ದಂಡಿ ಸತ್ಯಾಗ್ರಹ ನೆನಪು: ರಾಜ್ಯಾದ್ಯಂತ ಸಿ ಎ ಎ – ಎನ್ ಆರ್ ಸಿ ವಿರೋಧಿ ಉಪವಾಸ

ನಾಗರಿಕ ತಿದ್ದುಪಡಿ ಕಾಯ್ದೆ (ಸಿ ಎ ಎ) ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ ವಿರುದ್ಧ ದೇಶದಾದ್ಯಂತ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಸಿ ಎ ಎ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂಬ ಕೂಗು ದೊಡ್ಡದಾಗಿದೆ. ಇದರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ನಡೆಯಬೇಕಿದೆ. ಇದರ ಬೆನ್ನಿನಲ್ಲೇ ಎನ್ ಆರ್ ಸಿ ಗೆ ಪೂರ್ವಭಾವಿಯಾಗಿ ಪ್ರಸಕ್ತ ಕೇಂದ್ರ ಸರ್ಕಾರ ಎನ್ ಪಿ ಆರ್ ಪ್ರಕ್ರಿಯೆಯನ್ನು ಮಾಡಲು ಪ್ರಯತ್ನಿಸುತ್ತಿದೆ ಮತ್ತು ಇದನ್ನು 2021ರ ಜನಗಣತಿಯ ಭಾಗವಗಿ ಮಾಡಲು ನಿರ್ಧರಿಸಿರುವುದು ಕೂಡ ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಇವೆರಡೂ ಪ್ರಕ್ರಿಯೆಗಳನ್ನು ಪ್ರತ್ಯೇಕಗೊಳಿಸಬೇಕು ಮತ್ತು ಸದ್ಯಕ್ಕೆ ಎನ್ ಪಿ ಆರ್ ಮಾಡಬಾರದು ಎಂದು ಇತ್ತೀಚೆಗಷ್ಟೆ ಸುಮಾರು 190 ಜನ ಸಮಾಜ ವಿಜ್ಞಾನಿಗಳು ಮತ್ತು ಆರ್ಥಿಕ ತಜ್ಞರು ಕೇಂದ್ರ ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ರಾಜ್ಯದ ಹಲವೆಡೆ ಇಂದು ದಂಡಿ ಉಪ್ಪಿನ ಸತ್ಯಾಗ್ರಹದ ನೆನಪಿನಲ್ಲಿ, ಸಿ ಎ ಎ ಮತ್ತು ಎನ್ ಪಿ ಆರ್ ವಿರೋಧಿಸಿ ಒಂದು ದಿನದ ಉಪವಾಸ ಮಾಡಲಾಯಿತು.

ನಾವು ಭಾರತೀಯರು – We the people of India ಜಂಟಿ ಕ್ರಿಯಾ ಸಮಿತಿ – ಕರ್ನಾಟಕ, ಸಂವಿಧಾನ ಉಳಿಸಿ ವೇದಿಕೆಗಳು ಕರೆ ಕೊಟ್ಟಿದ್ದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ರಾಯಚೂರು, ಸಿಂಧನೂರು, ಶಿವಮೊಗ್ಗ, ಬಳ್ಳಾರಿ, ಮಣಿಪಾಲ, ತುಮಕೂರು, ಯಾದಗಿರಿ, ರಾಮನಗರ ಮುಂತಾದ ಸ್ಥಳಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಭಾಷಾ ತಜ್ಞರಾದ ಪ್ರೊ.ಜಿ.ಎನ್‌ ಗಣೇಶ್‌ ದೇವಿ, ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, ನ್ಯಾಯವಾದಿ ಬಾಲನ್‌ ಸೇರಿದಂತೆ ಹಲವು ಗಣ್ಯರು ಸಹ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.

ಎನ್ಪಿಆರ್ವಿರೋಧಿಸಿ ಮಾರ್ಚ್‌ 29 ಕ್ಕೆ ಬೆಂಗಳೂರಿನಲ್ಲಿ ಬೃಹತ್ಸಮಾವೇಶ

ಜನಗಣತಿಯೊಂದಿಗೆ ಏಪ್ರಿಲ್‌ 15 ರಿಂದ ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಅನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಜನರು ತಮ್ಮ ಗಟ್ಟಿ ನಿರ್ಧಾರವನ್ನು ಪ್ರಕಟಿಸಲು ಮಾರ್ಚ್‌ 29 ಕ್ಕೆ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ.

ಈ ಸಮಾವೇಶದಲ್ಲಿ ಜನಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ವಿವಿಧ ಧರ್ಮ ಮತ್ತು ಜಾತಿ ಸಂಘಟನೆಗಳು, ರೈತ ಕಾರ್ಮಿಕ ದಲಿತ ಸಂಘಟನೆಗಳು ಸೇರಿದಂತೆ ಲಕ್ಷಾಂತರ ಜನ ಭಾಗವಹಿಸಲಿದ್ದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಹೋರಾಟ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights