ತೆಂಗಿನ ಕಾಯಿಯಲ್ಲಿ ಅರಳಿದ ಕಲೆ…! : ಮಾಜಿ ಸೈನಿಕನ ವಿಶೇಷ ಪ್ರತಿಭೆ
ನಾರಿಕೇಳ, ಬೇಡಿದ್ದೆಲ್ಲವನ್ನೂ ಕೊಡುವ ಕಲ್ಪವೃಕ್ಷ, ಅದು ಸಂಪೂರ್ಣ ಸತ್ಯವೂ ಹೌದು. ತೆಂಗಿನ ಮರದ ಪ್ರತೀ ಭಾಗವೂ ಅತ್ಯುಪಯುಕ್ತ. ತೆಂಗಿನ ಕಾಂಡದಿಂದ ಹಿಡಿದು ಗರಿಯವರೆಗೆ ಯಾವ ವಸ್ತುವೂ ಅನುಪಯುಕ್ತವಲ್ಲ. ಹೀಗಾಗಿಯೇ ಮಾಜಿ ಸೈನಿಕರೊಬ್ಬರು ತೆಂಗಿನ ಕಾಯಿಯಿಂದ ವಿವಿಧ ವಿಗ್ರಹ, ಪ್ರತಿಮೆಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಕೈಯಲ್ಲಿ ಪೂಜನೀಯ ವಿಗ್ರಹಗಳು, ರಾಜಕೀಯ ವಿಡಂಬನೆಯ ವಿಗ್ರಹಗಳು ಜೀವತಳೆದಿವೆ.

ಸಾಮಾನ್ಯವಾಗಿ ನಾವು ನೀವೆಲ್ಲಾ ತೆಂಗಿನ ಕಾಯಿ ಉಪಯೋಗಿಸ್ತೇವೆ. ಇಲ್ಲ ಎಳನೀರು ಕುಡಿದು ದಾಹ ನೀಗಿಸಿಕೊಳ್ತೇವೆ. ಇನ್ನು ಗ್ರಾಮೀಣ ಪ್ರದೇಶದಲ್ಲಾದ್ರೆ ತೆಂಗಿನ ಚಿಪ್ಪು, ಸಿಪ್ಪೆಯನ್ನು ಉರುವಲಾಗಿ ಉಪಯೋಗಿಸ್ತಾರೆ. ಆದ್ರೆ ಇಲ್ಲೊಬ್ಬ ಮಾಜಿ ಸೈನಿಕರು ಕಳೆದ ಎಂಟು ವರ್ಷಗಳಿಂದ ತೆಂಗಿನ ಕಾಯಿಯಿಂದ ವಿವಿಧ ವಿಗ್ರಹಗಳನ್ನು ಮಾಡುತ್ತಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕೂಡಿಗೆಯ ನಿವಾಸಿ ಬಾಲಕೃಷ್ಣ ಇಂತಹ ಅದ್ಭುತ ಕಲೆಯನ್ನು ಮೈಗೂಡಿಸಿಕೊಂಡು ವಿವಿಧ ಕಲಾಕೃತಿಗಳಿಗೆ ಜೀವತುಂಬಿದ್ದಾರೆ. ಮುಕ್ಕಣ್ಣನೆಂದು ಕರೆಯುವ ತೆಂಗಿನ ಕಾಯಿಯಲ್ಲಿ ವಿಘ್ನೇಶನನ್ನು ಮೂಡಿಸಿದ್ದಾರೆ.

ಅವರ ಕೈ ಚಳಕದಿಂದ ಶಿವಲಿಂಗ, ತೆಂಗಿನಕಾಯಿ ಸಿಪ್ಪೆಯಲ್ಲಿ ಕೋಣನ ಮುಖ, ಕೋತಿಯ ಮುಖ ಎಲ್ಲವೂ ಜೀವ ತಳೆದಿವೆ. ಎಂಟು ವರ್ಷಗಳ ಹಿಂದೆ ತೆಂಗಿನ ಕಾಯಿಯನ್ನು ಸುಲಿದಾಗ ಅದರಲ್ಲಿದ್ದ ಚಿಕ್ಕ ತೆಂಗಿನಕಾಯಿ ಇಲಿಯಂತೆ ಕಂಡಿತ್ತಂತೆ. ತಕ್ಷಣವೇ ಅದಕ್ಕೆ ಚಿಕ್ಕ ಪೈಯಿಂಟಿಂಗ್ ಮೂಲಕ ಅದನ್ನು ಮತ್ತಷ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡಿದ್ರಂತೆ. ಅಂದಿನಿಂದ ವಿವಿಧ ಮೂರ್ತಿಗಳನ್ನು ಮಾಡಬಾರದೇಕೆ ಎಂದು ಚಿಂತಿಸಿದ ಬಾಲಕೃಷ್ಣ ಸಿಪ್ಪೆಸಹಿತ ಇರುವ ತೆಂಗಿನಕಾಯಿಗಳಲ್ಲಿ ಗಣೇಶಮೂತಿ, ಶಿಗಲಿಂಗ, ರಾಜಕೀಯ ವಿಡಂಬನೆಯ ಮೂರ್ತಿಗಳನ್ನು ಮಾಡುತ್ತಿದ್ದಾರೆ.
ಇದುವರೆಗೆ 3000 ಸಾವಿರದಷ್ಟು ಗಣೇಶ್ ಮೂರ್ತಿಗಳನ್ನು, ಇನ್ನೂರೈವತ್ತಕ್ಕೂ ಹೆಚ್ಚು ಶಿವಲಿಂಗಗಳನ್ನು ಇನ್ನಿತರೆ ಮೂರ್ತಿಗಳನ್ನು ಮಾಡಿದ್ದಾರೆ. ಅಷ್ಟಕ್ಕೂ ಮೂರ್ತಿ ಕೆತ್ತನೆಗೆ ಕೇವಲ ಚಿಕ್ಕ ಚಿಕ್ಕ ಚಾಕು, ಕತ್ತರಿಇವುಗಳನ್ನಷ್ಟೇ ಬಳಕೆ ಮಾಡಿ ಮೂರ್ತಿಗಳನ್ನು ಮಾಡುತ್ತಾರೆ. ಜನರು ಈ ಮೂರ್ತಿಗಳನ್ನು ಪಡೆದು ತಮ್ಮ ಮನೆಗಳಲ್ಲಿಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ತೆಂಗಿನಕಾಯಿಯ ಸಿಪ್ಪೆಯ ಕೆಳಭಾಗವನ್ನು ಕತ್ತರಿಸಿ ಅದರಲ್ಲಿ ದೃಷ್ಟಿಗೊಂಬೆಗಳನ್ನು ಮಾಡುತ್ತಾರೆ. ಅವುಗಳನ್ನು ಹೊಸ ಮನೆಗಳಿಗೆ, ಅಥವಾ ವಾಹನಗಳಿಗೆ ದೃಷ್ಟಿಗೊಂಬೆಗಳಾಗಿಯೇ ಬಳಸುತ್ತಾರೆ ಎನ್ನುತ್ತಾರೆ ಬಾಲಕೃಷ್ಣ.

ವಿವಿಧ ಮೂರ್ತಿಗಳನ್ನು ಮಾಡುವ ಬಾಲಕೃಷ್ಣ ಅವರು ಇವುಗಳನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ಒಂದು ಮೂರ್ತಿಯನ್ನು ಮಾಡಿಕೊಟ್ಟರೆ ಅದಕ್ಕೆ ಪ್ರತಿಯಾಗಿ ಆರು ತೆಂಗಿನಕಾಯಿಗಳನ್ನು ಪಡೆಯುತ್ತಾರೆ.
ಅದರಲ್ಲಿ ಎರಡು ತೆಂಗಿನ ಕಾಯಿ ದೇವಸ್ಥಾನಕ್ಕೆ ಕೊಟ್ಟರೆ ಒಂದು ತೆಂಗಿನಕಾಯಿಯನ್ನು ಮೂರ್ತಿ ಕೆತ್ತನೆಗೆ ಬಳಕೆ ಮಾಡುತ್ತಾರೆ. ಇನ್ನು ಮೂರು ತೆಂಗಿನಕಾಯಿಗಳನ್ನು ಮಾರಾಟ ಮಾಡಿ ಅವುಗಳಿಂದ ಬರುವ ಹಣದಲ್ಲಿ ಪೈಯಿಂಟ್ ಬ್ರೆಷ್, ಕತ್ತರಿ ಇವುಗಳನ್ನು ಕೊಂಡುಕೊಳ್ಳುತ್ತಾರೆ. ಶಿವಲಿಂಗ, ಗಣೇಶ್ ಮೂರ್ತಿ ಮತ್ತು ದೃಷ್ಟಿಗೊಂಬೆಗಳ ಜೊತೆಗೆ ರಾಜಕೀಯ ವಿಡಂಬನೆಗಳನ್ನು ಮಾಡುವ ಮೂರ್ತಿಗಳನ್ನು ಮಾಡುತ್ತಿದ್ದು, ಒಂದು ರಾಜಕೀಯ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವವರನ್ನು ವಿಡಂಬಿಸಿ ಮನುಷ್ಯ ದೇಹಕ್ಕೆ ಕೋತಿಯ ಮುಖವಾಡವನ್ನು ತೊಡಿಸಿ ರಾಜಕೀಯ ಪಕ್ಷಗಳ ಶಾಲನ್ನು ಹಾಕಿಕೊಂಡಿರುವ ರೀತಿಯ ಪ್ರತಿಮೆಗೂ ಜೀವತುಂಬಿದ್ದಾರೆ. ಆ ಮೂಲಕ ಪಕ್ಷಾಂತರಿಗಳನ್ನು ಟೀಕಿಸುವ ಕೆಲಸವನ್ನು ಮಾಡಿದ್ದಾರೆ. ಇವೆಲ್ಲವೂ ನೋಡುಗರ ಕಣ್ಮನ ಸೆಳೆಯುತ್ತವೆ ಎನ್ನುತ್ತಾರೆ ಸ್ಥಳೀಯರಾದ ಅಣ್ಣಯ್ಯ.

ಒಟ್ಟಿನಲ್ಲಿ ಸೇನೆಯಿಂದ ನಿವೃತ್ತಿ ಪಡೆದ ಬಳಿಕ ಸುಮ್ಮನೆ ಕಾಲ ಕಳೆಯುವ ಬದಲು ಬಾಲಕೃಷ್ಣ ತೆಂಗಿನ ಕಾಯಿಯನ್ನು ಉಪಯೋಗಿಸಿಕೊಂಡು ವಿವಿಧ ಮೂರ್ತಿಗಳನ್ನು ಮಾಡುತ್ತಾ ತನ್ನಲ್ಲಿರುವ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸುತ್ತಾ ಆ ಖುಷಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

