ಟ್ರಾವೆಲ್ ಹಿಸ್ಟರಿ ಇಲ್ಲದವರಲ್ಲಿ ಕೊರೊನಾ; ಸಮುದಾಯಕ್ಕೆ ಹರಡುತ್ತಿರುವ ಭೀತಿ: ಜನರಲ್ಲಿ ಆತಂಕ

ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ದಾಖಲಾಗಿದ್ದರೂ, ಎರಡನೇ ಸ್ಥಾನದಲ್ಲಿರುವ ಕಲಬುರ್ಗಿ ಜಿಲ್ಲೆಯ ಜನ ಹೆಚ್ಚು ಆತಂಕಕ್ಕೊಳಗಾಗಿದ್ದಾರೆ.

ದೇಶದ ಮೊದಲ ಕೊರೊನಾ ಸೋಂಕಿತ ಸಾವನ್ನಪ್ಪಿದ್ದ ಕಲಬುರ್ಗಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದೇ ಇರುವ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಕೊರೊನಾ ಸೋಂಕು ಕಮ್ಯುನಿಟಿ ಸ್ಪ್ರೆಡ್ ಆಗಿರುವುದನ್ನು ಸೂಚಿಸುತ್ತಿದೆ. ಇದರಿಂದಾಗಿ ಜನ ಭೀತಿಗೊಂಡಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1160 ಕ್ಕೇರಿದೆ. ಸಾವಿನ ಸಂಖ್ಯೆಯೂ 11ಕ್ಕೇರಿದೆ. ಲಾಕ್ ಡೌನ್ ಸಡಿಲಗೊಳಿಸಿದ ನಂತರವಂತೂ ಸೋಂಕು ಮತ್ತಷ್ಟು ವ್ಯಾಪಕ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ಅದರಲ್ಲಿಯೂ ಕಳೆದ ಕೆಲ ದಿನಗಳಿಂದ ಹೊಸ ಪ್ರಕರಣಗಳು ಹೊರಹೊಮ್ಮುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಟೆಸ್ಟ್ ರಿಪೋರ್ಟ್ ಬರೋ ಮುನ್ನವೇ ...

ಆರಂಭದಲ್ಲಿ ವಿದೇಶಿಗರಿಂದ ಹಾಗೂ ಅನ್ಯ ರಾಜ್ಯಗಳಿಂದ ವಾಪಸ್ಸಾದ ವಲಸಿಗರಿಂದ ಸೋಂಕು ಹರಡಿತ್ತು. ಆದರೆ ಇದೀಗ ಇವೆಲ್ಲವುಗಳನ್ನು ಹೊರತುಪಡಿಸಿ ಟ್ರಾವೆಲ್ ಹಿಸ್ಟರಿ ಇಲ್ಲದ ಕೇಸ್ ಗಳು ಹೊರಹೊಮ್ಮುತ್ತಿವೆ. ಕಳೆದ ಹನ್ನೊಂದು ದಿನಗಳ ಅಂಕಿ-ಅಂಶಗಳ ಪ್ರಕಾರ, ಟ್ರಾವೆಲ್ ಹಿಸ್ಟರಿ ಇಲ್ಲದ 48 ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದೆ. ಟ್ರಾವೆಲ್ ಹಿಸ್ಟರಿ ಇಲ್ಲದ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.

ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದವರನ್ನು ಗಂಟಲು ದ್ರವ ಸ್ಯಾಂಪಲ್ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಮನೆಗೆ ಹೋದವರಿಂದ ಸಮರ್ಪಕವಾಗಿ ಹೋಮ್ ಕ್ವಾರಂಟೈನ್ ನಡೆಯುತ್ತಿಲ್ಲ. ಕ್ವಾರಂಟೈನ್ ಮುಗಿಸಿದವರು ಊರಲ್ಲೆಲ್ಲಾ ಅಲೆದಾಡುತ್ತಿದ್ದಾರೆ. ಅವರಿಂದಾಗಿ ಕಮ್ಯುನಿಟಿ ಸ್ಪ್ರೆಡ್ ಆಗಿದೆ. ಇದೆಲ್ಲಕ್ಕೂ ಜಿಲ್ಲಾಡಳಿತದ ಬೇಜವಾಬ್ದಾರಿಯೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಂಕು ಅಂದ ಮೇಲೆ ಎಲ್ಲ ಕಡೆ ಹರಡುವುದು ಸಹಜ. ಕಲಬುರ್ಗಿಯಲ್ಲಿ ಅದರ ಪ್ರಮಾಣ ಒಂದಷ್ಟು ಹೆಚ್ಚಿದೆ. ಇದಕ್ಕೆ ಹೆದರಿ ಕೂಡುವುದಕ್ಕಿಂತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದೊಂದೇ ನಮ್ಮ ಮುಂದಿರುವ ದಾರಿ ಎಂದು ಹಿರಿಯ ವೈದ್ಯ ಡಾ.ಪಿ.ಎಸ್.ಶಂಕರ್ ತಿಳಿಸಿದ್ದಾರೆ.

ಕೊರೋನಾ ಅಂದ ಕೂಡಲೇ ಜನ ಭೀತಿಗೊಳ್ಳೋದೆ ಹೆಚ್ಚಾಗಿದೆ. ಭೀತಿಯೇ ಜನರನ್ನು ಧೃತಿಗೆಡುವಂತೆ ಮಾಡಿದೆ. ಕಮ್ಯುನಿಟಿ ಸ್ಪ್ರೆಡ್ ಆಗಲಿ, ಏನೇ ಆಗಲಿ, ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಲ್ಲಿ ಖಂಡಿತಾ ನಮ್ಮ ಜೀವ ರಕ್ಷಿಸಿಕೊಳ್ಳಬಹುದೆಂದು ಅವರು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights