FACT CHECK | 85 ವರ್ಷದ ವೃದ್ದನ ಮೇಲೆ ಹಸುಗಳು ದಾಳಿ ಮಾಡಿ ಕೊಂದ ಘಟನೆ ನಡೆದಿದ್ದು ತಿರುಪತಿಯಲ್ಲಿ ಅಲ್ಲ

ವ್ಯಕ್ತಿಯೊಬ್ಬನ ಮೇಲೆ ಹಸುಗಳು ದಾಳಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ತಿರುಪತಿಯಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ತಿರುಪತಿಯಲ್ಲಿ ಹಸುಗಳು ವ್ಯಕ್ತಿಯ ಮೇಲೆ ದಾಳಿ ಮಾಡುವ ದೃಶ್ಯಗಳು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಕೆಲವರು ಇದು ತಿರುಪತಿಯಲ್ಲಿ ನಡೆದ ಘಟನೆಯಲ್ಲ ಎಂದು ಕಮೆಂಟ್‌ ಮಾಡಿದ್ದಾರೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು,  ಈ ವಿಡಿಯೋ ದೃಶ್ಯಾವಳಿಗಳು ಎಲ್ಲಿ ನಡೆದಿದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ,  24 ಜೂನ್ 2025 ರಂದು ಮರಾಠಿ ಮಾಧ್ಯಮ ಸಂಸ್ಥೆ ‘ಲೋಕಸತ್ತ‘ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವೀಡಿಯೊದಲ್ಲಿನ ದೃಶ್ಯಗಳನ್ನು ವರದಿ ಮಾಡುವ ಲೇಖನ ಕಂಡುಬಂದಿದೆ. ಈ ಲೇಖನದ ಪ್ರಕಾರ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ 85 ವರ್ಷದ ವ್ಯಕ್ತಿಯ ಮೇಲೆ ಹಸುಗಳು ದಾಳಿ ಮಾಡಿ ಕೊಂದ ಘಟನೆಯನ್ನು ಈ ವೀಡಿಯೊ ತೋರಿಸುತ್ತದೆ.

ಇದರ ಆಧಾರದ ಮೇಲೆ, ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಈ ಘಟನೆಗೆ ಸಂಬಂಧಿಸಿದ ಹಲವಾರು ಸುದ್ದಿ ಲೇಖನಗಳು ಲಭ್ಯವಾಗಿವೆ. (ಇಲ್ಲಿ, ಇಲ್ಲಿ, ಇಲ್ಲಿ).

ಈ ಲೇಖನಗಳ ಪ್ರಕಾರ, ಈ ಘಟನೆ ಜೂನ್ 23, 2025 ರಂದು ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದ ಓಲ್ಡ್ ಓತೂರ್ ರಸ್ತೆಯಲ್ಲಿರುವ ಕಲ್ವಾನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ಮುಂದೆ ನಡೆದಿದೆ. ಕಲ್ವಾನ್‌ನ ಛತ್ರಪತಿ ಶಿವಾಜಿ ನಗರದ ನಿವಾಸಿ ಭಲಚಂದ್ರ ರಘುನಾಥ್ ಮಲ್ಪುರೆ (85) ತನ್ನ ದ್ವಿಚಕ್ರ ವಾಹನದಿಂದ ಇಳಿದ ತಕ್ಷಣ, ಕೋಪಗೊಂಡ ಎರಡು ಹಸುಗಳು ಇದ್ದಕ್ಕಿದ್ದಂತೆ ಅವರ ಮೇಲೆ ದಾಳಿ ಮಾಡಿ ನೆಲಕ್ಕೆ ಬೀಳಿಸಿವೆ. ಉದ್ರಿಕ್ತ ಹಸುಗಳು ತನ್ನ ಕೊಂಬುಗಳಿಂದ ತಿವಿಯಲು ಪ್ರಾರಂಭಿಸಿದಾಗ, ಹತ್ತಿರದಲ್ಲಿದ್ದ ಜನರು ಕೋಲು ಮತ್ತು ಕಲ್ಲುಗಳಿಂದ ಹಸುಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ, ಆದರೆ ಹಸುಗಳನ್ನು ನಿಯಂತ್ರಿಸಲಾಗದೆ ಅವನ ಮೇಲೆ ದಾಳಿ ಮಾಡುತ್ತಲೇ ಇದ್ದವು. ಕೊನೆಗೆ, ಅವರು ಹೇಗೋ ವೃದ್ಧನನ್ನು ಪಕ್ಕಕ್ಕೆ ಎಳೆಯುವಲ್ಲಿ ಯಶಸ್ವಿಯಾದರು.

ಆದರೂ, ಹಸುಗಳು ವೃದ್ದ ವ್ಯಕ್ತಿಯನ್ನು ಬಿಡದೆ ಮತ್ತೆ ದಾಳಿ ಮಾಡಲು ಪ್ರಯತ್ನಿಸಿದವು. ಈ ಪ್ರಕ್ರಿಯೆಯಲ್ಲಿ, ದಾರಿಯಲ್ಲಿ ಬಂದ ಇನ್ನೊಬ್ಬ ವ್ಯಕ್ತಿಯ ಮೇಲೂ ಅವು ದಾಳಿ ಮಾಡಿದವು. ನಂತರ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾಲ್ಪುರೆಯನ್ನು ಚಿಕಿತ್ಸೆಗಾಗಿ ಹತ್ತಿರದ ಕಲ್ವಾನ್ ಗ್ರಾಮೀಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು. ಮಾಲ್ಪುರೆಯನ್ನು ಉಳಿಸಲು ಪ್ರಯತ್ನಿಸಿದ ಅಬಾ ಮೋರೆ ಎಂಬ ವ್ಯಕ್ತಿ ಕೂಡ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಗಳಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನಾಸಿಕ್ ಜಿಲ್ಲೆಯ ಕಲ್ವಾನ್ ಪಟ್ಟಣದಲ್ಲಿ ವೃದ್ಧ ವ್ಯಕ್ತಿಯೊಬ್ಬರ ಮೇಲೆ ಹಸುಗಳು ದಾಳಿ ಮಾಡಿ ಕೊಂದ ಘಟನೆಯನ್ನು ತಿರುಪತಿಯಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿಯ ಗಡ್ಡವನ್ನೆಳೆದು ಹಲ್ಲೆ ಮಾಡಿದ ವ್ಯಕ್ತಿ ಹಿಂದೂ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights