ತವರನ್ನೇ ಮರೆತ ಮುಖ್ಯಮಂತ್ರಿ ಯಡಿಯೂರಪ್ಪ!

ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೇರಲು ಯಡಿಯೂರಪ್ಪ ಮತ್ತು ಬಿಜೆಪಿಯ ನಿರಂತರ ಕಸರತ್ತಿಗೆ ಸಾಥ್‌ ಕೊಟ್ಟು ಪಕ್ಷ ತೊರೆದು, ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಅನರ್ಹನ ಹಣೆಪಟ್ಟಿ ಕಟ್ಟಿಕೊಂಡಿದ್ದು ಕೆ.ಆರ್‌.ಪೇಟೆ ಶಾಸಕ ನಾರಾಯಣಗೌಡ. ಅಲ್ಲದೆ ನಾರಾಯಣಗೌಡ ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಿದರೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ 1,000 ಕೋಟಿ ಅನುದಾನ ನೀಡುವುದಾಗಿ ಯಡಿಯೂರಪ್ಪನವರು ಆಫರ್‌ ಕೊಟ್ಟಿದ್ದರು. ಇದನ್ನು ನಾರಾಯಣಗೌಡರೇ ಉಪ ಚುನಾವಣಾ ಪ್ರಚಾರದಲ್ಲಿಯೂ ಹೇಳಿಕೊಂಡಿದ್ದರು.

ಉಪ ಚುನಾವಣೆಯ ಪ್ರಚಾರಕ್ಕೆ ಬಂದಿದ್ದ ಯಡಿಯೂರಪ್ಪನವರು ‘ಜನ್ಮಭೂಮಿಯೇ ಕರ್ಮಭೂಮಿ’ ಹುಟ್ಟೂರಿನ ಅಭಿವೃದ್ಧಿಗೆ ಒಂದು ಅವಕಾಶ ಕೊಡಿ, ತವರಿನ ಋಣ ತೀರಿಸುತ್ತೇನೆ ಎಂದು ಮತಯಾಚನೆ ಮಾಡಿ ಬೋಂಗು ಬಿಟ್ಟಿದ್ದರು. ಈ ಬೋಂಗನ್ನೇ ನಂಬಿಕೊಂಡಿದ್ದ ಕೆ.ಆರ್‌.ಪೇಟೆ ಜನರು ಜಿಲ್ಲೆಗೆ ಹೆಚ್ಚಿನ ಕೊಡುಗೆಗಳು ಬಿಜೆಪಿ ಸರ್ಕಾರದಲ್ಲಿ ಬರುತ್ತವೆಂದು ಬಿಜೆಪಿಗೆ ಮತಚಲಾಯಿಸಿದ್ದರು.

ಆದರೆ, ಅಷ್ಟೆಲ್ಲಾ ಬಳಾಂಗು ಬಿಟ್ಟಿದ್ದ ಮುಖ್ಯಮಂತ್ರಿ ಯಡಿಯೂಪ್ಪನವರು 2020-21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಂಡ್ಯ ಜಿಲ್ಲೆಯ ಹೆಸರನ್ನೇ ತೆಗೆದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ವಿಜಯಪುರ ಮತ್ತು ಮಂಡ್ಯ ಜಿಲ್ಲೆಯ ಕುಡಿಯುವ ನೀರಿನ ಕಾಮಗಾರಿಗಳಿಗೆ ‘ಜಲಧಾರೆ’ ಯೋಜನೆಯಡಿ ಕುಮಾರಸ್ವಾಮಿಯವರು 1,400 ಕೋಟಿ ಅನುದಾನ ನೀಡಿದ್ದರು. ಈಗಿನ ಬಜೆಟ್‌ನಲ್ಲಿ ಆ ಯೋಜನೆಯ ಅನುದಾನವನ್ನೂ ಕಡಿತಗೊಳಿಸಿರುವ ಯಡಿಯೂರಪ್ಪನವರು 700 ಕೋಟಿಗೆ ಇಳಿಸಿ, 800 ಕೋಟಿ ಕಡಿತಗೊಳಿಸಿದ್ದಾರೆ. ಇನ್ನು ಕೃಷಿಗೆ ಯಾವ ಸಬ್ಸಿಡಿಯನ್ನೂ ನೀಡದ ಸರ್ಕಾರ, ಮಂಡ್ಯದ ಮೈಷುಗರ್‌ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕಾಗಲೀ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಲೀ ಕವಡೆ ಕಾಸಿನ ಅನುದಾನ ನೀಡಿಲ್ಲ. ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಕಾರ್ಖಾನೆಗಳು ಆರಂಭಗೊಳ್ಳದೆ ಕಂಗಾಲಾಗಿದ್ದಾರೆ.

ನೀಡಲಾಗಿರುವ ಅನುದಾನಗಳಲ್ಲಿ ಹೆಚ್ಚಿನ ಪಾಲನ್ನು ಬೆಂಗಳೂರಿಗೆ ನಡಲಾಗಿದ್ದು, ಬಿಎಂಟಿಸಿಯಲ್ಲಿ ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನೀಡಲು ಮುಂದಾಗಿದ್ದಾರೆ. ಆದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಾರ್ಮೆಂಟ್ಸ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಈ ಸೌಲಭ್ಯ ನೀಡಲಾಗಿಲ್ಲ.  ರಾಜಧಾನಿಯ ಜನರನ್ನು ಓಲೈಸುವ ಕಾಯಕಕ್ಕೆ ಬಿಜೆಪಿ ಸರ್ಕಾರ ಜೋತು ಬಿದ್ದಿದೆ.

ಬಿಜೆಪಿ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಹೊಂದಿದ್ದ ಮಂಡ್ಯ ಜನರಿಗೆ ಯಡಿಯೂರಪ್ಪನವರು ಅನ್ಯಾಯ ಮಾಡಿದ್ದಾರೆ. ಇನ್ನು ಕ್ಷೇತ್ರಕ್ಕೆ 1,000 ಕೋಟಿ ಅನುದಾನವೆಂಬುದು ಮರೀಚೆಕೆ ಎಂಬ ತೀರ್ಮಾನಕ್ಕೆ ಬಂದಿರುವ ಕೆ.ಆರ್‌.ಪೇಟೆ ಜನರು ಸರ್ಕಾರದ ಮೇಲೆ ಅಸಮಧಾನಗೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights