ಕೊರೊನಾ ವೈರಸ್‌: ಮೂಲ, ಸದ್ಯದ ಪರಿಸ್ಥಿತಿ ಮತ್ತು ಸುರಕ್ಷತೆ ಬಗ್ಗೆ ತಿಳಿಯಿರಿ

ಕೊರೊನಾ ವೈರಸ್‌ ಇದಾಗಲೇ ಜಾಗತೀಕರಣಗೊಂಡಿದೆ. 76 ದೇಶಗಳಿಗೆ ಹಬ್ಬಿ ಸುಮಾರು 3200 ಜನರನ್ನು ಬಲಿ ತೆಗೆದುಕೊಂಡಿದೆ. ಈ ಸೋಂಕು ತಗುಲಿದ 100 ಜನರಲ್ಲಿ ಸುಮಾರು 4 ಜನ ಮರಣ ಹೊಂದುತ್ತಾರೆಂದು ಅಂದಾಜುಮಾಡಲಾಗಿದೆ. ಅಂದರೆ ಉಳಿದ 96 ಜನ ಗುಣಮುಖರಾಗುತ್ತಾರೆ. 30ಕ್ಕೂ ಹೆಚ್ಚು ವಯಸ್ಸಿನವರಿಗೆ ಸಾಮಾನ್ಯವಾಗಿ ಕಾಯಿಲೆ ಕಂಡುಬರುವುದಾಗಿದೆ. 60 ದಾಟಿದವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿರುವುದಾಗಿದೆ. ಅದರಲ್ಲೂ ಸಿಗರೇಟ್ ಸೇವನೆಯಿಂದ ಶ್ವಾಸಕೋಶ ಹಾನಿಯಾಗಿದ್ದರೆ ಅಥವಾ ಅಸ್ತಮಾ ಮತ್ತು ಇತರೆ ಶ್ವಾಸಕೋಶದ ಕಾಯಿಲೆಗಳಿದ್ದರೆ ಹೆಚ್ಚು ಸಾವಿಗೀಡಾಗುವ ಸಾಧ್ಯತೆ ಇದೆ.

ಈ ವೈರಾಣು ಒಂದು ಗುಂಪಿಗೆ ಸಂಬಂಧಪಟ್ಟಿದ್ದಾಗಿದ್ದರು ಇದು ಹೊಸತೇ ಆಗಿದೆ. ಗುಂಪು ಹಳೆಯದು ಅದರ ವೈರಾಣು ಇದುವರೆಗೂ ತಿಳಿದಿದ್ದಾಗಿಲ್ಲ. ಮೊನ್ನೆ ತಾನೆ ಇದಕ್ಕೆ ಕೋವಿಡ್-19 ಎಂದು ನಾಮಕರಣ ಮಾಡಲಾಗಿದೆ. ಇದರ ಹುಟ್ಟು ಚೈನಾದ ವೂಹಾನ್ ಪ್ರಾಂತ್ಯದಲ್ಲಿ ಮಾಂಸದ ಮಾರುಕಟ್ಟೆಯಲ್ಲಿ. ಅಲ್ಲಿ ಸಾಕಿದ ಪ್ರಾಣಿಗಳ ಮಾಂಸ, ಕಾಡು ಪ್ರಾಣಿಗಳ ಮಾಂಸ ಎಲ್ಲವನ್ನೂ ಒಂದೇ ಜಾಗದಲ್ಲಿ ಅಕ್ಕಪಕ್ಕದಲ್ಲಿ ಜನಜಂಗುಳಿಯ ನಡುವೆ ಮಾರಾಟ ಮಾಡಲಾಗುತ್ತದೆ. ಕಾಡು ಪ್ರಾಣಿಗಳ ಜೊತೆ ಹೊಂದಿಕೊಂಡು ಯಾವ ಕಾಟವೂ ಕೊಡದೇ ಶತಮಾನಗಳಿಂದ ಬದುಕುವ ವೈರಾಣುಗಳು ಬೇರೆ ಪ್ರಾಣಿಗಳ ಮಾಂಸಕ್ಕೆ ಸೇರಿ ರೋಗಾಣುವಾಗಿ ಪರಿಣಮಿಸುತ್ತವೆ. ಇವುಗಳು ಇಂತಹ ಸ್ಥಳಗಳಲ್ಲಿ ಹೊಸದಾಗಿ ಮಾರ್ಪಾಡಾಗುವ ಸಾಧ್ಯತೆಗಳು ಹೆಚ್ಚು.

ರೋಗಶಾಸ್ತ್ರದ ಹಳೆಯ ಮಾತಿನಂತೆ ವಿಚ್ಛೇದನ ಪಡೆದ ಗಂಡು ಮತ್ತು ಹೆಂಗಸು ಮರುಮದುವೆಯಾಗಿ ಸಂಸಾರ ಮಾಡುತ್ತಿದ್ದಾಗ ಮನೆಯಲ್ಲೊಂದು ದಿನ ಎಲ್ಲಿಲ್ಲದ ಗಲಾಟೆ ಗದ್ದಲ. ಆಗ ಹೆಂಡತಿ ಗಂಡನಿಗೆ “ನೋಡಿ ಇಲ್ಲಿ ನನ್ನೆರಡು ಮಕ್ಕಳು ನಿಮ್ಮೆರಡು ಮಕ್ಕಳು ನಮ್ಮಿಬ್ಬರ ಮಕ್ಕಳ ಜೊತೆ ಗಲಾಟೆ ಮಾಡುತ್ತಿದ್ದಾರೆ ಎನ್ನುತ್ತಾಳೆ” ಹೀಗೆ ಮಿಶ್ರಣಗೊಂಡ ವೈರಾಣುಗಳು ಹೊಸಜಾಗ ಹೊಸತಾಣದಲ್ಲಿ ತನ್ನನ್ನು ತಾನು ಉಳುಸಿಕೊಳ್ಳಲು ಹೊಸದಾಗಿ ಮಾರ್ಪಾಟಾಗುತ್ತವೆ.

ಜಗತ್ತಿನಲ್ಲಿ ವೈರಾಣುಗಳೇ ಮೊದಲ ಜೀವಿಗಳೆಂದು ಪರಿಗಣಿಸುತ್ತಾರೆ. ಅವುಗಳು ಜೀವಿಗಳೆಂದು ಹೇಳುವುದು ಸುಲಭವಲ್ಲ. ಆದರೆ ಜೀವಕ್ಕೆ ಬೇಕಾಗಿರುವ ಮೂಲಧಾತು ಅಥವಾ Code ಎನ್ನಲಾಗುವ ಡಿಎನ್‌ಎ ಅಥವಾ ಆರ್‌ಎನ್‌ಎ ಯನ್ನು ಮಾತ್ರ ಒಳಗೊಂಡಿರುತ್ತದೆ. ಆದರೆ ಅದು ಅದರ ಸಂತಾನೋತ್ಪತ್ತಿಗೆ ಇನ್ನೊಂದು ಜೀವಿಯ ಜೀವಕೋಶಕ್ಕೆ ಹೊಕ್ಕು ಅದರ ಜೈವಿಕ ತಂತ್ರಗಾರಿಕೆಯನ್ನು ಅಪಹರಿಸಿ ತನ್ನದಾಗಿಸಿಕೊಂಡು ತನ್ನನ್ನು ತಾನೇ ಮಿಲಿಯನ್‌ ಗಟ್ಟಲೆ ವರ್ಷಗಳಲ್ಲಿ ಮರುಸೃಷ್ಟಿ ಮಾಡಿಕೊಳ್ಳುತ್ತದೆ. ಹಾಗೆ ಮಾಡಿದ ನಂತರ ತನಗೆ ಆಶ್ರಯ ಕೊಟ್ಟ ಜೀವಕೋಶವನ್ನು ಒಡೆದು ಪುಡಿ ಮಾಡುತ್ತದೆ. ಈ ಕರೋನಾ ವೈರಸ್‌ ಶ್ವಾಸಕೋಶಕ್ಕೆ ತಗುಲಿ ಅಲ್ಲಿ ದೇಹದ ರೋಗನಿರೋಧಕ ಶಕ್ತಿಯ ಹೋರಾಟದಿಂದ ದ್ರವಶ್ರಾವ್ಯ ಉಂಟಾಗಿ ಶ್ವಾಸಕೋಶದ ಮೂಲಕೆಲಸವಾದ ರಕ್ತಕ್ಕೆ ಆಮ್ಲಜನಕವನ್ನು ಪ್ರತಿ ಉಸಿರಿನಲ್ಲೂ ಒದಗಿಸುವ ಕಾರ್ಯಕ್ಕೆ ಕುತ್ತು ಬರುತ್ತದೆ. ಹಾಗೆಯೇ ವಿಷ ಅನಿಲ ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುವ ಪ್ರಕ್ರಿಯೆಗೂ ತೊಂದರೆಯಾಗುತ್ತದೆ.

ಇಂತಹ ಸಂದರ್ಭದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಅತ್ಯಂತ ಅವಶ್ಯಕ. ಭಾರತ ದೇಶದಲ್ಲಿ ಇದು ಹರಡಿದಲ್ಲಿ ಎಷ್ಟರ ಮಟ್ಟಿಗೆ ಆಸ್ಪತ್ರೆಯ ಹಾಸಿಗೆ, ಕೃತಕ ಉಸಿರಾಟದ ವ್ಯವಸ್ಥೆ, ರೋಗಿಗಳನ್ನು ಪ್ರತ್ಯೇಕಿಸಿ ಇಡುವ ವ್ಯವಸ್ಥೆಗೆ ನಾವು ಸಿದ್ಧರಾಗಿದ್ದೇವೆ ಎನ್ನುವುದು ದೊಡ್ಡ ಪ್ರಶ್ನೆಯೇ ಹೌದು. ಕೇರಳ ಕಳೆದ ಬಾರಿ ಕಂಡು ಬಂದ ನಿಫಾ ವೈರಸ್‌ನ್ನು ಮತ್ತು ಇತ್ತೀಚೆಗೆ ಕರೋನಾ ಕಂಡುಬಂದಾಗ ವ್ಯವಹರಿಸಿದ ರೀತಿ ಇಡೀ ದೇಶಕ್ಕೆ ಮಾದರಿಯಾಗಿದೆ.

ಇಂತಹ ಸಂದರ್ಭದಲ್ಲಿ ಜ್ವರ, ಕೆಮ್ಮು, ಶೀತ ಅಥವಾ ಉಸಿರಾಟದ ತೊಂದರೆ ಕಂಡುಬಂದಾಗ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ, ಮೊನ್ನೆ ಹುಟ್ಟಿದ ಕಾಯಿಲೆಗೆ ನಮ್ಮಲ್ಲಿ ಶತಮಾನಗಳಿಂದ ಔಷಧವಿದೆ ಎಂದೂ, ಕ್ರಿಸ್ತ ಪೂರ್ವದಲ್ಲೇ ಇದು ನಮಗೆ ತಿಳಿದಿತ್ತೆಂದು ಹೇಳುವವರಿದ್ದಾರೆ. ಗೋಮೂತ್ರ ಕುಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಇವುಗಳನ್ನಾಗಲಿ ಅಥವಾ ಸಿರಿಧಾನ್ಯಗಳನ್ನು ತಿನ್ನಿ, ಕರೋನಾ ದೂರವಿಡಿ ಎನ್ನುವ ಮಾತುಗಳನ್ನು ನಂಬುವಂತದ್ದಲ್ಲ.  ಆಯುರ್ವೇದ, ಹೋಮಿಯೋಪತಿ, ಇಲ್ಲವಾದಲ್ಲಿ ತಿರುಪತಿ ಎನ್ನುವ ಸಲಹೆಗಳೆಲ್ಲ ಉಂಟು.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಪಡಿಸಿಕೊಳ್ಳಲು ಉತ್ತಮ ಆಹಾರ, ಗಾಳಿ, ಬೆಳಕು, ಶುದ್ಧ ನೀರು ಅವಶ್ಯಕ. ಈ ಕಾಯಿಲೆ ಹರಡುವುದಕ್ಕೆ ಮುಖ್ಯ ಕಾರಣ: ಕೈ ತೊಳೆಯದೇ, ಬಾಯಿ, ಮೂಗು ಮತ್ತು ಕಣ್ಣನ್ನು ಸವರಿಕೊಳ್ಳುವುದರಿಂದ ದೇಹಕ್ಕೆ ರೋಗಾಣು ಸೇರಿಕೊಳ್ಳುವುದು. ಮಾಸ್ಕ್ ಹಾಕಿಕೊಳ್ಳುವುದು ಮುಖ್ಯವಾದರು ಕಣ್ಣಿಗೆ ಮಾಸ್ಕ್ ಹಾಕಿಕೊಳ್ಳಲಾಗುವುದಿಲ್ಲ. ಕಣ್ಣನ್ನು ಉಜ್ಜಿಕೊಂಡರು ಕಾಯಿಲೆ ತಗುಲಬಹುದು. ರೋಗ ಲಕ್ಷಣ ಚಿಹ್ನೆ ಇರುವವರು ಮಾಸ್ಕ್‌ ಹಾಕಿಕೊಳ್ಳುವುದು ಉತ್ತಮ. ಆಗಾಗ ಕೈ ತೊಳೆದುಕೊಳ್ಳುವುದು, ಹ್ಯಾಂಡ್‌ ಸ್ಯಾನಿಟೈಜರ್‌ಗಳನ್ನು ಬಳಸುವುದು ಇಲ್ಲವಾದಲ್ಲಿ ಶುದ್ಧ ನೀರಿನಲ್ಲಿ ಕೈ ತೊಳೆದರು ಸಾಕು. ಏಡ್ಸ್ ವೈರಾಣುವನ್ನು ಕಂಡು ಹಿಡಿದ ಜಾನ್‌ ಲೂಕ್ “ಇಂತಹ ವೈರಾಣು ಎಷ್ಟೇ ಭಯಾನಕವಾದರೂ ಶುದ್ಧ ನೀರಿನಲ್ಲಿ ತೊಳೆದರೆ ನಾಶವಾಗುತ್ತದೆ ಎನ್ನುತ್ತಿದ್ದ”.

ಈ ಕಾಯಿಲೆಯ ಬಗ್ಗೆ ನಾವು ನಮ್ಮ ವೈಯುಕ್ತಿಕ ಆಯ್ಕೆ, ಆಸಕ್ತಿಯನ್ನು ಮೀರಿ ಸಾಮಾಜಿಕ ಜವಬ್ದಾರಿಯಿಂದ ವರ್ತಿಸಿದಲ್ಲಿ ಈ ಈಸಾಂಕ್ರಾಮಿಕರೋಗವನ್ನು ತಡೆಗಟ್ಟಬಹುದು ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಅನೇಕ ವೈರಾಣುಗಳು ಇಡೀ ಜಗತ್ತನ್ನೇ ನಡುಗಿಸಿ ನಾವು ಲಸಿಕೆ ಹುಡುಕಿಕೊಳ್ಳುವುದರೊಳಗೆ ಮಾಯವಾಗಿರುವುದು ಉಂಟು. Better be safe then sorry.

-ಕೆ ಸಿ ರಘು

ಚಿಂತಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights