ಕರ್ನಾಟಕ ಬಿಜೆಪಿಯಲ್ಲಿ ಬಿರುಕು; ಬಂಡುಕೋರರನ್ನು ಕರೆತರಲು ಸಮಿತಿ ರಚಿಸಿದ ಕಾಂಗ್ರೆಸ್
ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಬಣ ಮತ್ತು ಆರ್ಎಸ್ಎಸ್ ಮೂಲದ ಬಣಗಳ ನಡುವೆ ಭಿನ್ನಮತ ಭುಗಿಲೇಳುತ್ತಿದೆ. ಈ ಒಡಕಿನ ಲಾಭವನ್ನು ಪಡೆಯಲು ಕಾಂಗ್ರೆಸ್ ಸಜ್ಜಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬರಲು ಬಯಸುವ ಬಂಡಾಯ ನಾಯಕರನ್ನು ಗಮನಿಸಲು ಪಕ್ಷದ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
“ನಮ್ಮ ಪಕ್ಷವನ್ನು ತೊರೆದಿದ್ದ ಅನೇಕ ನಾಯಕರು ಮರಳಲು ಬಯಸುತ್ತಾರೆ. ಅಂತಹ ನಾಯಕರನ್ನು ಏಕಪಕ್ಷೀಯ ನಿರ್ಧಾರದಿಂದ ಸ್ವೀಕರಿಸಲು ನಾವು ಸಿದ್ಧರಿಲ್ಲ. ಈ ವಿಷಯವನ್ನು ಎಲ್ಲಾ ನಾಯಕರೊಂದಿಗೆ, ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಬೇಕಾಗಿದೆ. ಅದಕ್ಕಾಗಿ ಇದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ” ಎಂದು ಶಿವಕುಮಾರ್ ತಿಳಿಸಿದರು.
ಆದಾಗ್ಯೂ, ಯಾವ ಹಂತದ (ಮಂತ್ರಿಗಳು, ಶಾಸಕರು ಅಥವಾ ಬ್ಲಾಕ್-ಮಟ್ಟದ ಕಾರ್ಯಕರ್ತರು) ನಾಯಕರು ತಮ್ಮ ರಾಜಕೀಯ ಹಡಗಿಗೆ ನೆಗೆಯುವುದಕ್ಕೆ ಸಿದ್ಧರಿದ್ದಾರೆ ಎಂದು ಅವರು ವಿವರಿಸಲಿಲ್ಲ.
“ಕೇವಲ ಅಧಿಕಾರಕ್ಕಾಗಿ ಪಕ್ಷಕ್ಕೆ ಬರುವ ಜನರು ನಮಗೆ ಅಗತ್ಯವಿಲ್ಲ. ವ್ಯಕ್ತಿಯು ಪಕ್ಷದ ಸಿದ್ಧಾಂತವನ್ನು ನಂಬಬೇಕು ಹಾಗೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳಬೇಕು ”ಎಂದು ಶಿವಕುಮಾರ್ ಹೇಳಿದರು.
“ಅವರು ನಮ್ಮೊಂದಿಗೆ ಸೇರಿದ ನಂತರ ಪಕ್ಷಕ್ಕೆ ಯಾವುದೇ ತೊಂದರೆ ಮಾಡಬಾರದು. ಪಕ್ಷಕ್ಕೆ ನಿಷ್ಠೆ ಮುಖ್ಯ. ಪಕ್ಷಕ್ಕೆ ಸೇರಿಸಿಕೊಳ್ಳಲು ಅಧಿಕಾರದ ಬಯಕೆ ಮಾತ್ರ ಕಾರಣವಲ್ಲ. ಸಮಿತಿ ನೀಡಿದ ಹೆಸರುಗಳನ್ನು ಇತರ ನಾಯಕರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮಗೊಳಿಸಲಾಗುವುದು ”ಎಂದು ಶಿವಕುಮಾರ್ ಹೇಳಿದರು.
ಮರಳಿ ಪಕ್ಷಕ್ಕೆ ಸೇರಲು ಇಚ್ಚಿಸುವವರು ಜಿಲ್ಲಾ ಮತ್ತು ತಾಲ್ಲೂಕು ನಾಯಕರೊಂದಿಗೆ ಕೆಲಸ ಮಾಡಬೇಕು. ಸ್ಥಳೀಯ ಮಟ್ಟದಲ್ಲಿ ಭಿನ್ನಾಭಿಪ್ರಾಯ, ಜಗಳಗಳಿಗೆ ಕಾರಣವಾಗದ ರೀತಿಯಲ್ಲಿ ಅವರ ವಿಶ್ವಾಸವನ್ನು ಗಳಿಸಬೇಕು ಎಂದು ಡಿಕೆಶಿ ಹೇಳಿದ್ದಾರೆ.
ಇತರ ಪಕ್ಷದ ಆಂತರಿಕ ವ್ಯವಹಾರಗಳ ಬಗ್ಗೆ ಯಾವುದೇ ಹೇಳಿಕೆ ನೀಡುವಾಗ ಜಾಗರೂಕರಾಗಿರಿ ಎಂದು ತಮ್ಮ ಪಕ್ಷದ ಸದಸ್ಯರಿಗೆ ಡಿಕೆಶಿ ಕೇಳಿಕೊಂಡಿದ್ದಾರೆ.
ಕಳೆದ ಎರಡು ವಾರಗಳಿಂದ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಬೆಳೆಯುತ್ತಿದೆ, ಯಡಿಯೂರಪ್ಪನವರ ಬೆಂಬಲಿಗರು ಸಚಿವರ ಸ್ಥಾನಕ್ಕಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿದ್ದಾರೆ. ಕೆಲವರಿಗೆ ಸ್ಥಾನಗಳನ್ನು ನೀಡುವುದಾಗಿ ಭರವಸೆಯನ್ನು ಯಡಿಯೂರಪ್ಪ ನೀಡಿದ್ದರು. ಆದರೆ, ಹೈಕಮಾಂಡ್ ನಿರ್ಧಾರಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಸಂದಿಗ್ಧ ಸ್ಥಿತಿಯಲ್ಲಿದೆ.
ಅಲ್ಲದೆ, ವಲಸೆ ಬಿಕ್ಕಟ್ಟು ಮತ್ತು ರಾಜ್ಯದ ಹಲವಾರು ಜೀವಗಳ ಮೇಲೆ ಪರಿಣಾಮ ಬೀರಿದ ಲಾಕ್ಡೌನ್ನಿಂದಾಗಿ ಬಿಜೆಪಿ ವಿರುದ್ಧ ಹೆಚ್ಚುತ್ತಿರುವ ವಿರೋಧವನ್ನು ಬಳಸಿಕೊಳ್ಳಲು ಒಂದು ಅವಕಾಶವನ್ನು ಕಾಂಗ್ರೆಸ್ ಎದುರುನೋಡುತ್ತಿದೆ.

