ಕರೋನ ವೈರಸ್ ಬಿಕ್ಕಟ್ಟಿನ ಬೆಂಕಿಯಲ್ಲೂ ಮೈಕಾಯಿಸಿಕೊಳ್ಳುವವರು ಇವರು!

ಕರೋನ ವೈರಸ್ ವಿಶ್ವದ ಬಹುತೇಕ ಎಲ್ಲ ದೇಶಗಳಿಗೂ ಅತಿ ವೇಗವಾಗಿ ಹರಡುತ್ತಿದ್ದು ದೊಡ್ಡ ಸಾಮಾಜಿಕ ಬಿಕ್ಕಟ್ಟಾಗಿ ಪರಿಣಮಿಸಿದೆ. ಇಂತಹ ಸಮಯದಲ್ಲೂ ಕೆಲವು ಧಾರ್ಮಿಕ ಸಂಘಟನೆಗಳು ಮತ್ತು ಬೇಜವಾಬ್ದಾರಿಯ ಬಂಡವಾಳಶಾಹಿ ಸಂಸ್ಥೆಗಳು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಸಾಮಾಜಿಕ ಜವಬ್ದಾರಿ ಮರೆತು ಲಾಭದ ಮೇಲೆ ಕಣ್ಣಿಟ್ಟು ಜಾಗೃತಗೊಂಡಿವೆ.

ದ ನ್ಯೂಯಾರ್ಕ್ ಟೈಮ್ಸ್ ಮಾಡಿರುವ ವರದಿಯಂತೆ, ಅತಿ ಶ್ರೀಮಂತರು ದುಬಾರಿ ಬೆಲೆಯ ಮಾಸ್ಕ್ ಗಳನ್ನು ಕೊಳ್ಳುವುದು, ಪ್ರೈವೇಟ್ ಜೆಟ್ ಗಳ ಮೊರೆ ಹೋಗುತ್ತಿರುವುದು, ಪ್ರವಾಸ ಕೈಗೊಂಡು ಪ್ರತ್ಯೇಕ ಯಾಚ್ ಗಳನ್ನು ಕಾಯ್ದಿರಿಸಿಕೊಳ್ಳುತ್ತಿರುವುದು ಹೀಗೆ ತಮ್ಮ ವೈಯಕ್ತಿಕ ಕಾಳಜಿಗಳನ್ನು ಪೊರೈಸಿಕೊಳ್ಳುತ್ತಿದ್ದಾರಂತೆ. ಹಾಲಿವುಡ್ ನಟಿ ಗ್ವೈನೆತ್ ಪಾಲ್ತ್ರೊ, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಸ್ಕ್ ಧರಿಸಿ ಫೋಟೋ ಹಾಕಿಕೊಂಡಿದ್ದಾರೆ. ಏರಿನಂ ಸಂಸ್ಥೆಯ ಈ ಮಾಸ್ಕ್ ಬೆಲೆ ಸುಮಾರು 5 ಸಾವಿರ ರೂಗಳು. ಇಂತಹ ದುಬಾರಿ ಬೆಲೆಯ ಮಾಸ್ಕ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ಇಂತಹ ಕಾಳ್ಗಿಚ್ಚಿನ ಸಮಯದಲ್ಲಿ ಮೈ ಕಾಯಿಸಿಕೊಳ್ಳಲು ಮುಂದಾಗಿರುವ ಸದರನ್ ಜೆಟ್ ಎಂಬ ಸಂಸ್ಥೆ “ಖಾಸಗಿಯಾಗಿ ಹಾರಾಟ ಮಾಡಿ, ಕರೋನ ವೈರಸ್ ನಿಂದ ದೂರವಿರಿ. ಇದಕ್ಕೆ ತಗಲುವ ವೆಚ್ಚದ ದರಪಟ್ಟಿಗೆ ಇಂದೇ ಕೇಳಿ” ಎಂಬ ಈಮೇಲ್ ಪ್ರಚಾರಕ್ಕೆ ಇಳಿದಿದೆ. ಇಂತಹ ದುಬಾರಿ ಜೆಟ್ ಹಾರಾಟಕ್ಕೆ ಬೇಡಿಕೆಯೂ ಬಂದಿದೆ ಎಂದು ವರದಿಯಾಗಿದೆ. ಇದು ‘ಕಳಪೆ ಪ್ರಚಾರ’ ಎಂದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾದಾಗ, ಸಮರ್ಥನೆ ಇಳಿದಿರುವ ಈ ಚಾರ್ಟರ್ ಜೆಟ್ ಸಂಸ್ಥೆ “ನಾವು ಭಯ ಹುಟ್ಟಿಸುತ್ತಿಲ್ಲ, ಕರೋನ ವೈರಸ್ ಗಂಭೀರತೆಯ ಬಗ್ಗೆ ತಿಳಿಸುತ್ತಿದ್ದೇವೆ. ಹೆಚ್ಚುವರಿ ಸುರಕ್ಷತೆ ಬೇಕಿದ್ದವರಿಗೆ ಸೇವೆ ಒದಗಿಸುತ್ತಿದ್ದೇವೆ” ಎಂದು ಹೇಳಿಕೊಂಡಿದೆ.

ಐಶಾರಾಮ್ಯದ ಜೀವನ ನಡೆಸುವ ಜನಗಳು ತಮ್ಮ ಮನರಂಜನೆಗಾಗಿ ನೆಚ್ಚಿಕೊಂಡಿದ್ದ ಎಷ್ಟೋ ಕಾರ್ಯಕ್ರಮಗಳು ರದ್ದಾಗಿವೆ. ಅಮೇರಿಕಾದಂತಹ ರಾಷ್ಟ್ರದಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆ ಒದಗಿಸುವ, ಪ್ರತ್ಯೇಕ ಕೋಣೆಗಳ ಸೇವೆಯನ್ನು ಕೊಡುವ ಸಂಸ್ಥೆಗಳು ತಲೆಯೆತ್ತಿವೆಯಂತೆ.

ಮತ್ತೊಂದು ಕಡೆಗೆ ಸಂಭ್ರಮವಾಗಲಿ, ಬಿಕ್ಕಟ್ಟಾಗಲಿ ಅದರಲ್ಲಿ ಧಾರ್ಮಿಕತೆಯ ಸೋಗನ್ನು ಸೇರಿಸುವ ವ್ಯಕ್ತಿಗಳಿಗೂ, ಧಾರ್ಮಿಕ ಸಂಘಸಂಸ್ಥೆಗಳಿಗೂ ಕಡಿಮೆಯೇನಿಲ್ಲ. ನಮ್ಮ ಪರಂಪರೆಯಲ್ಲಿ ಇದು ಮೊದಲೇ ಗೊತ್ತಿತ್ತು ಎನ್ನುವುದರಿಂದ ಹಿಡಿದು, ಇಂತಹ ರೋಗಕ್ಕೆ ಇಂತಿಂತ ಪರಿಹಾರಗಳು ನಮ್ಮ ಪ್ರಾಚೀನ ಗ್ರಂಥದಲ್ಲಿ ಇದೆ ಎಂಬ ಸುಳ್ಳು ಸುದ್ದಿಯವರೆಗೂ, ಶುಚಿಯ ಪಾಠವನ್ನು ಹೇಳಿಕೊಟ್ಟಿದ್ದು ನಮ್ಮ ಜಾತಿ ನಮ್ಮ ಮತ ಎನ್ನುವವರೆಗೂ ಇವು ಹಬ್ಬಿ ನಿಂತಿವೆ.

ಇಂತಹ ಗಂಭೀರ ಸಮಯದಲ್ಲಿ ಜನರನ್ನು ಇಲ್ಲದ ಆತಂಕಕ್ಕೆ ಈಡುಮಾಡುವುದು ಅಥವಾ ಹುಸಿ ಭರವಸೆಗಳನ್ನು ನೀಡುವುದು ಎರಡೂ ತಪ್ಪು. ಆತಂಕಕ್ಕೆ ಈಡುಮಾಡುವುದರಿಂದ ಸಾರ್ವಜನಿಕರು ಅನವಶ್ಯಕವಾಗಿ ಮಾಸ್ಕ್ ಗಳನ್ನು ಕ್ರೋಢೀಕರಿಸುವ ಸಮಸ್ಯೆಗಳು ತಲೆದೋರಿವೆ. ಇದರಿಂದ ಹಲವು ಬಾರಿ ವೈದ್ಯರಿಗೆ, ವೈದ್ಯ ಶುಷ್ರೂಷೆ ಮಾಡುವ ಕಾರ್ಯಕರ್ತರಿಗೆ ಮಾಸ್ಕ್ ಗಳು ಸಿಗದೆ ಹೋಗುವ ಸಂಭವ ಇದೆ. ಇನ್ನು ಇಂತಹ ರೋಗ ನಮ್ಮ ದೇಶಕ್ಕೆ ಬರುವುದಿಲ್ಲ, ನಮ್ಮದು ಪುಣ್ಯಭೊಮಿ ಇಂತಹ ಸುಳ್ಳು ಭರವಸೆಯನ್ನು ನೀಡುತ್ತಾ ಹೋದರೆ, ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ, ಈ ಸಾಂಕ್ರಾಮಿಕ ವೈರಸ್ ವೇಗವಾಗಿ ಹರಡುವುದಕ್ಕೆ ಬ್ರೇಕ್ ಹಾಕಲು ಯಾವುದೇ ಸಾಹಾಯ ಮಾಡದೆಹೋಗುವ ಅಪಾಯವೂ ಇದೆ.

ಶುಚಿ ಯಾವುದೇ ಧರ್ಮ, ಯಾವುದೇ ಜಾತಿ ಅಥವಾ ಯಾವುದೇ ಬಂಡವಾಳಶಾಹಿಗಳು ಅನ್ವೇಷಣೆ ಮಾಡಿದ್ದಲ್ಲ. ಜಗತ್ತಿನ ಎಲ್ಲರೂ ತಮ್ಮ ತಮ್ಮ ಸಂಸ್ಕೃತಿಯ, ತಮ್ಮ ತಮ್ಮ ಜನ ಜೀವನದ, ಬದುಕಿನ ಅಂಗವಾಗಿ ಶುಚಿತ್ವದ ಪಾಠಗಳನ್ನು ಕಂಡುಕೊಂಡಿದ್ದರು ಮತ್ತು ಅನುಸರಿಸುತ್ತಿದ್ದರು. ಆದರೆ ಈಗ ಅಸಾಮಾನ್ಯವಾದ ಸಂದರ್ಭ ನಮ್ಮ ಮುಂದೆ ಬಂದಿದೆ. ಇಂತಹ ವೈರಸ್ ಸಾಮಾನ್ಯವಾಗಿ ಕಾಡುಪ್ರಾಣಿಗಳಲ್ಲಿ ನೆಲಸಿ ತನ್ನ ಪಾಡಿಗೆ ಇರುತ್ತಿತ್ತು. ಮನುಷ್ಯನ ಅತಿಕ್ರಮಣಶೀಲ ಚಟುವಟಿಕೆಗಳಿಂದ, ಪ್ರಕೃತಿ ಬಗೆಗಿನ ಸ್ಥೂಲ ಸಂಬಂಧವನ್ನು ಉಳಿಸಿಕೊಳ್ಳದೆ ಹದಗೆಡಿಸಿಕೊಂಡಿದ್ದರಿಂದ ಈ ಕೆಟ್ಟ ಸನ್ನಿವೇಶ ಎದುರಾಗಿದೆ. ಇಡೀ ಮನುಕುಲ ಇದನ್ನು ಈಗ ಎದುರಿಸಬೇಕು. ಇದಕ್ಕೆ ನಮ್ಮ ಸಾಮಾನ್ಯ ಶುಚಿತ್ವಕ್ಕಿಂತಲಲೂ ತುಸು ಹೆಚ್ಚಿನ ಶ್ರಮ ಅಗತ್ಯ. ಹೆಚ್ಚೆಚ್ಚು ಬಾರಿ ಕೈತೊಳೆಯಬೇಕು. ಸೋಂಕು ತಗುಲಿರುವ ಶಂಕೆ ಇದ್ದಲ್ಲಿ ತಾವೇ ಪ್ರತ್ಯೇಕಗೊಂಡು, ಸೋಂಕು ಬೇರೆಯವರಿಗೆ ಹರಡದಂತೆ ಜವಬ್ದಾರಿ ವಹಿಸಿಕೊಳ್ಳಬೇಕು. ಅಗತ್ಯ ವೈದ್ಯರನ್ನು ಕಂಡು ರೋಗವನ್ನು ಉಪಶಮನ ಮಾಡಿಕೊಳ್ಳಬೇಕು. ಈ ಸಾಂಕ್ರಾಮಿಕವನ್ನು ವಿಶಾಲವಾಗಿ ಹರಡದಂತೆ ಎಚ್ಚರಿಕೆಯಿಂದ ಇರಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights