ಈ ರೀತಿಯ ಗಣೇಶ ಆಚರಣೆ ದೇಶದಲ್ಲೇ ಇದೇ ಮೊದಲ ಬಾರಿಗೆ ನಡೆದ

ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರಿಸ್‌) ಬಿಟ್ಟು ಮಣ್ಣಿನ ಗಣೇಶನನ್ನು ತರುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ ಆಗುತ್ತಿದೆ. ಈ ಮಧ್ಯೆ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ನಿಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶನನ್ನು ನೀವೇ ತಯಾರಿಸುವ ಪ್ರಯೋಗ ಭಾನುವಾರ ನಗರದಲ್ಲಿ ನಡೆಯಿತು. ಇದಕ್ಕಾಗಿ ನ್ಯಾಷನಲ್‌ ಕಾಲೇಜು ಮೈದಾನ ಸಾಕ್ಷಿಯಾಯಿತು.

ಬೃಹತ್‌ ಮೈದಾನದಲ್ಲಿ ಏಕಕಾಲದಲ್ಲಿ ಸುಮಾರು ಎರಡು-ಮೂರು ಸಾವಿರ ಜನ ಒಂದೇ ವೇದಿಕೆಯಲ್ಲಿ ಬಂದು, ಗಣೇಶ ಮೂರ್ತಿಗಳನ್ನು ತಯಾರಿಸಿದರು. ಇದರಲ್ಲಿ ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರೆಲ್ಲರೂ ಭಾಗವಹಿಸಿ ಗಮನಸೆಳೆದರು. ಈ ಮೂಲಕ ಗಿನ್ನಿಸ್‌ ದಾಖಲೆ ಬರೆಯಿತು. ಬೆಂಗಳೂರು ಗಣೇಶ ಉತ್ಸವ (ಬಿಜಿಯು) ಸಮಿತಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಕಳೆದ 57 ವರ್ಷಗಳಿಂದ ಗಣೇಶ ಉತ್ಸವವನ್ನು ನೆರವೇರಿಸುತ್ತಾ ಬಂದಿರುವ ಬೆಂಗಳೂರು ಗಣೇಶ ಉತ್ಸವ ಸಮಿತಿ, 2010ರಿಂದ ಪ್ಲಾಸ್ಟಿಕ್‌ ಮುಕ್ತ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸುತ್ತಿದೆ. 57ನೇ ವರ್ಷದ ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಉದ್ದೇಶಿಸಲಾಗಿತ್ತು. ಯಾವುದೇ ವಯೋಮಿತಿಯಿಲ್ಲದೆ ಒಂದೇ ಸ್ಥಳದಲ್ಲಿ ಎರಡರಿಂದ ಮೂರು ಸಾವಿರ ಜನ ಉಚಿತವಾಗಿ ಮಣ್ಣು ಪಡೆದು ಒಂದೇ ಕಡೆ ಮೂರ್ತಿಗಳನ್ನು ತಯಾರಿಸಲು ವೇದಿಕೆ ಕಲ್ಪಿಸಲಾಗಿತ್ತು.

ಈ ರೀತಿಯ ಗಣೇಶ ಹಬ್ಬ ಆಚರಣೆ ದೇಶದಲ್ಲೇ ಇದೇ ಮೊದಲ ಬಾರಿಗೆ ನಡೆಯುತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಗಣೇಶ ಮೂರ್ತಿ ತಯಾರಿಸಲು ಆಸಕ್ತಿ ತೋರಿದರು. ಆಸಕ್ತರಿಗೆ ಸ್ಥಳದಲ್ಲೇ ಪ್ರಾಥಮಿಕ ತರಬೇತಿ ನೀಡಲಾಯಿತು. ಇನ್ನು ಕೆಲವರು ಗಣೇಶ ತಯಾರಿಸುವ ವಿಧಾನವನ್ನು ಯ್ಯೂಟೂಬ್‌ನಿಂದ ಮಾಹಿತಿ ಪಡೆದು, ತಯಾರಿಸಿದರು. ಇದೊಂದು ವಿನೂತನ ಪ್ರಯೋಗ ಎಂದು ಸಮಿತಿ ನಿರ್ದೇಶಕ ಎಸ್‌.ಎಂ. ನಂದೀಶ್‌ ತಿಳಿಸಿದರು.

ಪರಿಸರ ಸ್ನೇಹಿ ಜತೆಗೆ ಇದು ನಾಡಿನ ಸಂಸ್ಕೃತಿ, ಕಲೆ ಮತ್ತು ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವೂ ಆಗಿದೆ. ಇಲ್ಲಿ ಮಣ್ಣಿನ ಬೀಜದ ಉಂಡೆ (ಕ್ಲೇ ಸೀಡ್‌ ಬಾಲ್‌ ಗಣೇಶ) ತಯಾರಿಸಲು ಅವಕಾಶ ನೀಡಲಾಗಿತ್ತು. ಇದೇ ರೀತಿಯ ಮತ್ತೂಂದು ಪ್ರಯತ್ನ ಶೀಘ್ರದಲ್ಲೇ ವಿದ್ಯಾರಣ್ಯ ಯುವಕ ಸಂಘ ಕೂಡ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಗಣೇಶ ಮೂರ್ತಿ ಮರುಬಳಕೆ: 2010ರಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಬಳಸಲು ಮುಂದಾದ ಬೆಂಗಳೂರು ಗಣೇಶ ಉತ್ಸವ ಸಮಿತಿ, ಅಲ್ಲಿಂದ ಈವರೆಗೆ 9 ವರ್ಷಗಳ ಕಾಲ ಒಂದೇ ಗಣೇಶನನ್ನು ಮರು ಬಳಕೆ ಮಾಡುತ್ತಿದೆ. ಇದೇ ಮೂರ್ತಿಯನ್ನು ಮುಂದಿನ 20ವರ್ಷಗಳ ಕಾಲ ಬಳಸಲು ತೀರ್ಮಾನಿಸಲಾಗಿದೆ.

ಕಳೆದ ಒಂಬತ್ತು ವರ್ಷಗಳಿಂದ ಹಳೆಯ ದೊಡ್ಡ ಗಣಪತಿ ಮೂರ್ತಿ ಜತೆಗೆ ಮಣ್ಣಿನ ಚಿಕ್ಕ ಮೂರ್ತಿಯನ್ನು ಕೂರಿಸಲಾಗುತಿದ್ದು, 11 ದಿನಗಳ ಪೂಜೆ ಬಳಿಕ ಮಣ್ಣಿನ ಗಣೇಶ ಮೂರ್ತಿಯನ್ನು ಸಾಂಕೇತಿಕವಾಗಿ ನೀರಿನ ಟ್ಯಾಂಕರ್‌ಗಳಲ್ಲಿ ಮುಳುಗಿಸಲಾಗುತ್ತಿದೆ. ನಂತರ ಟ್ಯಾಂಕರ್‌ ನೀರನ್ನು ಗಿಡಗಳಿಗೆ ಸಿಂಪಡಿಸುವ ಮೂಲಕ ಜಾಗೃತಿ ಮೂಡಿಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights