ಕೊರೊನಾ ಭೀತಿ : ರಾಜ್ಯಾದ್ಯಂತ ಬಂದ್ – ವಿಕೆಂಡ್‌ನಲ್ಲಿ ಸೊರಗಿದ ರಸ್ತೆಗಳು..

ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದು ಸರ್ಕಾರ ಈಗಾಗಲೇ ಬಂದ್ ಮಾಡಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ. ಇದೆಲ್ಲದರ ನಡುವೆ ಕೆಲವು ಸರ್ಕಾರದ ಆದೇಶ ಇರದ ಸಾರ್ವಜನಿಕರು ಸೇರುವಂತ ಸ್ಥಳಗಳಲ್ಲಿ ನಿಷೇಧ ಹೊರಡಿಸಲಾಗಿದೆ. ರಾಜ್ಯದಲ್ಲಿ ಯಾವ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರಲಾಗಿದೆ..? ಎಲ್ಲಿ ಜಾತ್ರೆ, ಹಬ್ಬ ರದ್ದು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲದೆ ಇದೆ.

ಬಾಗಲಕೋಟೆ ರಂಗನಾಥ ಜಾತ್ರೆಗೆ ನಿಷೇಧ :-

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೆಲವಡಿ ಲಕ್ಷ್ಮಿ ರಂಗನಾಥ ಜಾತ್ರೆಗೆ ನಿಷೇಧ ಹೇರಲಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆಲವಡಿ ಗ್ರಾಮದಲ್ಲಿ ನಾಳೆ ಸಂಜೆ ೫ಕ್ಕೆ ನಡೆಯಬೇಕಿದ್ದ ಮಹಾರಥೋತ್ಸವಕ್ಕೆ ಬ್ರೇಕ್ ಹಾಕಲಾಗಿದೆ. ಗ್ರಾಮಕ್ಕೆ ತಹಶೀಲ್ದಾರ್,ತಾಪಂ ಇಓ, ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದು, ಜಾತ್ರಾ ಮಹೋತ್ಸವ ನಿಷೇಧಿಸುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಗ್ರಾಮಸ್ಥರು ಜಾತ್ರಾ ಮಹೋತ್ಸವ ರದ್ದುಪಡಿಸಿದ್ದಾರೆ.

ಮೈಸೂರು ಮೃಗಾಲಯ, ಅರಮನೆ, ಕಾರಂಜಿಕೆರೆ ಉದ್ಯಾನವನ, ಮ್ಯೂಸಿಯಂಗಳು ಬಂದ್:-

ಇನ್ನೂ ಕೊರೋನಾ ಆತಂಕದಲ್ಲಿ  ಇಂದಿನಿಂದ ಮೈಸೂರು ಮೃಗಾಲಯ ಬಂದ್ ಮಾಡಿ ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದಿಂದ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಒಂದು ವಾರಗಳ ಕಾಲ ಮೈಸೂರು ಮೃಗಾಲಯ ಪ್ರೇಕ್ಷಣೆಗೆ ಲಭ್ಯವಿಲ್ಲ. ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯಗಳು ಬಂದ್ ಮಾಡಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಮಾರ್ಚ್ 23ರವರೆಗೆ ಮೃಗಾಲಯಗಳ ಪ್ರಾಧಿಕಾರ ಮೃಗಾಲಯ ಬಂದ್ ಮಾಡುವಂತೆ ಸೂಚಿಸಿದೆ. ಇದರಿಂದ ವಿಕೆಂಡ್‌ನಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಮೃಗಾಲಯ ಖಾಲಿ ಖಾಲಿಯಾಗಿದೆ. ಮೃಗಾಲಯದ ಅಧಿಕಾರಿಗಳು ಪ್ರಾಣಿಗಳ ಹಾರೈಕೆಗೆ ಮಾತ್ರ ಸಿಬ್ಬಂದಿಗಳ‌ ನಿಯೋಜನೆ ಮಾಡಿದ್ದು ಇತರೆ ಎಲ್ಲ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಮೈಸೂರು ಅರಮನೆ ಮಂಡಳಿ ಕೊರೊನಾ ಭೀತಿಯಿಂದ ಇಂದಿನಿಂದ ಒಂದು ವಾರಗಳ ಕಾಲ ಮಾರ್ಚ್ 22ರವರೆಗೆ ಮೈಸೂರು ಅರಮನೆ ಬಂದ್ ಆಗಲಿದೆ ಎಂದು ಆದೇಶ ಹೊರಡಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಅರಮನೆ ಮಾರ್ಚ್ 22ರವರೆಗೆ ಬಂದ್ ಮಾಡಲಾಗಿದೆ.ಭಾನುವಾರ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮೈಸೂರು ಅರಮನೆ ಇಂದು ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ.

ಜೊತೆಗೆ ಸರ್ಕಾರ ಎಲ್ಲ ಪ್ರವಾಸಿತಾಣಗಳನ್ನ‌ ಬಂದ್ ಮಾಡಿ ಆದೇಶಿಸಿರುವುದರಿಂದ ಮೈಸೂರಿನ ಪ್ರವಾಸಿತಾಣಗಳು ಪ್ರೇಕ್ಷಣೆಗೆ ಲಭ್ಯವಿಲ್ಲ. ಮೈಸೂರು ಅರಮನೆ, ಮೃಗಾಲಯ, ಗಣಪತಿ ಆಶ್ರಮದ ಶುಕವನ, ಕಾರಂಜಿಕೆರೆ ಉದ್ಯಾನವನ ಬಂದ್ ಮಾಡಲಾಗಿದೆ. ಸ್ಥಳಿಯ ಮ್ಯೂಸಿಯಂಗಳು ಹಾಗೂ ಪ್ರಮುಖ ಸ್ಥಳಗಳು ಪ್ರೇಕ್ಷಣೆಗೆ ಲಭ್ಯವಿಲ್ಲ. ಚಾಮುಂಡಿಬೆಟ್ಟ ಮಾತ್ರ ಭಕ್ತರ ದರ್ಶನಕ್ಕೆ ಅವಕಾಶ ಇದ್ದು, ಮೈಸೂರಿನ ರಸ್ತೆಗಳು ಜನರಿಲ್ಲದೆ ಬಣಗುಡುತ್ತಿವೆ. ಒಟ್ಟಿನಲ್ಲಿ ಮೈಸೂರು ವಿಕೆಂಡ್‌ನಲ್ಲಿ ಪ್ರವಾಸಿಗರಿಲ್ಲದೆ ಸೋರಗಿದೆ.

ಚಿಕ್ಕಮಗಳೂರು ಕೋಳಿ ಹಬ್ಬ ರದ್ದು :- 

ಕೊರೊನ ವೈರಸ್ ಭೀತಿ ಹಿನ್ನೆಲೆ ಕೋಳಿ ಹಬ್ಬ ರದ್ದು ಮಾಡಲಾಗಿದೆ. ಹತ್ತಾರು ಹಳ್ಳಿಗಳು ಒಟ್ಟಾಗಿ ಸೇರಿ ಇಂದು ಚಿಕ್ಕಮಗಳೂರು ತಾಲೂಕಿನ ವಳಗೇರಹಳ್ಳಿಯಲ್ಲಿ ನಡೆಯಬೇಕಿದ್ದ ಹಬ್ಬ ರದ್ದು ಮಾಡಲಾಗಿದೆ. ವಳಗೇರಹಳ್ಳಿ ಶ್ರೀ ಭೂತಪ್ಪ ಸೇವಾ ಸಮಿತಿ ರದ್ದು ಮಾಡಿರುವ ಬಗ್ಗೆ ಪ್ರಕಟಣೆ ಹೊರಡಿಸಿದೆ.ಚಿಕ್ಕಮಗಳೂರು ಜಿಲ್ಲಾ ಪಂಜ ಕುಸ್ತಿ ಸಂಘದಿಂದ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಪಂಜ ಕುಸ್ತಿ-ದೇಹದಾರ್ಡ್ಯ ಸ್ಪರ್ಧೆ ರದ್ದು ಮಾಡಲಾಗಿದೆ.ಎಂಟನೇ ರಾಜ್ಯಮಟ್ಟದ ಚಾಂಪಿಯನ್ ಶಿಪ್ ಗೆ 250ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದರು.

ವಿಜಯಪುರ ಸಾಮೂಹಿಕ‌ ವಿವಾಹ ರದ್ದು :-

ಸರಕಾರದ ಆದೇಶ ಹಿನ್ನೆಲೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದಲ್ಲಿ ನಡೆಯಬೇಕಿದ್ದ ಆರೂಢ ಮಠದ ಸಂಗಮ ಬಸವೇಶ್ವರ ಜಾತ್ರೆ ಹಾಗೂ ಸಾಮೂಹಿಕ‌ ವಿವಾಹ ರದ್ದು ಮಾಡಲಾಗಿದೆ.

ಒಟ್ಟಿನಲ್ಲಿ ವೀಕೆಂಡ್ ನಲ್ಲಿ ಮಜಾ ಮಾಡಬೇಕು ಎಂದುಕೊಳ್ಳುವ ಜನ ಮನೆಬಿಟ್ಟು ಹೊರಗಡೆ ಬಾರದಂತ ಸ್ಥಿತಿ ನಿರ್ಮಾಣವಾಗಿದ್ದು, ಕಿಲ್ಲರ್ ಕೊರೊನಾದಿಂದ ಜನ ಬೆಚ್ಚಿಬಿದ್ದಿದ್ದಾರೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights