30 ಸಾವಿರ ವ್ಯಯಿಸಿ ಮನೆಗೆ ಹಿಂದಿರುಗಿದ ತ್ರಿಪುರ ಕಾರ್ಮಿಕನಿಗೆ ಮನೆಮಂದಿಯಿಂದಲೇ ಬಾಗಿಲು ಬಂದ್

ಗೋವಿಂದ ದೇಬನಾಥ್ ಮೂವತ್ತು ಸಾವಿರ ರುಪಾಯಿ ವ್ಯಯಿಸಿ ಟ್ಯಾಕ್ಸಿ ಮಾಡಿಕೊಂಡು ಎರಡು ದಿನ ತೆಗೆದುಕೊಂಡು ತ್ರಿಪುರದ ಅಗರ್ತಲಾದ ತನ್ನ ಮನೆಗೆ ಹಿಂದಿರುಗಿದರೆ ಶಾಕ್ ಕಾದಿತ್ತು. 37 ವರ್ಷದ ದಿನಗೂಲಿ ನೌಕರ ಕೋವಿಡ್ ಪರೀಕ್ಷೆಯಲ್ಲಿ ಸೋಂಕುಮುಕ್ತ ಎಂದು ತಿಳಿದ ಮೇಲೂ ಅವರ ಕುಟುಂಬ, ಕ್ವಾರಂಟೈನ್ ಸಮಯ ಕಳೆದೇ ಮನೆ ಸೇರೆಬೇಕೆಂಬ ಷರತ್ತು ಹಾಕಿ ಹಿಂದಕ್ಕೆ ಕಳಿಸಿರುವ ಘಟನೆ ನಡೆದಿದೆ ಎಂದು ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

“ನನ್ನ ಪತ್ನಿ ಮತ್ತು ನನ್ನ ಮಗು ಮನೆಗೆ ಬರಬೇಡಿ ಅನ್ನುತ್ತಿದ್ದಾರೆ, ನಾನೇನು ಮಾಡಲಿ” ಎಂದು ಗೋವಿಂದ ವರದಿಗಾರರ ಬಳಿ ತನ್ನ ದುಃಖ ತೋಡಿಕೊಂಡಿದ್ದಾರೆ.

ಬಡವರಿಗೆ ಸರ್ಕಾರಿ ಗೃಹ ನಿರ್ಮಾಣ ಯೋಜನೆಯಡಿ ಗೋವಿಂದ ಅವರ ಅತ್ತೆಗೆ ದೊರಕಿರುವ ಸಣ್ಣ ಮನೆಯಲ್ಲಿ ತನ್ನ ಪತ್ನಿ ಮಂಪಿ ದೇಬನಾಥ್, ಮಗಳು ಮತ್ತು ಅತ್ತೆ ಮಾವಂದಿರೊಂದಿಗೆ ವಾಸಿಸುತ್ತಾರೆ.

ಮಾರ್ಚ್ ನಲ್ಲಿ ಲಾಕ್ ಡೌನ್ ಆಗುವುದಕ್ಕೂ ಮೊದಲು ಅಸ್ಸಾಮಿನ ಸಿಲಾಪಥರ್ ನಲ್ಲಿ ಬಂಧುಗಳನ್ನು ಕಾಣಲು ತನ್ನ ಮಾವನೊಂದಿಗೆ ಗೋವಿಂದ ಹೋಗಿದ್ದಾನೆ. ಲಾಕ್ ಡೌನ್ ನಲ್ಲಿ ಸಿಕ್ಕಿಹಾಕಿಕೊಂಡು ಬೇಸರಗೊಂಡು ಟ್ಯಾಕ್ಸಿ ಮಾಡಿಕೊಂಡು ತ್ರಿಪುರ ಹಿಂದಿರುಗಿದ್ದಾರೆ. ಆದರೆ ಅವರ ಮಾವ ಜೊತೆಗೆ ಬಂದಿಲ್ಲ. ಮುಂಜಾಗ್ರತ ಕ್ರಮವಾಗಿ ತ್ರಿಪುರ-ಅಸ್ಸಾಂ ಗಡಿಯ ಚುರೈಬಾರಿ ಕ್ವಾರಂಟೈನ್ ಕೇಂದ್ರದ ಬಳಿ ಕೋವಿಡ್ ಪರೀಕ್ಷೆ ಮಾಡಿದಾಗ ಅದು ನೆಗೆಟಿವ್ ಬಂದಿದೆ. ಇದರ ಹೊರತಾಗಿಯೊ ಅವರ ಮನೆಯಲ್ಲಿ ಸಿಕ್ಕ ಸ್ವಾಗತಕ್ಕೆ ಬೇಸರಗೊಂಡು “ಈ ಪ್ರಕ್ರಿಯೆಗಳೆಲ್ಲಾ ನನ್ನ ಪತ್ನಿಗೆ ಬೇಸರ ತಂದಿದೆ. ನಾನು ವಾಪಸ್ ಹೋಗಬೇಕು ಎಂಬುದು ಅವರ ಉದ್ದೇಶವಲ್ಲ ಎಂಬುದು ನನಗೆ ಗೊತ್ತು ಆದರೆ ಅವರು ಭಯಭೀತರಾಗಿದ್ದರೆ ಮತ್ತು ನಮ್ಮ ಮಗು ಅಳುತ್ತಿತ್ತು. ನನಗೆ ಏನು ಮಾಡಬೇಕೋ ತಿಳಿಯುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅವರ ಪತ್ನಿ “ನನ್ನ ಪತಿ ಅಸ್ಸಾಂಗೆ ಹೋಗಿದ್ದರು. ಈ ಸದ್ಯಕ್ಕೆ ಹಿಂದಿರುಗಬೇಡ ಎಂದು ಹೇಳಿದರೂ ಬಂದಿದ್ದಾರೆ. ನಾನು ನಮ್ಮ ತಾಯಿಯ ಮನೆಯಲ್ಲಿ ವಾಸವಾಗಿದ್ದೇನೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಶಸ್ತ್ರಚಿಕಿತ್ಸೆ ಆಗಿದೆ. ನನಗೆ ಸಣ್ಣ ಮಗಳು ಇದ್ದಾಳೆ. ನನ್ನ ಪತಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿ. ಚಿಕಿತ್ಸೆಯ ಬಳಿಕೆ ಅವರು ಹಿಂದಿರುಗಲಿ” ಎಂದಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಿ ಸೇರಿದ ನೆರೆಹೊರೆಯರು ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ. “ಆತ ಅಸ್ಸಾಂಗೆ ಹೋಗಿದ್ದರು. ಅಲ್ಲಿ ಅವರು ಎಲ್ಲಿ ತಂಗಿದ್ದರೋ ತಿಳಿಯದು. ಇಲ್ಲಿಗೆ 30 ಸಾವಿರ ವ್ಯಯಿಸಿ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಯಿತು. ಯಾರ್ಯಾರ ಜೊತೆಗೆ ಪ್ರವಾಸ ಮಾಡಿದ್ದಾರೋ ಗೊತ್ತಿಲ್ಲ. ಸದ್ಯಕ್ಕೆ ಕೊರೊನ ಸೋಂಕು ಇಲ್ಲದೆ ಇದ್ದರೂ ಮುಂದಿನ 14 ದಿನಗಳಲ್ಲಿ ಲಕ್ಷಣಗಳು ಕಂಡುಬಂದರೆ ಏನು ಮಾಡುವುದು. ಆದುದರಿಂದ ಎರಡು ವಾರ ಕ್ವಾರಂಟೈನ್ ನಲ್ಲಿ ಕಳೆದು ಬರಲಿ” ಎಂದು ಅಲ್ಲಿಅ ನಿವಾಸಿಯೊಬ್ಬರು ಹೇಳಿದ್ದಾರೆ.

ಕೊರೊನ ಬಗ್ಗೆ ಅಪನಂಬಿಕೆಗಳು, ಕಳಂಕವನ್ನು ಆರೋಪಿಸುವ ಭಾವ ಹೆಚ್ಚಾಗುತ್ತಾ ಇರುವುದು ಈ ಪ್ರಕರಣದಲ್ಲಿ ಗೊತ್ತಾಗುತ್ತದೆ. ಇಷ್ಟೆಲ್ಲಾ ವಾದ ವಿವಾದ ಚರ್ಚೆಗಳು ಆಗುವಾಗ ಅಲ್ಲಿ ಯಾರೊಬ್ಬರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ ಆದರೆ ಅವರಲ್ಲಿ ಇಂತಹ ತಪ್ಪು ಕಲ್ಪನೆಗಳು ಮನೆಮಾಡಿವೆ ಎನ್ನುವ ಆರೋಗ್ಯ ಅಧಿಕಾರಿಯೊಬ್ಬರು ಈಗ ಗೋವಿಂದ ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ವರ್ಗಾಯಿಸುವುದು ಬಿಟ್ಟರೆ ಬೇರೆ ಮಾರ್ಗವಿಲ್ಲ ಎನ್ನುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights