ತನ್ವೀರ್ ಸೇಠ್ ಕಿವಿಯ ಭಾಗ ತೆಗೆಯುವ ಅನಿವಾರ್ಯತೆ ಇದೆ- ಆರೋಗ್ಯ ಸ್ಥಿತಿ ಸ್ಪಷ್ಟಪಡಿಸಿದ ವೈದ್ಯರು
ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಅವರ ಕಿವಿಯ ಭಾಗವನ್ನು ತೆಗೆಯುವ ಅನಿವಾರ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೌದು… ತನ್ವೀಋ ಸೇಠ್ ಕೊಲೆ ಯತ್ನದಲ್ಲಿ ಕಿವಿ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿದೆ. ಈ ವೇಳೆ ಕಿವಿ ತುಂಡರಿಸಿದ್ದರಿಂದ ಹೊಲಿಗೆ ಹಾಕಲಾಗಿತ್ತು. ಆದರೆ ಆ ಭಾಗ ಕಪ್ಪನೆಯ ಬಣ್ಣಕ್ಕೆ ತಿರುಗಿತ್ತು. ಪರಿಣಾಮ ಹೊಲಿದಿದ್ದ ಕಿವಿಯನ್ನು ತುಂಡರಿಸಿ ಕಪ್ಪನೆಯ ಬಣ್ಣಕ್ಕೆ ತಿರುಗಿದ್ದ ಭಾಗವನ್ನು ತೆಗೆದು ಹಾಕಲಾಗಿದೆ. ಅದನ್ನು ಅವರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಅವರಿಗೇ ನೀಡಿದ್ದೇವೆ.
ಕಿವಿಯ ಭಾಗವನ್ನು ತೆಗೆದಿರುವುದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡುವ ಅಗತ್ಯವಿದೆ. ಕತ್ತಿನ ಭಾಗದ ನರಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ವಲ್ಪ ಊತ ಕಾಣಿಸಿಕೊಂಡಿದೆ. ಹಾಗಾಗಿ ಅವರು ಮಾತನಾಡುವಾಗ, ನಗುವಾಗ ತುಟಿ ಸ್ವಲ್ಪ ಓರೆಯಾದಂತೆ ಕಂಡುಬರುತ್ತಿದೆ. ಮುಂದಿನ ಮೂರು ವಾರಗಳ ನಂತರ ಇದು ಸರಿಹೋಗುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ ಅವರ ದೇಹ ಚಿಕಿತ್ಸೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಇಂದು ಸಂಜೆಯ ವೇಳೆಗೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಚಿಂತನೆ ಇದೆ. ಇನ್ನೂ ಒಂದು ವಾರ ಕಾಲ ಅವರು ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸ್ಥಿತಿಯ ಕುರಿತು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ. ಉಪೇಂದ್ರ ಶೆಣೈ ಮಾಹಿತಿ ನೀಡಿದ್ದಾರೆ.