FACT CHECK | ಮತ ಕಳ್ಳತನ ವಿರುದ್ಧದ ರ್‍ಯಾಲಿಯಲ್ಲಿ ಬಿಜೆಪಿ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ರಾ ಶಾಲಾ ಮಕ್ಕಳು
ಮತ ಕಳ್ಳತನ ವಿರುದ್ಧದ ರ್‍ಯಾಲಿಯ ಸಮಯದಲ್ಲಿ, ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, ಹಳದಿ ಶಾಲಾ ಬಸ್‌ನಲ್ಲಿ ಕುಳಿತಿದ್ದ ಮಕ್ಕಳು ಪಕ್ಕದಲ್ಲಿ ಸಾಗುತ್ತಿದ್ದ ರ್ಯಾಲಿಯನ್ನು ನೋಡಿ ನಂತರ ಬಿಜೆಪಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಾಣಬಹುದು. ರ್ಯಾಲಿಯನ್ನು ನಡೆಸುತ್ತಿರುವ ಕೆಲವರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಸಹ ಕೇಳಿಬರುತ್ತಿದೆ.

ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮತ ಕಳ್ಳತನದ ವಿರುದ್ಧ ರ್ಯಾಲಿ ನಡೆಯುತ್ತಿತ್ತು ಶಾಲಾ ಬಸ್‌ನಲ್ಲಿ ಕುಳಿತಿದ್ದ ಮಕ್ಕಳು ಬಿಜೆಪಿ ಜಿಂದಾಬಾದ್ ಮೋದಿ ಜಿ ಜಿಂದಾಬಾದ್ ಅವರ ಘೋಷಣೆಗಳನ್ನು ಕೂಗಿದರು ಮತಗಳನ್ನು ಹೇಗೆ ಕಳವು ಮಾಡಲಾಗುತ್ತದೆ. ನೋಡಿ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀ ಫ್ರೇಮ್ಗಳನ್ನು ಗೂಗಲ್ ಲೆನ್ಸ್ನಲ್ಲಿ ಮಾಡಿದಾಗ, ಈ ವೀಡಿಯೊವನ್ನು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರ ಎಕ್ಸ್ ಹ್ಯಾಂಡಲ್‌ನಿಂದ 22 ನವೆಂಬರ್ 2022 ರಂದು ಪೋಸ್ಟ್ ಮಾಡಿರುವುದು ಕಂಡುಬಂತು.
ಪೋಸ್ಟ್‌ನ ಶೀರ್ಷಿಕೆಯಲ್ಲಿ, “ಸಿಲಿಗುರಿಯಲ್ಲಿ ಟಿಎಂಸಿ ರ್ಯಾಲಿಯನ್ನು ನೋಡಿದ ನಂತರ ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗಿದರು. ಅವರು ಕೇವಲ ಶಾಲಾ ಮಕ್ಕಳು, ಯಾರೂ ಅವರಿಗೆ ಘೋಷಣೆಗಳನ್ನು ಕೂಗಲು ಕಲಿಸಿಲ್ಲ, ಮತ್ತು ಅವರು ಇನ್ನೂ ಮತದಾನದ ವಯಸ್ಸಾಗಿಲ್ಲ” ಎಂದು ಬರೆಯಲಾಗಿದೆ. ಹೀಗಾಗಿ ಈ ವೀಡಿಯೊ ಸುಮಾರು ಮೂರು ವರ್ಷ ಹಳೆಯದು ಮತ್ತು ಇತ್ತೀಚಿನ ಮತ ಕಳ್ಳತನ ವಿವಾದಕ್ಕೆ ಸಂಬಂಧಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು.
1.1 School children raised BJP Zindabad slogans after seeing TMC rally in Siliguri.
They are school children, no one has taught them how to raise slogans, they are not even old enough to vote. pic.twitter.com/CpQMhcw5cj— Dilip Ghosh (Modi Ka Parivar) (@DilipGhoshBJP) November 22, 2022
ಇದೇವೇಳೆ, 22 ನವೆಂಬರ್ 2022 ರಂದು ಪಶ್ಚಿಮ ಬಂಗಾಳ ಬಿಜೆಪಿಯ ಎಕ್ಸ್ ಖಾತೆಯಲ್ಲಿ ಕೂಡ ನಮಗೆ ಇದೇ ವೈರಲ್ ವೀಡಿಯೊ ಸಿಕ್ಕಿದೆ. ಇಲ್ಲಿಯೂ ಸಹ, ಈ ವೀಡಿಯೊ ಸಿಲಿಗುರಿಯದ್ದಾಗಿದೆ ಎಂದು ಹೇಳಲಾಗಿದೆ.
Kalimpong Online News ಎಂಬ ವೆಬ್ಸೈಟ್ನಲ್ಲಿ ಕೂಡ ನ. 22 2022 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿ ಆಗಿರುವುದು ನಮಗೆ ಕಂಡುಬಂದಿದ್ದು, ‘‘ಸಿಲಿಗುರಿಯಲ್ಲಿ ಆಡಳಿತಾರೂಢ ಟಿಎಂಸಿ ನಿನ್ನೆ ಆಯೋಜಿಸಿದ್ದ ಸಾರ್ವಜನಿಕ ರ್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಶಾಲಾ ಮಕ್ಕಳ ಗುಂಪೊಂದು “ಬಿಜೆಪಿ ಜಿಂದಾಬಾದ್” ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ಕ್ಲಿಪ್ ಅನ್ನು ಪ್ರದರ್ಶಿಸುವ ಮೂಲಕ ಈ ಪ್ರದೇಶದ ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. “ಬಂಗಾಳವನ್ನು ವಿಭಜಿಸುವ ಪ್ರಯತ್ನಗಳನ್ನು” ವಿರೋಧಿಸಿ ಟಿಎಂಸಿ ನಿನ್ನೆ ರ್ಯಾಲಿಯನ್ನು ನಡೆಸಿ ಸಾರ್ವಜನಿಕ ಸಭೆ ನಡೆಸಿತು.’’ ಎಂಬ ಮಾಹಿತಿ ಇದರಲ್ಲಿದೆ.
ತನಿಖೆಯ ಸಮಯದಲ್ಲಿ, ಈ ವೀಡಿಯೊ 23 ನವೆಂಬರ್ 2022 ರಂದು ನ್ಯೂಸ್ 18 ಬಾಂಗ್ಲಾ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಕಂಡುಬಂದಿದೆ. ಈ ವೀಡಿಯೊದ ಶೀರ್ಷಿಕೆಯು, ‘‘ಸಿಲಿಗುರಿಯ ಶಾಲಾ ಮಕ್ಕಳು ನಗರದಲ್ಲಿ ತೃಣಮೂಲ ಕಾಂಗ್ರೆಸ್ ನಡೆಸಿದ ರ್ಯಾಲಿಯನ್ನು ವೀಕ್ಷಿಸಿದ ನಂತರ ಬಿಜೆಪಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು’’ ಎಂದು ಹೇಳುತ್ತದೆ. ಆದಾಗ್ಯೂ, ವೀಡಿಯೊದ ಶೀರ್ಷಿಕೆಯಲ್ಲಿ ಮತ ಕಳ್ಳತನದ ವಿಷಯವನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಪಶ್ಚಿಮ ಬಂಗಾಳದ್ದಾಗಿದ್ದು, ಸುಮಾರು ಮೂರು ವರ್ಷ ಹಳೆಯದು ಎಂಬುದು ಸ್ಪಷ್ಟವಾಗಿದೆ. ಇತ್ತೀಚಿನ ಮತ ಕಳ್ಳತನ ವಿವಾದಕ್ಕು ಇದಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂಗಳ ಕೈ ಕಾಲು ಕಟ್ಟಿ ಮುಸ್ಲಿಮರು ಹಲ್ಲೆ ಮಾಡಿದ್ದು ನಿಜವೇ?

