ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು 9 ತಿಂಗಳ ಕಾಲಾವಕಾಶಬೇಕು: ಯಡಿಯೂರಪ್ಪ

ಕೊರೊನಾ ವೈರಸ್ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಂಭೀರ ಅಪಾಯಕ್ಕೆ ಸಿಲುಕುವಂತೆ ಮಾಡಿದ್ದು, ಮತ್ತೆ ಅದನ್ನು ಸರಿಪಡಿಸಲು ಸುದೀರ್ಘ ಕಾಲಾವಕಾಶಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸ್ಥಿತಿಸ್ಥಾಪಕತ್ವ ಮತ್ತು ಭರವಸೆಗಳ ಮೂಲವಾಗಿದ್ದ ಕೃಷಿ ಪರಿಸ್ಥಿತಿಗಳು ಸಾಕಷ್ಟು ಆಘಾತವನ್ನು ತಂದಿದೆ. ಕೃಷಿ ಕ್ಷೇತ್ರ ಸ್ವಯಂಚಾಲಿತ ವಲಯವಾಗಿದ್ದರು. ಕೃಷಿ ಎಂದಿಗೂ ಸರ್ಕಾರವನ್ನೂ ಅವಲಂಬಿಸಿಲ್ಲ. ಲಾಕ್’ಡೌನ್ ಹಿನ್ನೆಲೆಯಲ್ಲಿ ಕೃಷಿವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಜ್ಯದ ಆರ್ಥಿಕ ಸ್ಥಿತಿ ಅಪಾಯದ ಮಟ್ಟಕ್ಕೆ ಕುಸಿದಿದೆ ಎಂದು ಹೇಳಿದ್ದಾರೆ.

ಆರೋಗ್ಯ ಪರಿಸ್ಥಿತಿ ಸುಧಾರಿಸುವುದರತ್ತ ಸರ್ಕಾರದ ಗಮನವಿದೆ. ಪ್ರಸ್ತುತ ನಾವು ಅತ್ಯಂತ ಪ್ರಮುಖ ಕಾರ್ಯಗಳನ್ನಷ್ಟೇ ಕೈಗೆತ್ತಿಕೊಳ್ಳುತ್ತಿದ್ದೇವೆ. ಉಳಿದ ಕಾರ್ಯಗಳನ್ನು 6 ತಿಂಗಳ ಬಳಿಕ ಮಾಡಲಾಗುತ್ತದೆ. ಆ ಬಳಿಕವಷ್ಟೇ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತ ಕಾರ್ಯಗಳತ್ತ ಗಮನವನ್ನು ಹರಿಸಲಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲು 6 ತಿಂಗಳು ಕಾಲಾವಕಾಶ ಬೇಕಾಗುತ್ತದೆ.

ಭಾರತದ ಜಿಡಿಪಿಯಲ್ಲಿ ಪ್ರಶ್ನಾರ್ಥಕ ಚಿಹ್ನೆಗಳು ಕಂಡು ಬರುತ್ತಿದ್ದು, ಆರ್ಥಿಕ ಹಿಂಜರಿತದಿಂದ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಕೂಡ ಈಗಾಗಲೇ ಆರ್ಥಿಕ ಹಿಂಜರಿತದಿಂದ ಸಮಸ್ಯೆಯಲ್ಲಿ ಸಿಲುಕಿದೆ. ಕೇಂದ್ರ ಸರ್ಕಾರದಿಂದ ಸೂಕ್ತ ರೀತಿಯ ಪರಿಹಾರಗಳು ಸಿಗದಿದ್ದ ಕಾರಣ ರಾಜ್ಯ ಮತ್ತಷ್ಟು ಸಂಕಷ್ಟದಲ್ಲಿದೆ. ಆರ್ಥಿಕ ಯುದ್ಧ ನಡೆಸುವ ಆಗತ್ಯವಿದೆ. ನಮಗೆ ಬೇರೆ ದಾರಿಯಿಲ್ಲ. ಮಾರ್ಚ್ 5ರ ಬಜೆಟ್ ವೇಳೆ ಘೋಷಣೆ ಮಾಡಿದ್ದ ಯೋಜನೆಗಳನ್ನು ಸ್ಥಗಿತಗೊಳಿಸುವ ಅಗತ್ಯವಿದೆ ಎಂದಿದ್ದಾರೆ.

ಪ್ರಸ್ತುತ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇದು ಕೇವಲ ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲ, ಇತರೆ ರಾಜ್ಯಗಳ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಕೇಂದ್ರ ಸರ್ಕಾರ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಲಾಕ್’ಡೌನ್ ಅಂತ್ಯಗೊಂಡ ಬಳಿಕ ತಜ್ಞರು, ಆರ್ಥಿಕ ತಜ್ಞರು ಹಾಗೂ ಚಿಂತಕರೊಂದಿಗೆ ಚರ್ಚೆ ನಡೆಸಿ ನಷ್ಟವನ್ನು ಸರಿದೂಗಿಸುವ ಕಾರ್ಯಗಳನ್ನು ಮಾಡಲಾಗುತ್ತದೆ. ಆರ್ಥಿಕ ಸುಧಾರಣೆಗೆ ಕೃಷಿ ವಲಯ ಪ್ರಮುಖ ಕೊಡುಗೆಯಾಗಿದ್ದು, ಆರ್ಥಿಕತೆ ಮತ್ತೆ ಪುಟಿದೇಳುವ ವಿಶ್ವಾಸ ನನಗಿದೆ. ನಮ್ಮಲ್ಲಿ ಯಾವುದೇ ರೀತಿಯ ವಿಶೇಷ ಪ್ಯಾಕೇಜ್ ಗಳಿಲ್ಲ.

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗೂ ವೈರಸ್ ನಿಯಂತ್ರಿಸಲು ಹಂತ ಹಂತವಾಗಿ ಲಾಕ್’ಡೌನ್ ತೆರವುಗೊಳಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ, ಪ್ರಧಾನಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *