‘ಪೈಲ್ವಾನ್’ ಸಿನಿಮಾ 10 ರೂಪಾಯಿಗೆ ಮಾರಾಟ ಮಾಡಿದವನ ಬಂಧನ…
ಕಿಚ್ಚ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಸೋಷಿಯಲ್ ಮಿಡಿಯಾ ವಾರ್ ನಡುವೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಪೈಲ್ವಾನ್ ಸಿನಿಮಾ ಪೈರಸಿ ವಿಚಾರಕ್ಕೆ ಮತ್ತೋರ್ವನನ್ನ ಪೊಲೀಸರು ಬಂಧಿಸಿದ್ದಾರೆ.
ಹೌದು… ಸುದೀಪ್ ಅಭಿನಯದ ‘ಪೈಲ್ವಾನ್’ ಪೈರಸಿ ಮಾಡಿದ ವಿಚಾರ ಸ್ಯಾಂಡಲ್ವುಡ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ. ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಗಳಿಬ್ಬರ ಅಭಿಮಾನಿಗಳ ನಡುವೆ ಜಾಲತಾಣಗಳಲ್ಲಿ ಜೋರು ಜಗಳಕ್ಕೆ ಕಾರಣವಾಗಿದೆ.
ಅಭಿಮಾನಿಗಳ ಜಗಳದ ಬಳಿಕ ಸ್ಟಾರ್ ನಟರಾದ ಸುದೀಪ್ ಮತ್ತು ದರ್ಶನ್ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ‘ಪೈಲ್ವಾನ್’ ಪೈರಸಿ ಲಿಂಕ್ ಪೋಸ್ಟ್ ಮಾಡಿದ್ದ ಆರೋಪಿ ರಾಕೇಶ್ ಎಂಬ ಯುವಕನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
‘ಪೈಲ್ವಾನ್’ ಸಿನಿಮಾ ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಪ್ರವೀಣ್ ಬಂಧಿತ ಆರೋಪಿ. ನೇತಾಜಿ ನಗರ ನಿವಾಸಿಯಾಗಿರುವ ಪ್ರವೀಣ್ ಮೊಬೈಲ್ ಸರ್ವಿಸ್ ಸೆಂಟರ್ ನಡೆಸುತ್ತಿದ್ದು, ‘ಪೈಲ್ವಾನ್’ ಸಿನಿಮಾ ಡೌನ್ಲೋಡ್ ಮಾಡಿ 10 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
‘ಪೈಲ್ವಾನ್’ ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ‘ಪೈಲ್ವಾನ್’ ಪೈರಸಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದರ ಭಾಗವಾಗಿ ‘ಪೈಲ್ವಾನ್’ ಚಿತ್ರ ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಪ್ರವೀಣ್ ನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.