ಜೂನ್​ 30ರವರೆಗೂ ರೈಲು ಸಂಚಾರ ರದ್ದು : ಬುಕ್ಕಿಂಗ್ ಹಣ ವಾಪಸ್ – ರೈಲ್ವೆ ಇಲಾಖೆ ಘೋಷಣೆ

ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜೂನ್ 30 ರವರೆಗೆ ಕಾಯ್ದಿರಿಸಿದ ಎಲ್ಲಾ ಸಾಮಾನ್ಯ ರೈಲು ಟಿಕೆಟ್‍ಗಳನ್ನು ರದ್ದುಗೊಳಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದೆ.

ಹೌದು… ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಮರಣ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಜೂನ್ 30ರವರೆಗೂ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ಈವರೆಗೆ ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ಕಾಯ್ದಿರಿಸಿದ ಎಲ್ಲ ಟಿಕೆಟ್‍ಗಳನ್ನು ರದ್ದುಪಡಿಸಲಾಗಿದೆ ಮತ್ತು ಬುಕ್ಕಿಂಗ್ ಮಾಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಎಂದು ಭಾರತೀಯ ರೈಲ್ವೇ ಇಲಾಖೆ ಪ್ರಕಟಿಸಿದೆ.

ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಪೂರ್ಣಗೊಳ್ಳಲು ಇನ್ನೂ ಎರಡೇ ದಿನಗಳು ಬಾಕಿ ಇದ್ದು, ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೊಳಿಸುವ ಮುನ್ಸೂಚನೆಯನ್ನು ಮೋದಿ ಅವರು ನೀಡಿದ್ದಾರೆ.

ಮೂರನೇ ಹಂತದ ಲಾಕ್​ಡೌನ್​ ಪೂರ್ಣಗೊಂಡ ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೆ ಇಲಾಖೆ ಹೇಳಿತ್ತು. ಅಲ್ಲದೆ, ಆನ್​ಲೈನ್ ಬುಕ್ಕಿಂಗ್​​ಗೂ ಅವಕಾಶ ನೀಡಿತ್ತು. ಆದರೆ, ಈಗ ನಾಲ್ಕನೇ ಹಂತದ ಲಾಕ್​ಡೌನ್​ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜೂನ್​ 30ರವರೆಗೂ ರೈಲು ಸಂಚಾರ ಇರುವುದಿಲ್ಲ ಎಂದು ಹೇಳಿದೆ.

ಆದರೆ ಇದರಲ್ಲಿ ಶ್ರಮಿಕ್​ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಮೇ 12 ರಿಂದ ಓಡಲು ಪ್ರಾರಂಭಿಸಿರುವ ಶ್ರಮಿಕ್ ವಿಶೇಷ ರೈಲುಗಳು ಮತ್ತು ವಿಶೇಷ ರೈಲುಗಳು ಎಂದಿನಿಂದ ತಮ್ಮ ಓಡಾಟ ನಡೆಸಲಿವೆ. ಶ್ರಮಿಕ್ ವಿಶೇಷ ರೈಲುಗಳು ಲಾಕ್‍ಡೌನ್‍ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕರೆದುಕೊಂಡು ಹೋಗುತ್ತಿವೆ. 15 ವಿಶೇಷ ರೈಲುಗಳು ದೆಹಲಿಯಿಂದ ರಾಜ್ಯಗಳ ರಾಜಧಾನಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.

ಮೇ 17ಕ್ಕೆ ಮೂರನೇ ಹಂತದ ಲಾಕ್​ಡೌನ್​ ಪೂರ್ಣಗೊಳ್ಳಲಿದೆ. ಹೀಗಾಗಿ, ಕೆಲ ಪ್ರದೇಶಗಳಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲು ರೈಲ್ವೆ ಇಲಾಖೆ ಮುಂದಾಗಿತ್ತು. ಅದರಂತೆ  ಐಆರ್‌ಸಿಟಿಸಿಯಲ್ಲಿ ಮೊದಲ ದಿನ 80,000 ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ್ದರು. ಇದರಿಂದ ಭಾರತೀಯ ರೈಲ್ವೆಗೆ 16 ಕೋಟಿ ರೂ. ಆದಾಯ ಬಂದಿತ್ತು. ಆದರೆ, ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರವಾಗುತ್ತಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಲಾಕ್​ಡೌನ್​ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights