FACT CHECK | ಚಂದ್ರಶೇಖರ್ ಆಜಾದ್ ರಾವಣ ಬೆಂಬಲಿಗರನ್ನು ಬಂಧಿಸಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಪ್ರಯಾಗ್‌ರಾಜ್‌ನಲ್ಲಿ ಗಲಭೆ ನಡೆಸಿದ ಚಂದ್ರಶೇಖರ ರಾವಣ ಬೆಂಬಲಿಗರ ವಿರುದ್ಧ ಯುಪಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ’’ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ, 2025 ರ ಜೂನ್ 19 ರಂದು ಪ್ರಯಾಗ್‌ರಾಜ್ ಗಲಭೆಯ ಸಮಯದಲ್ಲಿ ಗಲಭೆ ನಡೆಸಿದ ಚಂದ್ರಶೇಖರ್ ಆಜಾದ್ ಅವರ ಬೆಂಬಲಿಗರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಪೊಲೀಸರು ಕೆಲವು ಗಾಯಗೊಂಡ ಯುವಕರನ್ನು ಕರೆದೊಯ್ಯುತ್ತಿರುವುದನ್ನು ಕಾಣಬಹುದು. ಈ ಯುವಕರ ಕೈ ಮತ್ತು ತಲೆಗೆ ಬ್ಯಾಂಡೇಜ್ ಕಟ್ಟಲಾಗಿದೆ. ನಾಲ್ವರೂ ಸರಿಯಾಗಿ ನಡೆಯಲು ಸಾಧ್ಯವಾಗದೆ ಕುಂಟುತ್ತಾ ನಡೆಯುತ್ತಿರುವುದನ್ನು ಕಾಣಬಹುದು.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ್ ಬಳಸಿ ವಿಡಿಯೋವನ್ನು ಸರ್ಚ್ ಮಾಡಿದಾಗ, ಜೂನ್ 5 ರಂದು ಹಲವು ಪೋಸ್ಟ್‌ಗಳಲ್ಲಿ ಇದು ಕಂಡುಬಂದಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ ಈ ಘಟನೆ ಶ್ರೀ ಗಂಗಾನಗರದ್ದು ಎಂದು ಹೇಳಲಾಗಿದೆ. ಪೊಲೀಸರು ಶ್ರೀ ಗಂಗಾನಗರದಲ್ಲಿ ನಾಲ್ವರು ಸುಲಿಗೆಕೋರರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ ಎಂದು ಬರೆಯಲಾಗಿದೆ. ಈ ದುಷ್ಕರ್ಮಿಗಳು ದರೋಡೆಕೋರರ ಹೆಸರಿನಲ್ಲಿ ಉದ್ಯಮಿಯಿಂದ ಸುಲಿಗೆಗೆ ಬೇಡಿಕೆ ಇಡುತ್ತಿದ್ದರು.

ಇದೇ ವೇಳೆ ಈ ಘಟನೆಯ ಕುರಿತು Patrika.com ನ ಶ್ರೀ ಗಂಗಾನಗರ ನಗರ ಆವೃತ್ತಿಯಲ್ಲಿ ಜೂನ್ 5, 2025 ರಂದು ಪ್ರಕಟಿಸಲಾದ ಸುದ್ದಿ ವರದಿಯನ್ನು ನಾವು ಕಂಡುಕೊಂಡೆವು. ಜೊತೆಗೆ ನ್ಯೂಸ್ 18 ರಾಜಸ್ಥಾನದ ವರದಿ ಕೂಡ ಸಿಕ್ಕಿತು. ಈ ಸುದ್ದಿಗಳಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಆರೋಪಿಗಳನ್ನು ಕಾಣಬಹುದು.

ವರದಿಯ ಪ್ರಕಾರ, ‘‘ಶ್ರೀ ಗಂಗಾನಗರ ಜಿಲ್ಲಾ ಪೊಲೀಸರು ದರೋಡೆಕೋರರಂತೆ ನಟಿಸಿ ಉದ್ಯಮಿಯಿಂದ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಿಂದ 5 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಬಲೆ ಬೀಸಿ ಉದ್ಯಮಿಯ ಲೆಕ್ಕಪರಿಶೋಧಕ ಮತ್ತು ಸೋದರಳಿಯ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದರು. ಆರೋಪಿಗಳು ಐಷಾರಾಮಿ ಕಾರಿನಲ್ಲಿ ಬಂದು ಹಣವನ್ನು ಸಂಗ್ರಹಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಅಂತರರಾಷ್ಟ್ರೀಯ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಲೆಕ್ಕಪರಿಶೋಧಕ ಈ ಯೋಜನೆಯನ್ನು ರೂಪಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೌರವ್ ಯಾದವ್ ನೇತೃತ್ವದ ಕಾರ್ಯಾಚರಣೆಯಲ್ಲಿ ಸುಲಿಗೆ ಮಾಡಿದ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.

ಗಂಗಾನಗರ ಪೊಲೀಸರು ಕೂಡ ತಮ್ಮ ಎಕ್ಸ್ ಹ್ಯಾಂಡಲ್‌ನಿಂದ ಈ ವಿಷಯದ ಬಗ್ಗೆ ಪ್ರಕಟವಾದ ಸುದ್ದಿಯನ್ನು ಸಹ ಹಂಚಿಕೊಂಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಮಿನಲ್ ಗ್ಯಾಂಗ್‌ನ ಬಂಧನವನ್ನು ತೋರಿಸುವ ರಾಜಸ್ಥಾನದ ವೀಡಿಯೊವನ್ನು ತಪ್ಪಾಗಿ ಲಿಂಕ್ ಮಾಡಿ ಸಂಸದ ಚಂದ್ರಶೇಖರ ರಾವಣ ಮತ್ತು ಅವರ ಬೆಂಬಲಿಗರದ್ದು ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ . ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾದ ಸೇತುವೆ ಎಂದು ಸಿಂಗಾಪುರದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights