ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ : ಐದು ದಿನಗಳ ಕಾಲ ಕಠಿಣ ನಿರ್ಬಂಧ ಜಾರಿ!

ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಗೆ ನಿರ್ಧರಿಸಲಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.

ಗದಗ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಮಾತನಾಡಿದ ಸಚಿವ ಸಿ ಸಿ ಪಾಟೀಲ್, “ಮೇ. 27 ರ ಬೆಳಿಗ್ಗೆ 10 ಗಂಟೆಯಿಂದ ಜೂನ್ 1 ನೇ ತಾರೀಖಿನ ಬೆಳಿಗ್ಗೆ 6 ಗಂಟೆಯವರೆಗೆ ಕಠಿಣ ಲಾಕ್ ಡೌನ್ ಜಾರಿಗೆ ತರಲು ಆದೇಶಿಸಲಾಗಿದೆ. ಈ ಅವಧಿಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗದಿದ್ದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

ಜನರ ಸಹಕಾರ ಇದ್ದಾಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ. ಕಠಿಣ ಲಾಕ್ ಡೌನ್ ಸಮಯದಲ್ಲಿ ತರಕಾರಿ ಹಾಗೂ ಹಣ್ಣು ಹೂವು ವ್ಯಾಪಾರಸ್ಥರು ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡಬೇಕು. ಎಲ್ಲಾ ಬಗೆಯ ಮಾರುಕಟ್ಟೆಗಳ ಬಂದ್ ಮಾಡಲಾಗುವುದು. ತಳ್ಳುಗಾಡಿವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ವ್ಯಾಪಾರ ಮಾಡಬೇಕು, ಜನರೂ ಸಹ ಮಾಸ್ಕ್ ಧರಿಸಿಯೇ ಕೊಂಡುಕೊಳ್ಳಬೇಕು. ಹಾಲು ಮಾರಾಟ ಮಾಡುವುದಕ್ಕೆ ಬೆಳಿಗ್ಗೆ 8 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಕಿರಾಣಿ ಸಾಮಾನುಗಳಿಗೆ ಹೋಂ ಡಿಲೆವರಿಗೆ ಮತ್ತು ರೈತಾಪಿ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ರವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಗರ ಹಾಗೂ ಹಳ್ಳಿಗಳಲ್ಲಿಯೂ ಸಹ ಎಲ್ಲಾ ಬಗೆಯ ಹೋಟೆಲ್ ಗಳೂ ಬಂದ್ ಮಾಡಲಾಗುತ್ತದೆ.  ಚಾಲನೆ ಇದ್ದರೆ ಗ್ರಾಮಾಂತರ ಪ್ರದೇಶದಲ್ಲಿ ಪಿಡಿಒ ಇದಕ್ಕೆ ಹೊಣೆಯಾಗುತ್ತಾರೆ. ಮಾತ್ರವಲ್ಲದೇ ಮಾಂಸದಂಗಡಿಗಳು , ಬಾರ್ ಹಾಗೂ ವೈನ್ ಶಾಪ್ ಗೂ ಸಹ 1 ನೇ ತಾರೀಖಿನವರೆಗೂ ಬಂದ್ ಮಾಡಲಾಗುತ್ತದೆ ಎಂದಿದ್ದಾರೆ.

ಜನರಿಗೆ ಡಿಪಾಸಿಟ್ ಹಾಗೂ ಹಣ ತೆಗೆಯಲು ಅವಕಾಶವಿಲ್ಲ. ಆದರೆ ಅಂಚೆ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಕದ ಹಾಕಿಕೊಂಡು ಕಚೇರಿ ಕೆಲಸ ಮಾಡಿಕೊಳ್ಳಬಹುದು.

ಲಸಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ” ಕೋವ್ಯಾಕ್ಸಿನ್ ಎರಡನೇ ಡೋಸ್ ಗೆ ಮಾತ್ರ ಅವಕಾಶವಿದೆ. ಕೋವಿಶೀಲ್ಡ್ ಗೆ 12 ರಿಂದ 16 ವಾರವಾಗಿದ್ದರೆ ಎರಡನೇ ಡೋಸ್ ಗೆ ಅವಕಾಶ ಮಾಡಿಕೊಡಲಾಗುವುದು. ಅನಾವಶ್ಯಕವಾಗಿ ವಾಹನಗಳು ಬಂದರೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದಿದ್ದಾರೆ.

ಇನ್ನೂ ಮದುವೆ ಸೇರಿದಂತೆ ಎಲ್ಲಾ ಶುಭ ಕಾರ್ಯಗಳಿಗೂ ಕಡಿವಾಣ ಹಾಕಲಾಗಿದೆ. ಪೂರ್ವ ನಿಗದಿತ ಮದುವೆಗೆಳಿಗೆ ಷರತ್ತಿಗೊಳಪಟ್ಟು ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ.

ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ಜನರು ಬರುತ್ತಿರುವ ಹಿನ್ನೆಲೆ ಕೊರೊನಾ ಹೆಚ್ಚಳದ ಸಂಭವವಿದೆ.  ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಗೆ ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ತಹಬದಿಗೆ ಬರುತ್ತಿದೆ.  ಹೀಗಾಗಿ ಮುನ್ನೆಚ್ಚರಿಕೆ ಕ್ರಮದ ಅಂಗವಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲಾಗುತ್ತಿದೆ ಎಂದಿದ್ದಾರೆ.

Spread the love

Leave a Reply

Your email address will not be published. Required fields are marked *