ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ ಅರ್ಜಿ ವಜಾ ಮಾಡಿದ ಮದ್ರಾಸ್ ಹೈಕೋರ್ಟ್

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ನಳಿನಿ ಶ್ರೀಹರನ್ ಅವರು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾ ಮಾಡಿದೆ. ಪೊಲೀಸರು ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ನಳಿನಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.

ರಾಜೀವ್ ಗಾಂಧಿ ಹತ್ಯೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಏಳು ಜನರಲ್ಲಿ ನಳಿನಿ ಕೂಡ ಒಬ್ಬರು. ಡಿಸೆಂಬರ್ 2019ರಲ್ಲಿ ನಳಿನಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು. ತಮಿಳುನಾಡು ಸರ್ಕಾರ ಸೆಪ್ಟೆಂಬರ್ 9, 2018ರಲ್ಲಿ ಎಲ್ಲಾ ಏಳು ಜನ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿ ರಾಜ್ಯಪಾಲರಿಗೆ ಬರೆದಿದ್ದ ಪತ್ರವನ್ನು ಉಲ್ಲೇಖಿಸಿ, ಪೊಲೀಸರು ತಮ್ಮನ್ನು ಅಕ್ರಮವಾಗಿ ಬಂಧಿಸಿಟ್ಟುಕೊಂಡಿದ್ದಾರೆ ಎಂದು ಅರ್ಜಿಯಲಲ್ಲಿ ಹೇಳಿದ್ದರು. ಶಿಫಾರಸ್ಸು ರಾಜ್ಯಪಾಲರ ಬಳಿಯಿದ್ದು, ನ್ಯಾಯಾಲಯಕ್ಕೆ ನನ್ನನ್ನು ಹಾಜರುಪಡಿಸಿ ಅಕ್ರಮ ಬಂಧನನಿಂದ ಮುಕ್ತಿಗೊಳಿಸಬೇಕೆಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಇದಕ್ಕೆ ಕೇಂದ್ರ ಸರ್ಕಾರದ ಪರವಾಗಿ ಪ್ರತಿವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜಗೋಪಾಲನ್, ಈ ಪ್ರಕರಣವನ್ನು ತನಿಖೆ ನಡೆಸಿದ್ದು ಸಿಬಿಐ. ಅದು ಕೇಂದ್ರ ಸರ್ಕಾರಕ್ಕೆ ಒಳಪಟ್ಟಿರುವ ಸಂಸ್ಥೆಯಾಗಿರುವುದರಿಂದ, ಅಪರಾಧಿಗಳ ಬಿಡುಗಡೆಯನ್ನು ಕೇಂದ್ರ ಸರ್ಕಾರದ ಒಪ್ಪಿಗೆ ಮೇರೆಯಷ್ಟೇ ಮಾಡಬಹುದು. ಮಾಜಿ ತಮಿಳುನಾಡು ಮುಖ್ಯಮಂತ್ರಿ ಮಾಡಿದ ಮನವಿಯನ್ನು ಹಿಂದೊಮ್ಮೆ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಆದುದರಿಂದ ಈ ನಿರ್ಣಯ ಕೂಡ ಕೇಂದ್ರ ಸರ್ಕಾರ ಒಪ್ಪದ ಹೊರತು ಸಿಂಧುವಲ್ಲ ಎಂದು ವಾದಿಸಿದ್ದರು. ಸುಪ್ರೀಂ ಕೋರ್ಟಿನ ಆದೇಶದಂತೆ ನಳಿನಿ ಅವರು ಜೈಲಿನಲ್ಲಿ ಇದ್ದಾರೆ. ಅದು ಅರ್ಜಿಯಲ್ಲಿ ತಿಳಿಸಿರುವಂತೆ ಅಕ್ರಮ ಬಂಧನ ಅಲ್ಲ, ಆದುದರಿಂದ ಅರ್ಜಿಯನ್ನು ವಜಾ ಮಾಡಬೇಕೆಂದು ವಾದಿಸಿದ್ದರು.

ನ್ಯಾಯಮೂರ್ತಿ ಆರ್ ಸುಬ್ಬಯ್ಯ ಮತ್ತು ಆರ್ ಪೊಂಗಿಯಪ್ಪನ್ ಒಳಗೊಂಡ ನ್ಯಾಪೀಠ ಈ ವಿಚಾರಣೆ ನಡಿಸಿತ್ತು. ಈ ನಿರ್ಧಾರವನ್ನು ರಾಜ್ಯಪಾಲರು ತೆಗೆದುಕೊಳ್ಳಬೇಕು ನಾವು ನಮ್ಮ ಶಿಫಾರಸ್ಸನ್ನು ಕಳುಹಿಸಿದ್ದೇವೆ ಎಂದಿದ್ದ ತಮಿಳುನಾಡು ಸರ್ಕಾರ ಕೂಡ ಅರ್ಜಿಯನ್ನು ವಜಾ ಮಾಡುವಂತೆ ಕೋರಿತ್ತು.

ಈಗ ನಳಿನಿಯವರ  ಅರ್ಜಿಯನ್ನು ವಜಾ ಮಾಡಿ ಮದ್ರಾಸ್ ಹೈಕೋರ್ಟ್ ಆದೇಶನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights