Categories
Breaking News National Political

ಸೆಣಬಿನ ಉದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ…

ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ಮಹತ್ವದ ವಿಷ್ಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. 15 ನೇ ಹಣಕಾಸು ಆಯೋಗದ ಅವಧಿಯನ್ನು 12 ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ. ಸೆಣಬಿನ ಉದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಆರ್ಥಿಕ ನಷ್ಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಣಕಾಸು ಆಯೋಗದ ಅವಧಿಯನ್ನು 12 ತಿಂಗಳಿಗೆ ವಿಸ್ತರಿಸಲಾಗಿದೆ. ಹಣಕಾಸು ಆಯೋಗವು ಅಕ್ಟೋಬರ್ 30ರೊಳಗೆ ತನ್ನ ವರದಿಯನ್ನು ನೀಡಬೇಕಾಗಿತ್ತು. ಕೆಲ ದಿನಗಳ ಹಿಂದೆ ಸರ್ಕಾರ ಈ ದಿನಾಂಕವನ್ನು ನವೆಂಬರ್ 30ಕ್ಕೆ ಮುಂದೂಡಿಕೆ ಮಾಡಿತ್ತು.

ಎಲ್ಲಾ ಧಾನ್ಯಗಳ ಶೇಕಡಾ 100ರಷ್ಟು ಪ್ಯಾಕೇಜಿಂಗ್‌ನಲ್ಲಿ ಸೆಣಬಿನ ಚೀಲಗಳನ್ನು ಬಳಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಸಿಇಎ ಶೇಕಡಾ 100 ರಷ್ಟು ಧಾನ್ಯಗಳು ಮತ್ತು ಶೇಕಡಾ 20ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ಕಡ್ಡಾಯವಾಗಿ ಪ್ಯಾಕ್ ಮಾಡಲು ಅನುಮೋದಿಸಿದೆ.

ಸರ್ಕಾರದ ಈ ನಿರ್ಧಾರದಿಂದ ಸೆಣಬಿನ ಉದ್ಯಮಕ್ಕೆ ಉತ್ತೇಜನ ಸಿಗಲಿದೆ. ಕಚ್ಚಾ ಸೆಣಬಿನ ಗುಣಮಟ್ಟ ಮತ್ತು ಉತ್ಪಾದಕತೆ ಹೆಚ್ಚಾಗಲಿದೆ. ಸೆಣಬಿನ ಉದ್ಯಮದಲ್ಲಿ ಸುಮಾರು 3.7 ಲಕ್ಷ ಜನರು ಕೆಲಸ ಮಾಡುತ್ತಾರೆ. ಲಕ್ಷಾಂತರ ರೈತ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಸೆಣಬಿನ ಹೊಲಗಳನ್ನು ಅವಲಂಬಿಸಿವೆ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದಲ್ಲದೆ ತ್ರಿಪುರ ವಿಮಾನ ನಿಲ್ದಾಣಕ್ಕಾಗಿ ಸೆರಿಮೋನಿಯಲ್ ಲೌಂಜ್ ಗೆ ಭೂಮಿ ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಸಿಕ್ಕಿಂ ಗಣಿಗಾರಿಕೆ ನಿಗಮದ ಬಾಕಿ ಇರುವ 4 ಕೋಟಿಗಿಂತ ಹೆಚ್ಚಿನ ಸಾಲ ಮರುಪಾವತಿ ಮತ್ತು ಬಡ್ಡಿಗೆ ವಿನಾಯಿತಿ ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

Categories
Breaking News District National Political State

ಅನರ್ಹ ಶಾಸಕರ ಭವಿಷ್ಯ ಇಂದು ನಿರ್ಧಾರ : ಎಲ್ಲರ ಚಿತ್ತ ಸುಪ್ರೀಂಕೋರ್ಟ್ ತೀರ್ಪಿನತ್ತ

ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ.

ಬೆಳಗ್ಗೆ 10.30ರಿಂದ 11ರೊಳಗೆ ತೀರ್ಪು ಪ್ರಕಟಗೊಳ್ಳಲಿದೆ. ಈಗಾಗಲೇ ಅನರ್ಹ ಶಾಸಕರಾದ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವನಾಥ್, ರೋಷನ್ ಬೇಗ್, ಆರ್ ಶಂಕರ್ ಸೇರಿ ಇನ್ನು ಹಲವರು ದೆಹಲಿ ತಲುಪಿದ್ದು, ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ಇವರೆಲ್ಲರಿಗೂ ಡಿಸಿಎಂ ಅಶ್ವಥ್ ನಾರಾಯಣ ಸಾಥ್ ನೀಡಿದ್ದಾರೆ.

ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಭಯ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಶಾಸಕರು ನೀಡಿರುವ ರಾಜೀನಾಮೆ ಸಕಾರಣದಿಂದ ಕೂಡಿಲ್ಲ ಎಂಬ ಕಾರಣ ನೀಡಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿ ಜುಲೈ 28ರಂದು ಮಹತ್ವದ ಆದೇಶ ಹೊರಡಿಸಿದ್ದರು. ಸ್ಪೀಕರ್ ಆದೇಶ ಪ್ರಶ್ನಿಸಿ ಎಲ್ಲ ಅನರ್ಹರು ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಪ್ರಕಟಿಸಲಿದೆ. ಹೀಗಾಗಿ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.

 

Categories
Breaking News National Political

ಒಳ್ಳೆ ಸುದ್ದಿ – ಅರ್ಧದಷ್ಟು ಬಾರ್‌ಗಳನ್ನು ಮುಚ್ಚಲು ಆಂಧ್ರ ಸರ್ಕಾರ ನಿರ್ಧಾರ

ಆಂಧ್ರ ಪ್ರದೇಶದ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತರುತ್ತಿದ್ದಾರೆ. ಈಗ ರಾಜ್ಯದಲ್ಲಿ ಅರ್ಧದಷ್ಟು ಬಾರ್‌ಗಳನ್ನು ಮುಚ್ಚಲು ಆಂಧ್ರ ಸರ್ಕಾರ ಮುಂದಾಗಿದೆ.

ಚುನಾವಣೆ ಸಂದರ್ಭದಲ್ಲಿ ಜಗನ್ ಅವರು ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ ಮದ್ಯ ಸಂಪೂರ್ಣವಾಗಿ ನಿಷೇಧ ಮಾಡುವ ಭರವಸೆ ನೀಡಿದ್ದರು. ಈ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಶೇ.20ರಷ್ಟು ಮದ್ಯದಂಗಡಿಗಳನ್ನು ಮುಚ್ಚಿದೆ. ಅಲ್ಲದೆ ಹೊಸ ವರ್ಷದಿಂದ ರಾಜ್ಯದಲ್ಲಿನ ಅರ್ಧದಷ್ಟು ಬಾರ್‌ಗಳ ಮುಚ್ಚಲಾಗುತ್ತದೆ. ಹಾಗೆಯೇ ಬಾರ್ ಕೆಲಸದ ಅವಧಿಯನ್ನೂ ಕೂಡ ಕಡಿಮೆ ಮಾಡುವುದಾಗಿ ಸರ್ಕಾರ ತಿಳಿಸಿದೆ.

ಗುರುವಾರ ನಡೆದ ಸಭೆಯಲ್ಲಿ ಈ ಮಹತ್ತರ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಬಾರ್‌ಗಳ ಸಂಖ್ಯೆ ಕಡಿಮೆ ಮಾಡಲಿದ್ದೇವೆ. ಬಾರ್‌ಗಳ ಕೆಲಸದ ಅವಧಿಯನ್ನು ಕೂಡ ಕಡಿಮೆ ಮಾಡಲಿದ್ದೇವೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದ ತಕ್ಷಣವೇ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ, 2020ರ ಜನವರಿ 1ರಂದು ಈ ಕುರಿತು ಸರ್ಕಾರದ ಪರಿಷ್ಕೃತ ಆದೇಶ ಜಾರಿಯಾಗಲಿದೆ ಎಂದರು.

ಪ್ರಸ್ತುತವಾಗಿ ಆಂಧ್ರಪ್ರದೇಶದಲ್ಲಿ 839 ಬಾರ್‍ಗಳಿವೆ. ಅವುಗಳಲ್ಲಿ 420 ಬಾರ್‌ಗಳನ್ನು ಮುಚ್ಚಲಾಗುತ್ತದೆ. ಬಾರ್‌ಗಳ ಕೆಲಸದ ಅವಧಿ ಬೆಳಗ್ಗೆ 10 ರಿಂದ ರಾತ್ರಿ 12 ರವರೆಗೆ ಇತ್ತು. ಆದರೆ ಈ ಅವಧಿಯನ್ನು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಜೊತೆಗೆ ಜನವರಿಯಿಂದ ಬಾರ್‌ಗಳ ಪರವಾನಗಿ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಆಂಧ್ರ ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ಆಂಧ್ರದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಗೊಂಡರೆ ರಾಜ್ಯದ ಬೊಕ್ಕಸಕ್ಕೆ ಶೇ.9 ಆದಾಯ ನಷ್ಟವಾಗಲಿದೆ.

ಹಾಗೆಯೇ ಯಾವ ಪ್ರದೇಶದಲ್ಲಿ ಸ್ಥಳೀಯರು ಮದ್ಯದಂಗಡಿ ಬಗ್ಗೆ ಆಕ್ಷೇಪಿಸುವುದಿಲ್ಲವೋ ಅಲ್ಲಿ ಮಾತ್ರ ಮದ್ಯದಂಗಡಿಗಳಿಗೆ ಅನುಮತಿ ನೀಡುವಂತೆ ಆಂಧ್ರ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Categories
Breaking News District National Political State

ಮೋದಿ ನಿರ್ಧಾರ: ಅಡಿಕೆ ಬೆಳೆಗಾರರಿಗೆ ಸುಸೈಡ್​ ನೋಟ್​..!

ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡ ನೋಟ್​ ಬ್ಯಾನ್​ ಹಾಗೂ ಜಿಎಸ್​ಟಿಯಂಥಾ ಕೆಲ ನಿರ್ಣಯಗಳು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ.. ಆಟೋಮೊಬೈಲ್​ ಇಂಡಸ್ಟ್ರಿಯಲ್ಲಿ ದುಡಿಯುತ್ತಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಟೆಕ್ಸ್​ಟೈಲ್​ ಇಂಡಸ್ಟ್ರಿ ಸಂಪೂರ್ಣ ನೆಲಕಚ್ಚಿದೆ.. ಸಿಮೆಂಟ್​ ಇಂಡಸ್ಟ್ರಿ, ಸ್ಟೀಲ್​ ಇಂಡಸ್ಟ್ರಿ, ಪೆಟ್ರೋಲಿಯಂ ಇಂಡಸ್ಟ್ರಿ, ಫುಡ್​ ಅಂಡ್​ ಸಾಫ್ಟ್​ವೇರ್​ ಇಂಡಸ್ಟ್ರಿ ಹೀಗೆ ಎಲ್ಲವೂ ನಷ್ಟದ ದಾರಿ ಹಿಡಿದಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಜಾಬ್​ ಕಟಿಂಗ್​ ಆಗುತ್ತಿದೆ. ಮಾಧ್ಯಮ ಕ್ಷೇತ್ರವಂತೂ ಸಂಪೂರ್ಣ ನರಳಿ ಹೋಗಿದೆ. ಇವಿಷ್ಟೇ ಅಲ್ಲ, ಮೋದಿಯ ನಿರ್ಣಯಗಳಿಂದ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಲ್ಲೇ ವಿಜ್ಞಾನಿಗಳ ಸಂಬಳಕ್ಕೆ ಕೊಕ್ಕೆ ಬಿದ್ದಿದೆ. ಹೆಚ್​ಎಎಲ್​ನಂತಾ ಸಂಸ್ಥೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಸಂಬಳ ಹೆಚ್ಚಳ ಮಾಡಿಲ್ಲ, (ಉದ್ಯೋಗಿಗಳು ಪ್ರತಿಭಟನೆ ಮಾಡಿದ್ದಾರೆ). ಹೀಗೆ ಬಿಜೆಪಿಯ ಒಂದೊಂದು ನಿರ್ಣಯಗಳು ದೇಶದ ಜನರ ತುತ್ತು ಅನ್ನಕ್ಕೆ ಕಲ್ಲು ಹಾಕುತ್ತಿವೆ.. ಎಲ್ಲವನ್ನೂ ಹಾಳು ಮಾಡಿದ ಮೋದಿ ಸರ್ಕಾರದ ಕಣ್ಣು ಈಗ ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಮೇಲೂ ಬಿದ್ದಿದೆ..

ಮೋದಿ ಸರ್ಕಾರ ಇದೇ ನವಂಬರ್​ 4ನೇ ತಾರೀಕು ಬ್ಯಾಂಕಾಕ್​ನಲ್ಲಿ RCEP (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ) ಕ್ಕೆ ಸಹಿ ಹಾಕುವ ಚಿಂತನೆಯಲ್ಲಿದೆ. ಆ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದ್ರೆ, ಮಲೆನಾಡಿನ ಅಡಿಕೆ ಬೆಳೆಗಾರರ ಬಾಯಿಗೆ ಮಣ್ಣು ಬಿದ್ದಂತೆಯೇ ಅರ್ಥ. ಯಾಕಂದ್ರೆ, ನಮ್ಮಲ್ಲಿ ಅಡಿಕೆ ಒಂದು ವಾಣಿಜ್ಯ ಬೆಳೆ. ಇಲ್ಲಿನ ರೈತರು ಬಂಡವಾಳ ಹಾಕಿ, ಬೆವರು ಸುರಿಸುತ್ತಾ ಉತ್ತಮ ಬೆಳೆಗಾಗಿ ಹತ್ತು ವರ್ಷಗಳ ಕಾಲ ಉಳುಮೆ ಮಾಡುತ್ತಾರೆ. ಆದರೆ ಚೀನಾ, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಮ್ಯಾನ್ಮಾರ್​ನ ಕಾಡುಗಳಲ್ಲಿ ಅಡಿಕೆ ಹೇರಳಾಗಿ ಕಸ ಬೆಳೆದಂತೆ ಬೆಳೆದು ನಿಂತಿದೆ. ನಮ್ಮಲ್ಲಿ ಕ್ವಾಲಿಟಿ ಕ್ವಿಂಟಾಲ್​ ಅಡಿಕೆಗೆ 30 ರಿಂದ 35 ಸಾವಿರ ರೂಪಾಯಿ. ವಿದೇಶಿ ಅಡಿಕೆಗೆ ಹಿಂದಿನ ಕಾಂಗ್ರೆಸ್​ ಸರ್ಕಾರ 25,100 ರೂಪಾಯಿ ನಿಗದಿ ಮಾಡಿತ್ತು. ಈಗ ಮೋದಿ ಸರ್ಕಾರ RCEPಗೆ ಸಹಿ ಹಾಕಿದರೆ ಯಾವುದೇ ವಿದೇಶಿ ಪಾದಾರ್ಥ ಒಂದೇ ಒಂದು ರೂಪಾಯಿ ತೆರಿಗೆ ಇಲ್ಲದೇ ನೇರವಾಗಿ ಭಾರತೀಯ ಮಾರುಕಟ್ಟೆಯನ್ನ ಪ್ರವೇಶ ಮಾಡಬಹುದು. ಅಲ್ಲಿಗೆ ಕಳಪೆ ಗುಣಮಟ್ಟದ ವಿದೇಶಿ ಅಡಿಕೆ ಕೇವಲ 10 ರಿಂದ 12 ಸಾವಿರಕ್ಕೆ ಭಾರತದ ಮಾರುಕಟ್ಟೆಗೆ ಬಂದು ಬೀಳಲಿದೆ. ಅಲ್ಲಿಗೆ ಕರ್ನಾಟಕದ ಗುಣಮಟ್ಟದ ಅಡಿಕೆಯನ್ನ ಮಾರುಕಟ್ಟೆಯಲ್ಲಿ ಕೇಳುವವರೇ ಇರೋದಿಲ್ಲ..

ಕರ್ನಾಟಕದಲ್ಲಿ ಶಿವಮೊಗ್ಗದಿಂದ ತುಮಕೂರಿನವರೆಗೆ ಅಡಿಕೆ ಬೆಳೆಯುವ ಎಲ್ಲಾ ಪ್ರದೇಶಗಳಲ್ಲೂ ಬಿಜೆಪಿ ಸಂಸದರೇ ಗೆದ್ದು ಬಂದಿದ್ದಾರೆ. ಆದರೆ ಯಾರೊಬ್ಬರಿಗೂ ತಮಗೆ ಮತ ಹಾಕಿದ ಅಡಿಕೆ ಬೆಳೆಗಾರರ ಹಿತ ಕಾಯುವ ಜವಾಬ್ದಾರಿ ಇಲ್ಲ. ರೈತರು ಎದೆ ಮೇಲೆ ಬರೆದಿಟ್ಟುಕೊಳ್ಳಿ, ಅಡಿಕೆ ಬೆಳೆಗಾರರು ಸತ್ತರೂ ಆ ಯಾವೊಬ್ಬ ಸಂಸದ ಕೂಡ ಮೋದಿ ಮುಂದೆ ತುಟಿ ಬಿಚ್ಚೋದಿಲ್ಲ. ಉತ್ತರ ಕರ್ನಾಟಕ ಕೊಚ್ಚಿ ಹೋದಾಗಲೂ ಮಾತನಾಡದ 25 ಸಂಸದರು, ಅಡಿಕೆ ಬೆಳೆಗಾರ ಸತ್ತಾಗ ಮಾತನಾಡುತ್ತಾನೆ ಎನ್ನುವ ನಂಬಿಕೆ ನನಗಂತೂ ಇಲ್ಲ. ಎಲ್ಲಾ ಕನ್ನಡಿಗ ಸಂಸದರ ಜುಟ್ಟು ಜನಿವಾರಗಳು ಈಗಾಗಲೇ ಮಾರ್ವಾಡಿಗಳ ಹಿಡಿತದಲ್ಲಿವೆ. ಖುದ್ದು ಅಡಿಕೆ ತೋಟದ ಮಾಲೀಕರಾಗುತ್ತಿರುವ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ವಿಚಾರದಲ್ಲಿ ಹೆಲ್ಪ್​ಲೆಸ್​.

ಸ್ನೇಹಿತರೇ, ದೇಶದ ಅಡಿಕೆಯಲ್ಲಿ ಕರ್ನಾಟಕದ ಪಾಲು ಶೇಕಡಾ 60ರಷ್ಟು. ನಮ್ಮ ಮಲೆನಾಡಿನಲ್ಲಿ ಬೆಳೆಯುವಂತಾ ಗುಣಮಟ್ಟದ ಅಡಿಕೆ ಜಗತ್ತಿನ ಯಾವ ಮೂಲೆಯಲ್ಲೂ ಬೆಳೆಯಲು ಸಾಧ್ಯವಿಲ್ಲ. ರಾಜ್ಯವೊಂದರಲ್ಲೇ ವರ್ಷಕ್ಕೆ 4 ಲಕ್ಷ ಟನ್​ಗೂ ಅಧಿಕ ಅಡಿಕೆ ಉತ್ಪಾದನೆಯಾಗುತ್ತೆ. ಕೇರಳದಲ್ಲಿ 30 ರಿಂದ 40 ಸಾವಿರ ಟನ್​, ಗೋವಾದಲ್ಲಿ 6 ಸಾವಿರ ಟನ್​, ಅಸ್ಸಾಂನಲ್ಲಿ 25 ಸಾವಿರ ಟನ್​, ಮಹಾರಾಷ್ಟ್ರದಲ್ಲಿ 3 ರಿಂದ 4 ಸಾವಿರ ಟನ್​ ಅಡಿಕೆ ಉತ್ಪಾದನೆಯಾಗುತ್ತೆ. ಕರ್ನಾಟಕದ ಮಟ್ಟಿಗೆ ಶಿವಮೊಗ್ಗ, ಉತ್ತರ ಕನ್ನಡ, ಹಾಗೂ ದಾವಣಗೆರೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಡಿಮೆ ಬೆಳೆಯಲಾಗುತ್ತೆ. ಉಳಿದಂತೆ ಉಡುಪಿ, ಚಿಕ್ಕಮಗಳೂರು, ತುಮಕೂರು ಹಾಗೂ ದಕ್ಷಿಣ ಕನ್ನಡದಲ್ಲೂ ಅಡಿಕೆ ಬೆಳೆಗಾರರು ಇದ್ದಾರೆ. ಕಳೆದ ಕೆಲ ವರ್ಷಗಳಿಂದ ಅಡಿಕೆ ಬೆಳೆಗಾರರನ್ನ ಶ್ರೀಮಂತ ರೈತರು ಎಂದೇ ಬಿಂಬಿಸಲಾಗಿತ್ತು. ಆದರೆ ಆ ಶ್ರೀಮಂತಿಕೆ ಹೆಚ್ಚು ದಿನ ಉಳಿಯೋಲ್ಲ. ಯಾಕಂದ್ರೆ ಮೋದಿ ಕಣ್ಣು ಅಡಿಕೆ ಬೆಳೆಗಾರನ ಮೇಲೆ ಬಿದ್ದಿದೆ. ವಿದೇಶಗಳನ್ನ ಮೆಚ್ಚಿಸಲು ಹೊರಟಿರುವ, ವಿಶ್ವದ ಕಣ್ಣಿನಲ್ಲಿ ಸೂಪರ್​ ಹೀರೋ ಆಗೋಕೆ ಹೊರಟಿರುವ ಮೋದಿ, RCEPಗೆ ಸಹಿ ಬೀಳುತ್ತಿದ್ದಂತೆ, ರಾಜ್ಯದಲ್ಲಿ ಅಡಿಕೆ ಬೆಳೆಗಾರನ ಸುಸೈಡ್​ ನೋಟ್​ ಸಿದ್ಧವಾಯ್ತು ಅಂತಾನೇ ಅರ್ಥ.

ಈ RCEP ಒಪ್ಪಂದ ಪರಿಚಯವಾಗಿದ್ದು 2012ರಲ್ಲಿ. ಆದರೆ ಅಂದಿನ ಮನಮೋಹನ್​ ಸಿಂಗ್​ ಸರ್ಕಾರ ಅದು ದೇಶಕ್ಕೆ ಮಾರಕ ಎಂದು ತಳ್ಳಿ ಹಾಕಿತ್ತು. ಆದರೆ ವಿಶ್ವನಾಯಕ ಎನಿಸಿಕೊಳ್ಳುವ ಭರದಲ್ಲಿ ಮೋದಿ RCEPಗೂ ಜೈ ಎನ್ನುತ್ತಿದ್ದಾರೆ.

ಯೋಚನೆ ಮಾಡಿ, ಧರ್ಮದ ಭ್ರಮೆ ಹುಟ್ಟಿಸಿ, ದೇಶ ಪ್ರೇಮದ ನಶೆ ಹಚ್ಚಿ, ಗೆದ್ದು ಬಂದ ಬಿಜೆಪಿ ಈಗ ದೇಶದ ಅರ್ಥ ವ್ಯವಸ್ಥೆಯನ್ನೇ ವಿದೇಶಗಳಿಗೆ ಮಾರಲು ಹೊರಟಿದೆ. ಬಿಜೆಪಿಯ ಹಿಡನ್​ ಅಜೆಂಡಾ ಕೊನೆಗೂ ರೈತನ ಬುಡಕ್ಕೆ ಬಂದಿದೆ.

Categories
Breaking News District Political State

ಅರ್ಥಪೂರ್ಣವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಣೆಗೆ ನಿರ್ಧಾರ: ಶ್ರೀ ಗೋವಿಂದ ಎಂ. ಕಾರಜೋಳ

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ವವಾಗಿ ಆಚರಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.

ವಿಕಾಸಸೌಧದಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಂಕ್ವಿಟ್ ಹಾಲ್ ನಲ್ಲಿ ಆಚರಿಸಲಾಗುವುದು. ಸಾಮಾಜಿಕ, ಸಾಹಿತ್ಯ ಹಾಗು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮೂವರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮೆರವಣಿಗೆಯು ಮಹರ್ಷಿ ವಾಲ್ಮೀಕಿ ಪುತ್ಥಳಿಯವರೆಗೆ ಆಗಮಿಸಲಿದೆ. ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ವಿವಿಧ 10 ಕಲಾ ತಂಡಗಳು ಪಾಲ್ಗೊಳ್ಳಲಿವೆ. ಶಿಷ್ಠಾಚಾರದಂತೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಸಮಾಜದ ಬಂಧುಗಳು ಸ್ವಯಂ ಪ್ರೇರಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಆಚರಿಸುವಂತೆ ಸುತ್ತೋಲೆಯನ್ನು ಹೊರಡಿಸಲಾಗುವುದು. ಅಂಬಿಗರ ಚೌಡಯ್ಯ, ಶಿವಾಜಿ ಜಯಂತಿ, ಬಸವ ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಆಚರಿಸಲು ತಾವು ವಹಿಸಿದ್ದ ಶ್ರಮವನ್ನು ಅವರು ಸ್ಮರಿಸಿದರು.

ರಾಜನಹಳ್ಳಿ ಮಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ವಿವಿಧ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸುವಂತೆ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕುಮಾರ ನಾಯಕ್, ಎಸ್‍ಸಿಪಿ ಮತ್ತು ಎಸ್‍ಟಿಪಿ ಯೋಜನೆಯ ಸಲಹೆಗಾರರಾದ ಶ್ರೀ ಇ. ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ವಿವಿಧ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Categories
Breaking News Sandalwood

ಈ ಬಾರಿ ಪರಿಸರ ಸ್ನೇಹಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ರಿಯಲ್ ಸ್ಟಾರ್ ನಿರ್ಧಾರ

ಇದೇ ಸೆಪ್ಟಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬ. ಈ ಬಾರಿ ಹಸಿರು ಹುಟ್ಟುಹಬ್ಬ / ಗ್ರೀನ್ ಬರ್ತಡೇ/ ಪರಿಸರ ಸ್ನೇಹಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ರಿಯಲ್ ಸ್ಟಾರ್ ಉಪೇಂದ್ರ  ನಿರ್ಧಾರ ಮಾಡಿದ್ದಾರೆ.

ಹೀಗಾಗಿ ಹುಟ್ಟುಹಬ್ಬದಂದು ಕೇಕ್, ಹಾರ, ಉಡುಗೊರೆ ತರದಿರಲು ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಉಪೇಂದ್ರ ಮನವಿ ಮಾಡಿದ್ದಾರೆ. ಉಡುಗೊರೆ ನೀಡಲೇಬೇಕು ಅನಿಸಿದರೆ ಗಿಡಗಳನ್ನು ತರಲು ಉಪ್ಪಿ ತಿಳಿಸಿದ್ದಾರೆ. ಅಭಿಮಾನಿಗಳು ತಂದು ಕೊಟ್ಟ ಗಿಡಗಳುನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ರಿಯಲ್ ಸ್ಟಾರ್ ಹೊತ್ತಿದ್ದಾರೆ.

ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದು ಹೀಗೆ……

ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ…‬
‪ಸೆಪ್ಟೆಂಬರ್ 18 “ಅಭಿಮಾನಿಗಳ ದಿನ”, ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ…‬
‪-ನಿಮ್ಮ ಉಪೇಂದ್ರ

Categories
Breaking News District Political State

ಮಂಡ್ಯದಲ್ಲಿ 50 ಪ್ರವಾಸಿ ತಾಣ ಗುರುತು : ಅಭಿವೃದ್ಧಿಗೆ ನಿರ್ಧಾರ – ಸಿ.ಟಿ.ರವಿ

ಮಂಡ್ಯ ಜಿಲ್ಲೆಯಲ್ಲಿ 50 ಪ್ರವಾಸಿ ತಾಣಗಳನ್ನು ಗುರುತಿಸಿದ್ದೇವೆ. ಗಗನಚುಕ್ಕಿ ಜಲಪಾತ, ಕೊಕ್ಕರೆ ಬೆಳ್ಳೂರು, ಶ್ರೀರಂಗಪಟ್ಟಣದ ಅನೇಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಪ್ರವಾಸಿ ಕೇಂದ್ರಗಳ ಪಾರಂಪರಿಕ ತಾಣ ಮಾಡಲಾಗುತ್ತದೆ. ವೀಕೆಂಡ್ ನಲ್ಲಿ ಮೈಸೂರು, ಮಡಿಕೇರಿ ಗೆ ಬೆಂಗಳೂರು ಕಡೆಯಿಂದ ಹೆಚ್ಚಿನ ಪ್ರವಾಸಿಗರು ಬರ್ತಾರೆ. ಶ್ರೀರಂಗಪಟ್ಟಣ ಪ್ರವಾಸಿ ತಾಣ ಅಭಿವೃದ್ಧಿ ಮಾಡಿದರೆ ಸರ್ಕಾರಕ್ಕೆ ಪ್ರವಾಸೋದ್ಯಮ ಇಲಾಖೆಗೆ ಲಾಭವಾಗಲಿದೆ. ಜನರಿಗೆ ಉದ್ಯೋಗ ಸಹ ಸೃಷ್ಟಿಯಾಗಲಿದೆ.

ಮಲೇಷ್ಯಾ, ಸಿಂಗಾಪುರ್ ನಲ್ಲಿ ಕೃತಕ ಪ್ರವಾಸಿ ತಾಣಗಳಿವೆ. ಆದರೆ ನಮ್ಮಲ್ಲಿ ಎಲ್ಲವೂ ಇದ. ಮಂಡ್ಯ ಜಿಲ್ಲೆಯ 66 ಪ್ರವಾಸಿ ತಾಣಗಳ ಅಭಿವೃದ್ಧಿ ಗೆ 88 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಗೆ ಖಾಸಗಿ ಹೂಡಿಕೆ ಸಹ ಮಾಡಲಾಗುವುದು. ಪ್ರವಾಸಿ ತಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಡಲು ಚಿಂತನೆ ಮಾಡಲಾಗಿದೆ ಎಂದರು.

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಡ ಎಂಬ ವಿಚಾರಕ್ಕೆ ಮಾತನಾಡಿದ ಅವರು ಸಾಂಸ್ಕೃತಿಕ ಧ್ವಜ ಹಿಂದೆಯೂ ಇತ್ತು. ಈಗಲೂ ಇದೆ ಮುಂದೆಯೂ ಇರುತ್ತದೆ. 1965ರಲ್ಲಿ ಪ್ರಸ್ತುತ ರಾಜ್ಯದ ಧ್ವಜ ಪಕ್ಷವೊಂದರ ಬಾವುಟ ಆಗಿತ್ತು.ಆದರೆ ಜನ ಧ್ವಜವನ್ನು ಸ್ವೀಕಾರ ಮಾಡಿದ್ದಾರೆ. ದೇಶಕ್ಕೆ ಒಂದೇ ಧ್ವಜ ಅಂತ ಅಂಬೇಡ್ಕರ್ ಹೇಳಿದ್ರು.ನಾನು ಅದನ್ನ ಉಲ್ಲೇಖ ಮಾಡಿ ಹೇಳಿದೆ ಅಷ್ಟೆ. ನಾನು ಅಂಬೇಡ್ಕರ್ ಅಥವಾ ಸಂವಿಧಾನದ ವಿರೋಧಿ ಅಲ್ಲ. ಪ್ರವಾಹ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗದ ವಿಚಾರ.

NDRF ತಂಡ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದೆ. ಶೀಘ್ರವೇ ಪರಿಹಾರ ಬಿಡುಗಡೆ ಆಗಲಿದೆ. ಬಳಿಕ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರಕ್ಕೆ ಒತ್ತಡ ಹಾಕಲಿದೆ. ನಮಗೆ ರಾಜ್ಯದ ಹಿತ ಮೊದಲು ಪಕ್ಷ, ರಾಜಕಾರಣ ನಂತರ. ಮತ್ತೆರಡು ಡಿಸಿಎಂ ರಚಿಸುವ ವಿಚಾರವಿದೆ. ಊಹಾಪೋಹಗಳಿಗೆ ಉತ್ತರ ಕೊಡೋಕೆ ಹೋಗಲ್ಲ ಎಂದರು.

Categories
Breaking News Political State

 ದೋಸ್ತಿ ಸರ್ಕಾರದ ಭವಿಷ್ಯ ಇಂದು ನಿರ್ಧಾರ : ನಾಳೆ ಇಡೀ ಬೆಂಗಳೂರಿಗೆ ರೆಡ್ ಅಲರ್ಟ್

ದೋಸ್ತಿ ಸರ್ಕಾರದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸರ್ಕಾರ ಉರುಳಿದರೆ ಏನಾಗುತ್ತೋ? ಉಳಿಯದಿದ್ದರೆ ಇನ್ನೇನೂ ಆಗುತ್ತೋ ಎನ್ನುವ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಇಡೀ ಬೆಂಗಳೂರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿಧಾನಸೌದ ಸುತ್ತಮುತ್ತ, ರಾಜಭವನದ ಸುತ್ತಮುತ್ತ ಬರೋಬ್ಬರಿ ಐದು ಸಾವಿರ ಪೊಲೀಸರನ್ನು ನಿಯೋಜನೆ ಮಾಡಿದ್ದು ಎಚ್ಚರಿಕೆ ವಹಿಸಲಾಗಿದೆ.

ಬೆಂಗಳೂರು ನಗರದ ಎಲ್ಲಾ ಪೊಲೀಸರು, ಬೆಂಗಳೂರು ಹೊರವಲಯದ ಪೊಲೀಸರು, 15 ಪೆಟ್ಲೋನ್  ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ಎಲ್ಲಾ ಪ್ರಮುಖ ರಾಜಕಾರಣಿಗಳ ಮನೆಗೆ ಬಂದೋಬಸ್ತ್ ಮಾಡಲಾಗಿದೆ.

ಅದರಲ್ಲೂ ಅತೃಪ್ತ ಶಾಸಕರ ಮನೆಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌದದ ಸುತ್ತ ನಿಷೇಧಾಜ್ಞೆ ಹೇರುವ ಸಾಧ್ಯತೆಯಿದೆ.

Categories
Breaking News Political State

ಮೂರು ದಿನ ಸರ್ಕಾರ ಸೇಫ್ : ಗುರುವಾರ ಸರ್ಕಾರದ ಭವಿಷ್ಯ ನಿರ್ಧಾರ…

ಗುರುವಾರ ಸಿಎಂ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈ ಮೂಲಕ ಮೂರು ದಿನ ಸರ್ಕಾರ ಸೇಫ್ ಆಗಿರಲಿದೆ.

ಇಂದು ಮಧ್ಯಾಹ್ನ 1 ಗಂಟೆಯ ವೇಳೆ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಸಲಹಾ ಸಮಿತಿ ಸಭೆ ನಡೆಯಿತು. ಈ ವೇಳೆ ಬಿಎಸ್ ಯಡಿಯೂರಪ್ಪ ಇಂದೇ ಸಿಎಂ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ಪಟ್ಟು ಹಿಡಿದರು.

ಸರ್ಕಾರ ಮತ್ತು ಆಡಳಿತ ಪಕ್ಷದ ನಾಯಕರ ಜೊತೆ ಸ್ಪೀಕರ್ ಸುಮಾರು ಮುಕ್ಕಾಲು ಗಂಟೆ ಸಭೆ ನಡೆಸಿದರು. ನಂತರ ಸ್ಪೀಕರ್ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸ ಮತ ಸಾಬೀತು ಪಡಿಸಲು ಸಿಎಂಗೆ ಅನುಮತಿ ನೀಡಿದರು.

ಈ ಸಭೆಯಲ್ಲಿ ಬಿಎಸ್‍ವೈ, ಸುಪ್ರೀಂ ತೀರ್ಪು ಯಾವಾಗ ಬೇಕಾದರೂ ಬರಲಿ. ಆದರೆ ಸಿಎಂ ಇಂದೇ ವಿಶ್ವಾಸ ಮತ ಯಾಚನೆ ಮಾಡಬೇಕು. ಯಾಕೆಂದರೆ ಸರ್ಕಾರಕ್ಕೆ ಬಹುಮತ ಇಲ್ಲ. ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಪೀಕರ್ ಅವರು, ನಾಳೆ ಸುಪ್ರೀಂ ತೀರ್ಪು ಬರಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ. ತೀರ್ಪಿನ ಬಳಿಕ ದಿನಾಂಕ ನಿಗದಿ ಮಾಡೋಣ ಎಂದು ಸಲಹೆ ನೀಡಿದರು. ಆದರೆ ಸ್ಪೀಕರ್ ನಿರ್ಧಾರಕ್ಕೆ ಬಿಎಸ್‍ವೈ ವಿರೋಧ ವ್ಯಕ್ತಪಡಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Categories
Breaking News District Political State

ರಾಜೀನಾಮೆ ವಾಪಸ್ ಬಗ್ಗೆ ಶೀಘ್ರವೇ ನಿರ್ಧಾರ – ಅತೃಪ್ತ ಶಾಸಕ ಎಂಟಿಬಿ ನಾಗರಾಜ್

ಶಾಸಕ ಸುಧಾಕರ್ ಅವರ ಜೊತೆ ಚರ್ಚಿಸಿ ರಾಜೀನಾಮೆ ವಾಪಸ್ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇನೆ..ಇದು ಅತೃಪ್ತ ಶಾಸಕ, ಸಚಿವ ಎಂಟಿಬಿ ನಾಗರಾಜ್ ಹೇಳಿಕೆ.

ಶನಿವಾರ ಮುಂಜಾನೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್ ದಿಢೀರ್ ಎಂಬಂತೆ ಎಂಟಿಬಿ ನಾಗರಾಜ್ ಮನೆಗೆ ಭೇಟಿ ನೀಡಿ ಸುಮಾರು ಆರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.

ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಂಟಿಬಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮುಖಂಡರು ನನ್ನ ಮನವಲಿಕೆಗೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ನಾನು ಸುಧಾಕರ್ ಅವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಯಾವುದೋ ಒಂದು ಗಳಿಕೆಯಲ್ಲಿ ಏನೋ ನಡೆದು ಹೋಯಿತು. ಅವೆಲ್ಲವನ್ನೂ ಮರೆತು ಇದೀಗ ನಾವೆಲ್ಲ ಒಗ್ಗಟ್ಟಿನಿಂದ ಇರಲು ತೀರ್ಮಾನಿಸಿದ್ದೇವೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಎಂಟಿಬಿ ಕಾಲಾವಕಾಶ ಕೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಏತನ್ಮಧ್ಯೆ ಆರು ಗಂಟೆಗಳ ಕಾಲ ಮಾತುಕತೆ ನಡೆಸಿದರೂ ಎಂಟಿಬಿ ನಾಗರಾಜ್ ಮನವೊಲಿಕೆಗೆ ಒಪ್ಪಿಲ್ಲವಾಗಿತ್ತು ಎಂದು ವರದಿಯಾಗಿತ್ತು.