ಒಂದೇ ತಿಂಗಳಿನಲ್ಲಿ 50 ಲಕ್ಷ ಉದ್ಯೋಗ ನಷ್ಟ: 4 ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 1.89 ಕೋಟಿ

ಜುಲೈ ತಿಂಗಳೊಂದರಲ್ಲೇ ಸುಮಾರು 50 ಲಕ್ಷ ಉದ್ಯೋಗಿಗಳು ಉದ್ಯೂಗ ಕಳೆದು ಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಯ ಅಂಕಿ ಅಂಶಗಳು ತಿಳಿಸಿವೆ.

CMIE ಭಾರತದ ಒಂದು ಪ್ರಮುಖ ವ್ಯವಹಾರ ಮಾಹಿತಿಯ ಸ್ವತಂತ್ರ ಚಿಂತನಾ ಕೇಂದ್ರವಾಗಿದೆ. ಇದನ್ನು 1976 ರಲ್ಲಿ ಸ್ಥಾಪಿಸಲಾಗಿದೆ. ಇದು ನಿರಂತರವಾಗಿ ಭಾರತದ ಆರ್ಥಿಕತೆಯ ಬಗ್ಗೆ ಅಧ್ಯಯನ ಮಾಡುತ್ತಾ ಬರುತ್ತಿದೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏಪ್ರಿಲ್‌ನಿಂದ 1.89 ಕೋಟಿಗೆ ಏರಿದೆ ಎಂದು ಅದು ತಿಳಿಸಿದೆ.

ಅಂಕಿಅಂಶಗಳ ಪ್ರಕಾರ ಜೂನ್‌ನಲ್ಲಿ ಸುಮಾರು 39 ಲಕ್ಷ ಜನರು ಉದ್ಯೋಗ ಗಳಿಸಿದರೂ, ಜುಲೈನಲ್ಲಿ ಸುಮಾರು 50 ಲಕ್ಷ ಉದ್ಯೋಗಗಳು ನಷ್ಟವಾಗಿದೆ.

ಏಪ್ರಿಲ್‌ನಲ್ಲಿ 1.77 ಕೋಟಿ ನಿಯಮಿತ ಸಂಬಳ ಪಡೆಯುವ ಉದ್ಯೋಗಿಗಳು ಉದ್ಯೋಗ ಕಳೆದು ಕೊಂಡಿದ್ದಾರೆ. ಅಲ್ಲದೆ ಮೇ ತಿಂಗಳಲ್ಲಿ 10 ಲಕ್ಷ ಉದ್ಯೋಗಗಳು ನಷ್ಟವಾಗಿದೆ.

“ನಿಯಮಿತ ಸಂಬಳ ಪಡೆಯುವ ಉದ್ಯೋಗಗಳು ಸುಲಭವಾಗಿ ಕಳೆದುಹೋಗುವುದಿಲ್ಲ, ಒಮ್ಮೆ ಕಳೆದುಹೋದರೆ ಅವುಗಳನ್ನು ಮತ್ತೆ ಪಡೆಯುವುದು ಸಹ ಕಷ್ಟ. ಆದ್ದರಿಂದ ಅವರ ಸಂಖ್ಯೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿವೆ” ಎಂದು CMIE ಕೇಂದ್ರದ ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ.

“ನಿಯಮಿತ ಸಂಬಳದ ಉದ್ಯೋಗಗಳು 2019-20 ರಲ್ಲಿ ಸರಾಸರಿಗಿಂತ ಸುಮಾರು 1.90 ಕೋಟಿ ಕಡಿಮೆಯಾಗಿದೆ. ಇದು ಕಳೆದ ಹಣಕಾಸು ವರ್ಷದ ಮಟ್ಟಕ್ಕಿಂತ ಶೇಕಡಾ 22 ರಷ್ಟು ಕಡಿಮೆಯಾಗಿದೆ” ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ CMIE ಅಂಕಿಅಂಶವು ಈ ಅವಧಿಯಲ್ಲಿ ಸುಮಾರು 68 ಲಕ್ಷ ದೈನಂದಿನ ವೇತನ ಪಡೆಯುವವರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಆದರೆ ಈ ಅವಧಿಯಲ್ಲಿ ಸುಮಾರು 1.49 ಕೋಟಿ ಜನರು ಕೃಷಿಯಲ್ಲಿ ತೊಡಗಿದರು ಎಂದು ಹೇಳಿದೆ.

ಕೊರೊನಾ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಹಲವಾರು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಅದರ ಜೊತೆಗೆ ವೇತನ ಕಡಿತ ಮತ್ತು ವೇತನವಿಲ್ಲದೆ ರಜೆಯಂತಹ ನಿರ್ಧಾರವನ್ನು ಕೂಡಾ ಕೈಗೊಂಡಿದೆ.

ಕೈಗಾರಿಕಾ ಸಂಸ್ಥೆಗಳು ಮತ್ತು ಹಲವಾರು ಅರ್ಥಶಾಸ್ತ್ರಜ್ಞರು ಸಾಮೂಹಿಕ ಉದ್ಯೋಗ ನಷ್ಟವನ್ನು ತಪ್ಪಿಸಲು ಮತ್ತು ಸಾಂಕ್ರಾಮಿಕ ರೋಗದ ದಾಳಿಯಿಂದ ಬದುಕುಳಿಯಲು ಉದ್ಯಮಗಳಿಗೆ ಸರ್ಕಾರದ ಬೆಂಬಲವನ್ನು ಕೋರಿದ್ದಾರೆ.

ಜುಲೈ ತಿಂಗಳಲ್ಲಿ 5 ಮಿಲಿಯನ್ ಉದ್ಯೋಗಗಳು ನಷ್ಟವಾಗಿದೆ. ಏಪ್ರಿಲ್‌ನಿಂದ ಒಟ್ಟು 18.9 ಉದ್ಯೋಗಗಳು ನಷ್ಟವಾಗಿದೆ. ಇದು ಮಾನಸಿಕ ಆರೋಗ್ಯ, ಮನೆ ಹಿಡುವಳಿ ಉಳಿತಾಯ ಮತ್ತು ಖರ್ಚಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಈ ಬಗ್ಗೆ ಚರ್ಚೆ ಯಾಕೆ ಆಗುತ್ತಿಲ್ಲ ಎಂದು ಪತ್ರಕರ್ತೆ ಫಾಯೆ ಡಿ’ಸೋಜಾ ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ:  ಕೊರೊನಾ: ಬೆಂಗಳೂರಿನ 50,000 ಅಂಗಡಿಗಳಿಗೆ ಶಾಶ್ವತ ಬೀಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights