ರಾಜ್ಯ ಸರ್ಕಾರಗಳಿಗೆ ಮನೆ ಮನೆಗೂ ಮದ್ಯ ಮಾರಾಟದ ಸಲಹೆ ಕೊಟ್ಟ ಸುಪ್ರೀಂಕೋರ್ಟ್..!

ಕೊರೋನಾ ವೈರಸ್ ಲಾಕ್ ​ಡೌನ್ ಬಳಿಕ ಮೂರು ದಿನಗಳ ಹಿಂದೆ ತೆರೆಯಲಾಗಿದ್ದ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದ್ದು, 43 ದಿನಗಳ ಅಜ್ಞಾತವಾಸ ಅನುಭವಿಸಿದ್ದ ಪಾನಪ್ರಿಯರು ಇದೀಗ ಏಕಾಏಕಿ ಮದ್ಯದಂಗಡಿಗಳ ಮೇಲೆ ಮುಗಿ ಬಿದ್ದಿದ್ದಾರೆ. ಹೀಗಾಗಿ ಸಾಮಾಜದಲ್ಲಿ ಕೊರೋನಾ ಹರಡದಂತೆ ನೋಡಿಕೊಳ್ಳಲು ಹಾಗೂ ಸಾಮಾಜಿಕ ಅಂತರದ ಹಿತದೃಷ್ಟಿಯಿಂದ ಎಲ್ಲಾ ರಾಜ್ಯಗಳು ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವ ಬದಲು ಹೋಂ ಡೆಲಿವರಿ ಮಾಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಹೌದು ಲಾಕ್ ಡೌನ್ ಅವಧಿಯಲ್ಲೂ ಕರ್ನಾಟಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯ ಮಾರಾಟದ, ಮೂರನೇ ದಿನ ಭರ್ಜರಿ ವ್ಯಾಪಾರ ನಡೆದಿದ್ದು, ಒಂದೇ ದಿನ ಬರೊಬ್ಬರಿ 216 ಕೋಟಿ ರೂಪಾಯಿ ಆದಾಯ ಬಂದಿದೆ.ಮೂಲಗಳ ಪ್ರಕಾರ 3ನೇ ದಿನ 30 ಲಕ್ಷ ಐಎಂಎಲ್ ಲೀಟರ್ ಮದ್ಯ ಸೇಲ್ ಆಗಿದ್ದು, 7 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಒಟ್ಟಾರೆಯಾಗಿ ಒಂದೇ ದಿನ ಅಬಕಾರಿ ಇಲಾಖೆಗೆ 216 ಕೋಟಿ ರೂಪಾಯಿ ಆದಾಯ ಬಂದಿದೆ. ಮೇ 04 ರಂದು ಅಂದರೆ ಮೊದಲ ದಿನ 45 ಕೋಟಿ ರೂಪಾಯಿ  ಲಾಭ ಬಂದಿತ್ತು. ಮೇ 5ರಂದು 197 ಕೋಟಿ ರೂ. ಆದಾಯ ಬಂದಿತ್ತು.  ಮೇ6ರಂದು 216 ಕೋಟಿ ರೂಪಾಯಿ ಆದಾಯ ಬಂದಿದೆ.

ಹೀಗೆ ಎಗ್ಗಿಲ್ಲದೇ ಮದ್ಯ ಖರೀದಿ ಮಾಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ. ಹೀಗಾಗಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿದ್ದು ಇದನ್ನು ತಡೆಯಲು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಮನೆ ಡೆಲಿವರಿ ಸಾಧ್ಯತೆ ಬಗ್ಗೆ ಪ್ರಶ್ನಿಸಿದೆ. ಈ ಹಿಂದೆ ಈ ಬಗ್ಗೆ ಅಬಕಾರಿ ಸಚಿವ ನಾಗೇಶ್ ಕೂಡ ಹೋಂ ಡೆಲಿವರಿ ಬಗ್ಗೆ ಪ್ರಸ್ತಾಪ ಮಾಡಿದಾಗ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ವಿಚಾರವನ್ನು ಅಲ್ಲಿಗೆ ಕೈಬಿಡಲಾಗಿತ್ತು. ಆದರೀಗ ಈ ವಿಚಾರವನ್ನು ಸುಪ್ರೀಂಕೋರ್ಟೇ ಪ್ರಸ್ತಾಪಿಸಿದೆ.

“ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವುದರಿಂದ ಜನ ಸಂದಣಿಗೆ ಹೆಚ್ಚಾಗುತ್ತದೆ. ಈ ಮೂಲಕವೂ ಕೊರೋನಾ ವೈರಸ್‌ ಹರಡುವ ಸಾಧ್ಯತೆ ಇದೆ. ಹೀಗಾಗಿ ಸಾಮಾಜಿಕ ಅಂತರದ ದೃಷ್ಟಿಯಿಂದ ಹೋಂ ಡಿಲೆವರಿ ಸೂಕ್ತ. ಆನ್‌ಲೈನ್ ಮೂಲಕ ಮನೆಗಳಿಗೆ ಮದ್ಯವನ್ನು ವಿತರಿಸಬೇಕು” ಎಂದು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

ಸುಪ್ರೀಂಕೋರ್ಟ್ ಸಲಹೆಯನ್ನು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಾ..? ಅಥವಾ ಇಲ್ಲಿಗೆ ಕೈ ಬಿಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights