ಸಾರ್ಕ್‌ ರಾಷ್ಟ್ರಗಳಿಗೆ ಭಾರತ ಸರ್ಕಾರ ಮಾರ್ಗದರ್ಶನ

ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ನಿವಾರಣೆಗೆ ಭಾರತ ದೇಶವು ಅಣಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ಸೇರಿದಂತೆ ಸಾರ್ಕ್ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಪಾಕಿಸ್ತಾನದ ಮುಖ್ಯಸ್ಥರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಸಾರ್ಕ್ ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾ ವೈರಸ್ ಬಗ್ಗೆ ಆತಂಕ ಅವಶ್ಯಕತೆಯಿಲ್ಲ. ಬದಲಾಗಿ ಜಾಗೃತಿ ವಹಿಸಬೇಕಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಸೋಂಕು ಅಷ್ಟಾಗಿ ಕಾಣಿಸಿಕೊಂಡಿಲ್ಲ. ಈಗಲೇ ನಾವುಗಳು ಜಾಗರುಕರಾಗಿಬೇಕು ಎಂದು ಮೋದಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಪ್ರಭಾವ ಎಲ್ಲೆಡೆ ಹೆಚ್ಚಾಗುವ ಮುನ್ಸೂಚನೆ ಕಂಡಕೂಡಲೇ ಭಾರತವು ಎಚ್ಚೆತ್ತುಕೊಂಡಿದೆ. ಜನವರಿ ಮಧ್ಯಭಾಗದಿಂದಲೇ ವಿದೇಶಗಳಿಂದ ಭಾರತಕ್ಕೆ ಬರುವ ವಿದೇಶಿಗರು ಮತ್ತು ಪ್ರವಾಸಿಗರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ. ಜನರ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಹಂತ-ಹಂತವಾಗಿ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಲ್ಲಿಯವರೆಗೆ ಭಾರತೀಯ ವಿಮಾನ ನಿಲ್ದಾಣಗಳಲ್ಲಿ 12,29,363 ಜನರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಪರಿಣಾಮಕ್ಕೆ ತುತ್ತಾಗಿರುವ ರಾಷ್ಟ್ರಗಳಲ್ಲಿ ಸಿಕ್ಕಿಕೊಂಡಿರುವ ಭಾರತೀಯರು ಸ್ವದೇಶಕ್ಕೆ ವಾಪಸ್‌ ಬರಲು ಸರ್ಕಾರದ ವತಿಯಿಂದ ವಿಶೇಷ ವಿಮಾನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದುವರೆಗೂ ವಿದೇಶಗಳಲ್ಲಿ ಸಿಲುಕಿರುವ 1,400ಕ್ಕೂ ಹೆಚ್ಚು ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆ ತರಲಾಯಿತು ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಕುರಿತು ಆತಂಕಕ್ಕೆ ಒಳಗಾಗುವ ಬದಲು ಸಮರ್ಥವಾಗಿ ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ಕ್ ರಾಷ್ಟ್ರಗಳು ಒಗ್ಗಟ್ಟಾಗಿ ನಿಲ್ಲಬೇಕು. ನಮ್ಮ ದೇಶಗಳಲ್ಲಿ ಜನರ ನಡುವೆ ನೇರ ಸಂಪರ್ಕ ವ್ಯವಸ್ಥೆಯಿದ್ದು, ನಾವೆಲ್ಲ ಒಗ್ಗಟ್ಟಾಗಿ ಈ ಸವಾಲನ್ನು ಎದುರಿಸಬೇಕು. ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಕೈ ಜೋಡಿಸಬೇಕು ಎಂದು ಮೋದಿ ಕರೆ ಕೊಟ್ಟಿದ್ದಾರೆ.

ಸಾರ್ಕ್ ಸದಸ್ಯ ರಾಷ್ಟ್ರಗಳ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾತರದ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸೆ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್, ನೇಪಾಳ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಒಲಿ, ಭೂತಾನ್ ಪ್ರೀಮಿಯರ್ ಲೋತಾಯ್ ಶೇರಿಂಗ್, ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಕ್ ಹಸೀನಾ, ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಪಾಕಿಸ್ತಾನ ಪ್ರಧಾನಮಂತ್ರಿ ವಿಶೇಷ ಸಹಾಯಕ ಜಾಫರ್ ಮಿರ್ಜಾ ಸಭೆಯಲ್ಲಿ ಭಾಗಿಯಾಗಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights