ರಾಜ್ಯದಲ್ಲಿ 144 ಸೆಕ್ಷನ್ ಜಾರಿ : ಸರ್ಕಾರದ ನಿರ್ಧಾರಗಳನ್ನ ಪ್ರಶ್ನಿಸುವ ಹಕ್ಕು ಯಾರಿಗಿದೆ..?

ಪೌರತ್ವ ಕಾಯ್ದೆ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿರುವುದರಿಂದ ಮುಂಜಾಗೃತ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡಿಸೆಂಬರ್ 21ರವರೆಗೂ ನಿಷೇಧಾಜ್ಞೆ ಹೇರಲಾಗಿದೆ. ಹಾಗಾದ್ರೆ ಶಾಂತಿಯುತವಾಗಿ ಪ್ರತಿಭಟನೆ ಕೈಗೊಳ್ಳುವ ಹಕ್ಕು ಜನಸಾಮಾನ್ಯರಿಗೆ ಇಲ್ವಾ…? ಇಂಥಹ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೇ ಬೆಂಗಳೂರು, ಮೈಸೂರು, ಕಲಬುರ್ಗಿಯಲ್ಲಿ  ಪ್ರತಿಭಟನಾಕಾರರನ್ನು ಬಂಧಿಸಲಾಗುತ್ತಿದೆ.

ಹೌದು… ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 21ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಹೇರಲಾಗಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಬೆಳಗಾವಿ, ಚಿತ್ರದುರ್ಗ, ಹಾಸನ ಸೇರಿದಂತೆ ರಾಜ್ಯದ ಆಯಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಿ. ಆದರೆ ಪ್ರತಿಭಟನೆಗೆ ಅವಕಾಶ ಇಲ್ಲ ಎನ್ನುವುದು ಸರಿಯೇ. ಸರಿ ಅನ್ನಿಸದ ವಿಷಯಗಳನ್ನು ಪ್ರಶ್ನಿಸುವ ಹಕ್ಕು ಜನಸಾಮಾನ್ಯರಿಗೆ ಇಲ್ಲ ಅಂತಾದರೆ ಇದೂ ಕೂಡ ಕಾನೂನು ವಿರೋಧಿ ನಿರ್ಧಾರ ಅಲ್ಲವೇ..?

ಇನ್ನು ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಪ್ರತಿಭಟನೆಗೆ ನಾವು ಅವಕಾಶ ನೀಡಿಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ನಡೆಯುತ್ತವೆ. ಮಾರುಕಟ್ಟೆಗಳು, ಬಿಎಂಟಿಸಿ, ಕೆಎಸ್‌ಆರ್ಟಿಸಿಗೆ ನಿರ್ಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಪ್ರತಿಭಟನೆನಿಂದ ಯಾವುದೇ ಅಹಿತಕಾರಿ ಘಟನೆ ನಡೆಯದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್ ಇಲಾಖೆಗೆ ಇದೆ ಹೊರತಾಗಿ ಪ್ರತಿಭಟನೆಯನ್ನೇ ಮಾಡಬೇಡಿ ಎನ್ನುವ ಅಧಿಕಾರವಿಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ಎಲ್ಲರೂ ಒಪ್ಪುವಂತಾದರೆ ಕಾನೂನು ವ್ಯವಸ್ಥೆಯಲ್ಲಿ ಪ್ರಶ್ನೆಸುವ ಹಕ್ಕು ಬಹುಶ: ಇರುತ್ತಿರಲಿಲ್ಲವೇನು.. ಪ್ರತಿಭಟಿಸುವ, ಪ್ರಶ್ನಿಸುವ ಅಧಿಕಾರ ಸಾರ್ವಜನಿಕರಿಗಿಲ್ಲದೇ ಬೇರೆ ಯಾರಿಗಿದೆ..? ಯಾರು ಪ್ರಶ್ನೆ ಮಾಡಬೇಕು..?

 

ಪ್ರತಿಭಟನೆ ವಿರೋಧಿಸುವುದರರ್ಥ ಸರ್ಕಾರ ತಂದ ಕಾನೂನನ್ನ ತಲೆ ಬಾಗಿಸಿ ಒಪ್ಪಿಕೊಳ್ಳಬೇಕು ಅಂತಲಾ..? ಅಥವಾ ಯಾರೂ ಕೂಡ ಪ್ರಶ್ನೆ ಮಾಡುವಂತಿಲ್ಲ, ಸರ್ವ ನಿರ್ಧಾರವನ್ನ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಅಂತಲಾ..? ಇದಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ತಂದವರೇ ಉತ್ತರ ನೀಡಬೇಕು.

ಮಗು ಪ್ರಾರಂಭದಲ್ಲಿ ತೊದಲು ಮಾತನಾಡಿ ನಂತರ ಸ್ಪಷ್ಟವಾದ ಮಾತು ಕಲಿತುಕೊಳ್ಳುತ್ತೆ. ವ್ಯಕ್ತಿ ತಪ್ಪು ಮಾಡಿದಾಗಲೇ ಕೆಲವೊಂದು ವಿಚಾರಗಳನ್ನ ತಿಳಿದುಕೊಳ್ಳುತ್ತಾನೆ. ಇಂಥಹ ತಪ್ಪುಗಳು ಕೆಲವೊಂದು ಬಾರಿ ಸರಿ ತಪ್ಪುನ ಬಗ್ಗೆ ಅರಿವು ಮೂಡಿಸುವವರಿಂದಲೇ ಆಗಬಹುದು. ಅಥವಾ ಕೆಲವರಿಗೆ ತಾವು ಮಾಡಿದ್ದೇ ಸರಿ ಅಂತಲೂ ಅನ್ನಿಸಬಹುದು. ಇಂಥಹ ಸಂದರ್ಭದಲ್ಲಿ ಅದನ್ನ ಸರಿಪಡಿಸಿಕೊಳ್ಳಿ ಎಂದು ಹೇಳುವುದೇ ತಪ್ಪಾದರೇ ಹೇಗೆ..? ಎಲ್ಲಾ ನಿರ್ಧಾರಗಳನ್ನ ಎಲ್ಲರೂ ಒಪ್ಪಬೇಕು ಅಂತೇನು ಇಲ್ಲವಲ್ಲ. ಸರ್ಕಾರ ಕೈಗೊಳ್ಳುವ ನಿರ್ಧಾರಗಳನ್ನ ಒಪ್ಪದವರು ಶಾಂತಿಯುತವಾಗಿ ಪ್ರತಿಭಟಿಸಿ ಮನವಿ ಸಲ್ಲಿಸಬಹುದು ಅಲ್ಲವೇ..?

ಪ್ರತಿಭಟನೆಗೇ ಅವಕಾಶ ಇಲ್ಲವಾದರೆ ಸಾರ್ವಜನಿಕರಿಗಿರುವ ಪ್ರಶ್ನಿಸುವ ಹಕ್ಕನ್ನ ಕಿತ್ತಿಕೊಂಡಂತೆ ಅಲ್ಲವೇ..? ಈ ಬಗ್ಗೆ ಸರ್ಕಾರ ಯೋಚಿಸಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights