ಟೌನ್ ಹಾಲ್ ಎದುರು ಪ್ರತಿಭಟನೆಗೆ ಇಲ್ಲ ಅವಕಾಶ : ಬಿಬಿಎಂಪಿ ನಿರ್ಣಯದ ತಪ್ಪು ನಡೆಗೆ ಜನಾಕ್ರೋಶ!

ಬೆಂಗಳೂರಿನ ಐತಿಹಾಸಿಕ ತಾಣವಾದ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದ (ಟೌನ್ ಹಾಲ್) ಎದುರು ಪ್ರತಿಭಟನೆಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಅಧಿಕಾರಿಗಳ ಅವಗಾಹನೆಗೆ ತರಲು, ಯಾವುದೇ ಚರ್ಚೆಗಳಿಲ್ಲದೆ ಬಿಬಿಎಂಪಿ ತೆಗೆದುಕೊಂಡಿರುವ ನಿರ್ಣಯ ನಾಗರಿಕರ ಅಕ್ರೋಶಕ್ಕೆ ಗುರಿಯಾಗಿದೆ.

ಇಂದು ಈ ಬಿಬಿಎಂಪಿ ನಿರ್ಣಯದ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಿ, ಬಿಬಿಎಂಪಿ ನಿರ್ಣಯವನ್ನು ಖಂಡಿಸಿದ್ದಾರೆ.

ಈ ಹಿಂದೆ, ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ, ಬನ್ನಪ್ಪ ಪಾರ್ಕ್, ಚಿಕ್ಕ ಲಾಲ್ ಭಾಗ್, ಕೆ ಆರ್ ವುತ್ತ, ಮೈಸೂರು ಬ್ಯಾಂಕ್ ವುತ್ತ ಪ್ರತಿಭಟನೆ ನಡೆಯುತ್ತಿದ್ದ ಪ್ರಮುಖ ಜಾಗಗಳಾಗಿದ್ದವು. ಕ್ರಮೇಣ ಈ ಸ್ಥಳಗಳಲ್ಲಿ ಪ್ರತಿಭಟನೆಗೆ ಪರವಾನಗಿ ಪಡೆಯುವುದು ದುಸ್ತರವಾಗಿದೆ. ಈಗ ಸ್ವಾತಂತ್ರ್ಯ ಉದ್ಯಾನವನ, ಮೌರ್ಯ ವೃತ್ತ ಮತ್ತು ಟೌನ್ ಹಾಲ್ ಗಳು ಮಾತ್ರ ಯಾವುದೇ ಪ್ರತಿಭಟನೆಯನ್ನು ದಾಖಲಿಸುವುದಕ್ಕೆ ಜನಪ್ರಿಯ ಜಾಗಗಳಾಗಿದ್ದವು.

ಸರ್ಕಾರಗಳ ವಿರುದ್ಧ, ಪ್ರಭುತ್ವದ ವಿರುದ್ಧ, ತಮ್ಮ ದೂರುಗಳನ್ನು, ಅಸಮಧಾನವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಾಗರಿಕರು ಶಾಂತಿಯುತವಾಗಿ ಪ್ರತಿಭಟನೆ ದಾಖಲಿಸಲು ಭಾರತೀಯ ಸಂವಿಧಾನ ಅವಕಾಶ ನೀಡುತ್ತದೆ. ಇತ್ತೀಚೆಗಷ್ಟೆ ಸಿ ಎ ಎ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಹೇರಿದ್ದರ ಬಗ್ಗೆ ಕರ್ನಾಟಕ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿತ್ತು.

ವಿಶ್ವದಾದ್ಯಂತ ಟೌನ್ ಹಾಲ್ ಗಳ ಪರಿಕಲ್ಪನೆ ಇರುವುದೇ ನಗರದ ಜನರು ಒಂದೆಡೆ ಸೇರಿ, ತಮ್ಮ ಕುಂದುಕೊರತೆಗಳನ್ನು ಸರ್ಕಾರದ ಪ್ರತಿನಿಧಿಗಳಿಗೆ, ರಾಜಕೀಯ ಮುಖಂಡರಿಗೆ ತಿಳಿಸುವುದಕ್ಕಾಗಿ. ಈಗ ಬಿಬಿಎಂಪಿ, ಟೌನ್ ಹಾಲ್ ಎದುರು ಪ್ರತಿಭಟನೆಗಳು ನಡೆಯುವುದರಿಂದ ಅಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಆಯೋಜಿಸಲು ಹೆಚ್ಚು ಜನ ಮುಂದೆಬರುತ್ತಿಲ್ಲ ಎಂಬ ವಾದ ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನ ಒದಗಿಸಿರುವ ಪ್ರತಿಭಟನೆಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಡುವ ಅವಮಾನ.

ಅಲ್ಲದೇ ಯಾವುದೇ ಪ್ರತಿಭಟನೆಯ ಉದ್ದೇಶ, ಅದು ಹೆಚ್ಚು ಜನರನ್ನು ತಲುಪಿ ಜನಾಭಿಪ್ರಾಯ ರೂಪಿಸುವುದು ಆಗಿರುತ್ತದೆ. ಆದುದರಿಂದಲೇ ಟೌನ್ ಹಾಲ್ ವೃತ್ತ, ಬೆಂಗಳೂರಿನ ನಾಗರಿಕರು ಚಲಿಸುವ ಪ್ರಮುಖ ಜಾಗವಾಗಿದ್ದು, ಪ್ರತಿಭಟನೆಯ ಉದ್ದೇಶವನ್ನು ಪ್ರಚಾರ ಮಾಡಲು ಪ್ರಶಸ್ತ ಜಾಗವಾಗಿತ್ತು. ಅಲ್ಲಿನ ಜನಪರವಾದ ಪ್ರತಿಭಟನೆಗಳಿಂದ ವಾಹನ ಚಾಲನೆಗೆ ತೊಂದರೆಯಾಗಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಕೊಟ್ಟಿರುವ ಕಾರಣ ಕ್ಷುಲ್ಲಕ. ನಗರಗಳ ಇಂತಹ ಜಾಗಗಳಲ್ಲಿ ನಾಗರಿಕರು ಸ್ವಯಂಪ್ರೇರಿತರಾಗಿ ಸೇರಿ, ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಮತ್ತು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಮುಕ್ತವಾತಾವರಣವನ್ನು ನಿರ್ಮಿಸುವತ್ತ ಬಿಬಿಎಂಪಿ ಹೆಜ್ಜೆ ಇಡಬೇಕೇ ಹೊರತು, ನಿಷೇಧ ಹೇರುವುದಕ್ಕೆ ಮುಂದಾಗಬಾರದು.

 

ಗುರುಪ್ರಸಾದ್

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights