ರೌಡಿಗಳ ಅಟ್ಟಹಾಸಕ್ಕೆ ಕಣ್ಣೀರಿನಲ್ಲಿ ಕೈತೊಳಿಯುತ್ತಿದೆ ಹುಬ್ಬಳ್ಳಿಯ ರೈತ ಕುಟುಂಬ…. 

ರೌಡಿಗಳ ಅಟ್ಟಹಾಸಕ್ಕೆ ಹುಬ್ಬಳ್ಳಿಯ ರೈತ ಕುಟುಂಬವೊಂದು ಕಣ್ಣೀರಲ್ಲಿ ಕೈತೊಳೆಯುತ್ತಿದೆ. ದುಷ್ಕರ್ಮಿಗಳು ಇದ್ದೊಂದು ಸೂರು, ಜೀವನಾಧಾರವಾದ ಜಮೀನು ಕಬಳಿಸಲು ಮುಂದಾಗಿದ್ದಾರೆ. ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದು, ಬೇಸತ್ತ ಬಡಪಾಯಿಗಳು ದಯಾಮರಣಕ್ಕೆ ಮನವಿ ಮಾಡುತ್ತಿದ್ದಾರೆ.

ಆಸ್ತಿಯ ಕಬಳಿಸಲು ಧಮ್ಕಿ
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ಕಲ್ಲನಗೌಡ್ರ ರೈತ ಕುಟುಂಬವಿದೆ. ಹದಿನೇಳು ಜನರ ಅವಿಭಕ್ತ ಕುಟುಂಬ ಇದಾಗಿದ್ದು ಕೃಷಿಯೇ ಇವರ ಜೀವನಾಧಾರ. ಅಲ್ಪ ಪ್ರಮಾಣದ ಜಮೀನಲ್ಲಿ ತರಕಾರಿ ಬೆಳೆದು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಈ ಕುಟುಂಬಕ್ಕೆ ಪಿತ್ರಾರ್ಜಿತವಾಗಿ ಬಂದಿರುವ ಒಂದು ಎಕರೆ ಇಪ್ಪತ್ತೈದು ಗುಂಟೆ ಜಾಗವಿದೆ. ಆದರೆ ಬಡ ರೈತ ಕುಟುಂಬದ ಆಸ್ತಿಯ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ರೌಡಿ ಶೀಟರ್‌ಗಳು ಮನೆ ಮತ್ತು ಜಾಗವನ್ನು ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಜೆಸಿಬಿಗಳನ್ನು ತಂದು ಮನೆ ಒಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕಂಗಾಲಾದ ರೈತ ಕುಟುಂಬ ಕಣ್ಣೀರು ಸುರಿಸುತ್ತಾ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ- ರತ್ನಮ್ಮ ಕಲ್ಲನಗೌಡರ್. ನೊಂದ ರೈತ ಮಹಿಳೆ.

ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಮೇಲೆ ದುಷ್ಟರ ಕಣ್ಣು
ಕಲ್ಲನಗೌಡರ್ ಕುಟುಂಬಕ್ಕೆ ಸೇರಿದ ಈ ಜಮೀನು ಸುಮಾರು ಎಂಟು ಕೋಟಿ ರೂಪಾಯಿ ಬೆಲೆ ಬಾಳುತ್ತೆ. ಹೀಗಾಗಿ‌ ಜಮೀನು ಕಬಳಿಸಲು ದೊಡ್ಡ ಷಡ್ಯಂತ್ರವೇ ನಡೆದಿದೆ. ಅಸಲಿಗೆ ಈ ಆಸ್ತಿ ಐವರು ಸಹೋದರರಿಗೆ ಪಿತ್ರಾರ್ಜಿತವಾಗಿ ಬಂದಿದೆ. ಪ್ರತಿಯೊಬ್ಬರೂ 13 ಗುಂಟೆ ಜಾಗವನ್ನು ಪರಭಾರೆ ಮಾಡಿಕೊಳ್ಳಬೇಕಿತ್ತು. ಅದರಲ್ಲಿ ಇಬ್ಬರು ಸಹೋದರರು ತಮ್ಮ ಪಾಲಿನ ಆಸ್ತಿ ಮಾರಾಟ ಮಾಡಿದ್ದಾರೆ. ಜಮೀನು ಖರೀದಿಸಿರುವ ರಾಹುಲ್ ಗೋಕಾಕ್ ಎಂಬುವವರು ಕಲ್ಲನಗೌಡರ್ ಕುಟುಂಬಕ್ಕೆ ಸೇರಿದ ಎಲ್ಲ ಆಸ್ತಿ ತಮಗೇ ಬರಬೇಕು ಎಂದು ಹೇಳುತ್ತಿದ್ದಾರೆ. ಮನೆ ಮತ್ತು ಜಾಗವನ್ನು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎನ್ನುವುದು ಕಲ್ಲನಗೌಡರ್ ಕುಟುಂಬಸ್ಥರ ಆರೋಪ. ಮನೆ ಮತ್ತು ಜಮೀನು ಬಿಟ್ಟರೆ ತಮಗೆ ಬೇರೆ ದಿಕ್ಕಿಲ್ಲ. ನ್ಯಾಯ ಕೊಡಿ ಇಲ್ಲಾ ದಯಾ ಮರಣ ಕೊಡಿ ಎನ್ನುತ್ತಿದೆ ಬಡ ರೈತ ಕುಟುಂಬ- ಬಸವನಗೌಡ ಕಲ್ಲನಗೌಡರ್. ನೊಂದ ರೈತ.

ಬಡ ಕುಟುಂಬಕ್ಕೆ ಬೇಕಾಗಿದೆ ಪೊಲೀಸರ ರಕ್ಷಣೆ
ತಾತ ಮುತ್ತಾತಂದಿರ ಕಾಲದಿಂದ ಅನುಭೋಗಿಸುತ್ತಾ ಬಂದಿರುವ ಮನೆ ಮತ್ತು ಜಮೀನು ಖಾಲಿ ಮಾಡುವಂತೆ ಪ್ರಭಾವಿಗಳು ಒತ್ತಡ ಹೇರುತ್ತಿರುವುದರಿಂದ ಬಡರೈತ ಕುಟುಂಬ ದಿಕ್ಕು ತೋಚದಂತಾಗಿದೆ. ಫೊರ್ಜರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿರುವ ಸಂಶಯವೂ ವ್ಯಕ್ತವಾಗುತ್ತಿದೆ. ಈ ಕುರಿತು ಕಲ್ಲನಗೌಡರ್ ಕುಟುಂಬ ನ್ಯಾಯಾಲಯದ ಮೊರೆಹೋಗಿದ್ದು ವಿಚಾರಣೆ ಕೂಡ ನಡೆಯುತ್ತಿದೆ. ಆದರೆ ದಿನ ಬೆಳಗಾಗುತ್ತಿದ್ದಂತೆ ಮನೆ ಬಾಗಿಲಿಗೆ ಬರುವ ರೌಡಿ ಶೀಟರ್‌ಗಳು ಧಮ್ಕಿ ಹಾಕುತ್ತಿದ್ದಾರೆ. ನೊಂದ ಕುಟುಂಬ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ‌. ಮೇಲಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿ. ಬಡ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಲಿ ಎನ್ನುವುದು ನೂಲ್ವಿ ಗ್ರಾಮಸ್ಥರ ಆಗ್ರಹ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights