ಸುವೇಂದು ಅಧಿಕಾರಿ v/s ದಿಲೀಪ್ ಘೋಷ್: ಬಂಗಾಳ ಬಿಜೆಪಿಯಲ್ಲಿ ಬಿರುಕು; ಸಮನ್ವಯಕ್ಕಿಂತ ಹೆಚ್ಚಿದ ಸಂಘರ್ಷ!

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮೂರು ತಿಂಗಳು ಕಳೆದಿದೆ. ಆದರೆ, ಬಂಗಾಳ ಬಿಜೆಪಿ ಘಟಕವು ಇನ್ನೂ ಸಮನ್ವಯ ಸಮಿತಿಯನ್ನು ರಚಿಸಿಲ್ಲ.

ಪಕ್ಷದ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದ ಬಣಗಳ ನಡುವಿನ ಒಳ ವೈಷಮ್ಯಗಳು ಇದಕ್ಕೆ ಕಾರಣ ಎಂದು ಮೂಲಗಳು ಆರೋಪಿಸಿವೆ.

ಬಿಜೆಪಿ ನಿಯಮಾವಳಿಯ ಪ್ರಕಾರ, ಶಾಸಕರು ಮತ್ತು ರಾಜ್ಯ ಘಟಕದ ನಾಯಕರ ನಡುವೆ ಸಂವಹನ ನಡೆಸಲು ಅನುಕೂಲವಾಗುವಂತೆ ಬಿಜೆಪಿ ಅಧಿಕಾರದಲ್ಲಿರುವ ಅಥವಾ ಪ್ರತಿಪಕ್ಷದಲ್ಲಿ ಇರುವ ಪ್ರತಿಯೊಂದು ರಾಜ್ಯದಲ್ಲೂ ಸಮನ್ವಯ ಸಮಿತಿ ರಚಿಸುವುದು ಕಡ್ಡಾಯವಾಗಿದೆ. ಆದರೆ, ಬಂಗಾಳದಲ್ಲಿ ಇದು ಇನ್ನೂ ರಚನೆಯಾಗಿಲ್ಲ.

ಘೋಷ್ ಮತ್ತು ಅವರ ಬೆಂಬಲಿಗರು ಸುವೇಂದು ಅಧಿಕಾರಿ ಬಣದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಮತ್ತು ವಿರೋಧಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ನಮ್ಮ ಪಕ್ಷದಲ್ಲಿ, ಸಮನ್ವಯ ಸಮಿತಿಯು ಬಹಳ ಮುಖ್ಯವಾಗಿದೆ. ನಾವು ಇದನ್ನು ಎರಡು ತೋಳುಗಳ (ಚುನಾಯಿತ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು) ನಡುವಿನ ಸೇತುವೆಯೆಂದು ಪರಿಗಣಿಸುತ್ತೇವೆ. ಈ ಸಮಿತಿಯು ನೀತಿ ನಿರ್ಧಾರಗಳು, ವಿಧಾನಸಭೆಯಲ್ಲಿ ಪ್ರಸ್ತಾಪಿಸಬೇಕಾದ ಸಮಸ್ಯೆಗಳು, ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ವಿಂಗಡಿಸುತ್ತದೆ. ಚುನಾಯಿತ ಪ್ರತಿನಿಧಿಗಳು ಯಾವ ವಿಷಯದ ಮೇಲೆ ಸಾರ್ವಜನಿಕವಾಗಿ ಹೋಗುತ್ತಾರೆ ಎಂಬುದನ್ನು ಪಕ್ಷವು ತಿಳಿದುಕೊಳ್ಳಬೇಕು. ಅದಕ್ಕಾಗಿ ಈ ಸಮಿತಿ ಅತ್ಯಗತ್ಯ’’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ್ದು ತಪ್ಪಾಯಿತು; ಟಿಎಂಸಿಗೆ ಹಿಂದಿರುಗಲು ಅವಕಾಶ ಕೊಡಿ: ಬಂಗಾಳ ಬಿಜೆಪಿ ಸೇರಿದ್ದವರ ಪರದಾಟ!

ಇತ್ತೀಚೆಗೆ ಪಕ್ಷದ ನಾಯಕರ ಸಭೆ ನಡೆಸಿದ್ದು, ಸಭೆಯಲ್ಲಿ, ಬಿಜೆಪಿ ಶಾಸಕರು ಯಾವುದೇ ಪ್ರಮುಖ ಸಾರ್ವಜನಿಕ ನಡೆಗಳನ್ನು ಮಾಡುವ ಮೊದಲು ಪಕ್ಷವನ್ನು ಸಂಪರ್ಕಿಸಬೇಕು ಎಂದು ಘೋಷ್ ಹೇಳಿದ್ದರು.

“ಚುನಾವಣೆಯ ನಂತರ ಅಧಿಕಾರಿಯು ದೆಹಲಿಗೆ ಹಲವಾರು ಭಾರಿ ಭೇಟಿ ಕೊಟ್ಟಿದ್ದಾರೆ. ಪ್ರತಿ ಬಾರಿಯೂ ಅವರ ಭೇಟಿಯ ಬಗ್ಗೆ ನಮಗೆ ತಿಳಿದಿಲ್ಲ ಎಂದು ಘೋಷ್ ಹೇಳಿದ್ದಾರೆ. ಸಭೆಯಲ್ಲಿ ಘೋಷ್ ಅವರ ಟೀಕೆಗಳು ಅಧಿಕಾರಿಯ ವಿರುದ್ಧವಾಗಿವೆ ಎಂಬುದು ಸ್ಪಷ್ಟವಾಗಿದೆ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಒಂದು ಕಾಲದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ವಿಶ್ವಾಸಾರ್ಹ ನಾಯಕನಾಗಿದ್ದ ಅಧಿಕಾರಿಯು ಚುನಾವಣೆಗೆ  ಕೆಲವು ತಿಂಗಳುಗಳ ಮುನ್ನ ಟಿಎಂಸಿ ತೊರೆದ ಬಿಜೆಪಿ ಸೇರಿದರು.

ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ ನಂತರ ಕೇಸರಿ ಘಟಕದಲ್ಲಿ ಅಧಿಕಾರಿಯ ಪ್ರಾಬಲ್ಯ ಹೆಚ್ಚಿತು. ಇದು ಘೋಷ್ ಮತ್ತು ಅವರ ಬೆಂಬಲಿಗರನ್ನು ಅಸಮಾಧಾನಗೊಳಿಸಿದೆ ಎಂದು ಪಕ್ಷದ ಇನ್ನೊಂದು ಮೂಲಗಳು ಹೇಳಿವೆ.

ಪರಿಣಾಮವಾಗಿ, ಅವರು ಅಧಿಕಾರ ಬಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಸಮನ್ವಯ ಸಮಿತಿಯ ರಚನೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಂಗಾಳ: ಮಾಜಿ ಕಾಂಗ್ರೆಸ್ ಅಧ್ಯಕ್ಷ ಸೋಮೆನ್ ಮಿತ್ರಾ ಅವರ ಪತ್ನಿ ಟಿಎಂಸಿಗೆ ಮರಳುವ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights