಕರೆಯಲಾಗುತ್ತದೆ. ಬಾಂಗ್ಲಾದೇಶದ ಅತ್ಯುತ್ತಮ ಗುಣಮಟ್ಟದ ಹಿಲ್ಸಾ ಮೀನುಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ, ಈ ಸ್ಥಳವು ಸಮುದ್ರದ ಸಮೀಪದಲ್ಲಿರುವುದರಿಂದ, ಇಲ್ಲಿ ನೀರಿನ ಸೆಳೆತ ಹೆಚ್ಚಾಗಿರುತ್ತದೆ, ಇದರ ಪರಿಣಾಮವಾಗಿ  ಇದೇ ರೀತಿಯ ಘಟನೆಗಳು ಸಂಭವಿಸುತ್ತವೆ,” ಎಂದು ತಾರೆಕ್ ತಿಳಿಸಿದ್ದಾರೆ.

ಹುಡುಗನ ಹಿಂದೆ ಮೊಸಳೆ ಇತ್ತೇ?

ಹುಡುಗನ ಸುತ್ತಲೂ ಮೊಸಳೆಗಳು ಸುತ್ತುತ್ತಿದ್ದವು ಎಂದು ವೈರಲ್ ವಿಡಿಯೊದಲ್ಲಿ ಹೇಳಲಾಗಿತ್ತು, ಆದರೆ ಯೂಟ್ಯೂಬ್ ವಿಡಿಯೋದಲ್ಲಿ ಮೊಸಳೆಗಳು ಕಾಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ  ಬಾಂಗ್ಲಾದೇಶದ ಚಂದ್‌ಪುರ ಜಿಲ್ಲೆಯ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮೊಸಳೆಗಳಿದ್ದವು ಎನ್ನುವ ವಾದವನ್ನು ತಳ್ಳಿಹಾಕಿದ್ದಾರೆ ಮತ್ತು “ಮುಖ್ಯವಾಗಿ ಇದು ಒಂದು ವರ್ಷದ ಹಿಂದಿನ ಘಟನೆ ಎಂದಿದ್ದಾರೆ. ಕೆಲವರು ಹಿಲ್ಸಾ ಮೀನು ಹಿಡಿಯಲು ನೀರಿಗೆ ಇಳಿದು ಈ ರೀತಿ ತೊಂದರೆಗೆ ಒಳಗಾಗುತ್ತಾರೆ” ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಒಂದು ವರ್ಷದ ಹಳೆಯ  ವೀಡಿಯೊವನ್ನು ಭಾರತದ ಚಂಬಲ್ ನದಿಯಲ್ಲಿ ಮುಳುಗುತ್ತಿದ್ದ ಹುಡುಗನನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಸು ಕದ್ದಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿಸಿ ಹತ್ಯೆ ಎಂದು ಹರಿಯಾಣದ ವಿಡಿಯೋ ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights