ಲಾಕ್‌ಡೌನ್: ರಾಜ್ಯದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಶೇ.72 ರಷ್ಟು! ಕಂಪ್ಲೀಟ್ ಡಿಟೈಲ್ಸ್

ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದ ಸಂದರ್ಭದಲ್ಲಿ  ಕರ್ನಾಟದಲ್ಲಿ 100 ಕೆಲಸಗಾರರಲ್ಲಿ 70 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಂದರೆ, ಬರೋಬ್ಬರಿ ಶೇ.72 ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಜಿಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ತಿಳಿಸಿದೆ.

ಲಾಕ್‌ಡೌನ್‌ ಆದ ನಂತರದಲ್ಲಿ ಉಂಟಾದ ಸಮಸ್ಯೆಗಳನ್ನು ಗಮನಿಸಿದ್ದ ವಿಶ್ವವಿದ್ಯಾನಿಲಯವು ಕರ್ನಾಟಕದಲ್ಲಿ ರೈತರು, ಕಾರ್ಮಿಕರು ಹಾಗೂ ಮಹಿಳೆಯರಿಗೆ ಉಂಟಾದ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿದೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 10 ನಾಗರಿಕ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸಮೀಕ್ಷೆ ನಡೆಸಿದ ಅಜೀಂ ಪ್ರೇಮ್‌ ಜೀ ವಿವಿಯು ಉದ್ಯೋಗ ನಷ್ಟದ ಬಗ್ಗೆ ವಿವರಿಸಿದೆ.

ಸಮೀಕ್ಷೆಯಲ್ಲಿ  5 ಸಾವಿರ ಕೆಲಸಗಾರರನ್ನು ದೂರವಾಣಿ ಕರೆಗಳ ಮೂಲಕ ಸಂಪರ್ಕಿಸಲಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಜನರ ಜೀವನ ಮಟ್ಟ, ಸರ್ಕಾರ ನೀಡಿದ ಪರಿಹಾರ ಹಾಗೂ ಇತರ ನೆರವುಗಳು ಹಾಗೂ ಬಿಕ್ಕಟ್ಟನ್ನು ನಿಬಾಯಿಸಲು ಸರ್ಕಾರದ ಪರಿಹಾರ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗಿದೆ ಎಂದು ವಿವಿ ತಿಳಿಸಿದೆ.

ರಾಜ್ಯದಲ್ಲಿ ಸ್ವಯಂ ಉದ್ಯೋಗಿಗಳು, ಗುತ್ತಿಗೆ ಆಧಾರದ ಉದ್ಯೋಗಿಗಳು ಹಾಗೂ ಮಾಸಿಕ ಸಂಬಳ ಪಡೆಯುವವರನ್ನು ಸಮೀಕ್ಷೆ ಒಳಪಡಿಸಲಾಗಿದೆ. ಸಮೀಕ್ಷೆಯಲ್ಲಿ ತಿಳಿದುಬಂದ ಮಾಹಿತಿ ಪ್ರಕಾರ ನಗರ ಪ್ರದೇಶಗಳಲ್ಲಿ ಶೇ. 76 ರಷ್ಟು ಕಾರ್ಮಿಕರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ  ಶೇ. 66 ರಷ್ಟು ಕೆಲಸಗಾರರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಕೃಷಿಯೇತರ ಸ್ವಯಂ ಉದ್ಯೋಗಿಗಳು, ಕೂಲಿ ಕಾರ್ಮಿಕರು , ಈಗಲೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆದಾಯದಲ್ಲಿ ಮೂರನೇ ಎರಡರಷ್ಚು ಭಾಗ ಕಡಿಮೆಯಾಗಿದೆ. ಶೇ. 44 ರಷ್ಟು ಮಂದಿಯ ವೇತನದಲ್ಲಿ ಕಡಿತ ಮಾಡಲಾಗಿದೆ. 10 ಕುಟುಂಬಗಳ ಪೈಕಿಯಲ್ಲಿ 6 ಕುಟುಂಬಗಳಿಗೆ ವಾರಕ್ಕೆ ಬೇಕಾಗುವಷ್ಟು ಅತ್ಯವಶ್ಯಕ ವಸ್ತುಗಳನ್ನು ಖರೀದಿಸಲು ಹಣವೇ ಸಿಗುತ್ತಿಲ್ಲ ಎಂಬುದು ಕಂಡುಬಂದಿದೆ.

ಲಾಕ್ ಡೌನ್ ಹೇರಿದ ಬಳಿಕ ಆರ್ಥಿಕ ಹಾಗೂ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಚೇತರಿಕೆ ಪ್ರಮಾಣ ಕುಸಿದಿದೆ. ಮುಂದಿನ ಆರು ತಿಂಗಳವರೆಗೂ ಪಡಿತರವನ್ನು ಕಟ್ಟಕಡೆಯ ಜನರಿಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರೆಸಬೇಕೆಂಬ ಸಲಹೆಗಳು ಕೇಳಿಬಂದಿದೆ.

ತಿಂಗಳಿಗೆ ಏಳು ಸಾವಿರದಂತೆ ಎರಡು ತಿಂಗಳು ನಗದು ವರ್ಗಾವಣೆ ಮಾಡಬೇಕು, ಮನ್ರೇಗಾದಂತಹ ಯೋಜನೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು, ನಗರ ಉದ್ಯೋಗ ಖಾತ್ರಿ ಯೋಜನೆ ಪರಿಚಯಿಸಬೇಕು, ಮೂಲ ಸೇವೆಗಳು ಮತ್ತಿತರ ಕಡೆಗಳಲ್ಲಿ ಹೂಡಿಕೆ ಮಾಡಬೇಕೆಂಬ ಸಲಹೆಗಳನ್ನು ವಿಶ್ವವಿದ್ಯಾನಿಲಯ ಮಂಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights