ಮಹಾರಾಷ್ಟ್ರ: ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಉದ್ದವ್‌ ಠಾಕ್ರೆ

ಕೊರೊನಾ ವೈರಸ್‌ ಸೋಂಕಿನಿಂದ ದೇಶಾದ್ಯಂತ ಲಾಕ್‌ಡೌನ್‌ ಆಗಿ ಜನರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್‌ ಠಾಕ್ರೆಯವರು ತಮ್ಮ ಹುದ್ದೆ ಕಳೆದುಕೊಳ್ಳುವ ಆತಂಕವನ್ನು ಎದುರಿಸುತ್ತಿದ್ದಾರೆ.

ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿಕೂಟ ‘ಮಹಾ ವಿಕಾಸ ಅಘಾಡಿ’ ಸರಕಾರದ ಮುಖ್ಯಮಂತ್ರಿಯಾಗಿ ಉದ್ಧವ್‌ ಅವರು 2019ರ ನ. 28ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂವಿಧಾನದ 164 (4) ಪರಿಚ್ಛೇದದ ಪ್ರಕಾರ, ಮುಖ್ಯಮಂತ್ರಿ ಅಥವಾ ಸಚಿವರಾದವರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಆರು ತಿಂಗಳ ಒಳಗೆ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಬೇಕು. ಹಾಲಿ ಯಾವುದೇ ಸದನದ ಸದಸ್ಯರಲ್ಲದ ಉದ್ಧವ್‌ ಅವರು ಸಿಎಂ ಹುದ್ದೆಯಲ್ಲಿ ಮುಂದುವರಿಯಲು ಮೇ 28ರ ಒಳಗಾಗಿ ವಿಧಾನಸಭೆ ಅಥವಾ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಬೇಕು.

ಮಹಾರಾಷ್ಟ್ರ ವಿಧಾನ ಪರಿಷತ್‌ನ 9 ಸ್ಥಾನಗಳು ಏ.24ರಂದು ತೆರವಾಗಲಿವೆ. ಹೀಗಾಗಿ ಮೇಲ್ಮನೆಗೆ ಆಯ್ಕೆಯಾಗಬಹುದು ಎನ್ನುವುದು ಠಾಕ್ರೆ ಲೆಕ್ಕಾಚಾರವಾಗಿತ್ತು. ಆದರೆ ಚುನಾವಣೆ ಆಯೋಗವು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇದುವರೆಗೆ ಪರಿಷತ್‌ ಚುನಾವಣೆ ದಿನಾಂಕ ಪ್ರಕಟಿಸಿಲ್ಲ.

ಆರು ತಿಂಗಳ ಒಳಗಾಗಿ ಶಾಸನಸಭೆ ಸದಸ್ಯರಾಗಿ ಆಯ್ಕೆಯಾಗದಿದ್ದರೆ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕಾಗುತ್ತದೆ. ರಾಜ್ಯಪಾಲರಿಂದ ನಾಮಕರಣಗೊಳ್ಳುವ ಅವಕಾಶ ಇದೆಯಾದರೂ, 12 ಮಂದಿ ನಾಮನಿರ್ದೇಶಿತ ಸದಸ್ಯರು ಜೂನ್‌ನಲ್ಲಿ ನಿವೃತ್ತಿ ಹೊಂದುತ್ತಾರೆ.

“ಇಂತಹ ತುರ್ತು ಸನ್ನಿವೇಶದಲ್ಲಿ ರಾಜ್ಯಪಾಲರು ನಾಮಕರಣ ಮಾಡಬಹುದಾಗಿದೆ,” ಎಂದು ಕೆಲವು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಾನೂನು ತಜ್ಞರು ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷ ನಡೆಯುವ ಸಾಧ್ಯತೆಯನ್ನು ಊಹಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights