Corona ಹರಡುವಿಕೆಯಲ್ಲಿ ಚೀನಾವನ್ನೂ ಬೀಟ್‌ ಮಾಡಲಿದೆಯೇ ಭಾರತ!

ಕೊರೋನಾ ವೈರಸ್‌ ಹರಡುವಿಕೆಯನ್ನುನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿತ್ತು. ಲಾಕ್‌ಡೌನ್‌ ಸಂದರ್ಭದಲ್ಲಿ ಹರಡುವಿಕೆ ಸಂಪೂರ್ಣ ನಿಯಂತ್ರಣಕ್ಕೆ ಬಾರದೇ ಇದ್ದರೂ, ಸೋಂಕು ಹರಡುವ ಪ್ರಮಾಣ ತುಂಬಾ ನಿಧಾನ ಗತಿಯಲ್ಲಿತ್ತು. ಆದರೆ, ಲಾಕ್‌ಡೌನ್‌ ಸಡಿಲಗೊಳಿಸುತ್ತಿದ್ದಂತೆಯೇ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಪ್ರತಿದಿನ ಮೂರುರಿಂದ ನಾಲ್ಕು ಸಾವಿರ ಸೋಂಕಿತ ಪ್ರಕರಣಗಳು ದಾಖಲಾಗುತ್ತಲೇ ಇವೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  70,756ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿಗೆ 2,293 ಜನರು ಬಲಿಯಾಗಿದ್ದಾರೆ. ಅಲ್ಲದೆ, 22,445 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದೆ.

ಕೇವಲ ನಿನ್ನೆ ಒಂದೇ ದಿನ‌ 4,213 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಲಾಕ್‌ಡೌನ್‌ ಸಡಿಲಿಕೆಯಾದಾಗಿನಿಂದ ಪ್ರತಿನಿತ್ಯ‌ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳ ವರದಿಯಾಗುತ್ತಿವೆ. ಇದು ದೇಶಾದ್ಯಂತ ಮತ್ತಷ್ಟು ಆಂತಕವನ್ನು ಹೆಚ್ಚಿಸಿದೆ.‌ ಕಳೆದ ಒಂದು ವಾರದಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆಗಳು ಇನ್ನೊಂದು ವಾರದಲ್ಲಿ ಭಾರತವು ಚೀನಾವನ್ನು ಲೀಡ್‌ ಮಾಡಬಹುದು ಎಂಬ ಕಳವಳಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ನಿಧಾನ ಗತಿಯಲ್ಲಿದ್ದ ಸೋಂಕಿನ ಹರಡುವಿಕೆ, ಲಾಕ್‌ಡೌನ್‌ ಸಡಿಲವಾದ ಬಳಿಕ ತೀವ್ರತೆಯಿಂದ ಹರಡಲಾರಂಭಿಸಿದೆ. ಲಾಕ್‌ಡೌನ್‌ ಸಡಿಲವಾದ ಮೇ 03 ರಿಂದ ಇಲ್ಲಿಯವರೆಗೆ (ಮೇ 12) ಎಂಟು ದಿನಗಳಲ್ಲಿ 30,493 ಜನರಲ್ಲಿ ಸೋಂಕು ದೃಢಪಟ್ಟಿದೆ.

ಈ ಕಾರಣಕ್ಕಾಗಿ ನಿನ್ನೆ ನಡೆದ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್‌ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಆರ್ಥಿಕತೆ ಹಳ್ಳಹಿಡಿದಿರುವ ಸಂದರ್ಭದಲ್ಲಿ ಲಾಕ್‌ಡೌನ್‌ ಮತ್ತಷ್ಟು ಪೆಟ್ಟುಕೊಡುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್‌ ತೆರೆವುಗೊಳಿಸಬೇಕು ಎಂದು ಮತ್ತಷ್ಟು ರಾಜ್ಯಗಳು ದಂಬಾಲು ಬಿದ್ದಿವೆ.

ಕೊರೊನಾ ವೈರಸ್‌ನ ಕಂಪ್ಲೀಟ್‌ ನಿಯಂತ್ರಣ ಸಧ್ಯಕ್ಕೆ ಸಾಧ್ಯವಿಲ್ಲ. ಹಾಗಾಗಿ ಕೊರೊನಾ ಜೊತೆಗೆ ಬದುಕಲು ಕಲಿಯಬೇಕು ಎಂಬ ವೈದ್ಯರ ವೈಜ್ಞಾನಿಕ ಮಾತನ್ನು ಇತ್ತೀಚೆಗೆ ಎಲ್ಲಾ ಸಚಿವ/ಸಂಸದರು ಒಬ್ಬೊಬ್ಬರಾಗಿ ಹೇಳಲು ಶುರುಮಾಡಿದ್ದಾರೆ.

ಹಲವರು ಸಡಿಲಿಕೆಯೊಂದಿಗೆ ಲಾಕ್‌ಡೌನ್‌ ಮುಂದುವರೆದರೂ ದೇಶದಲ್ಲಿ ವೈರಸ್‌ ನಿಯಂತ್ರಣ ಸಧ್ಯಕ್ಕೆ ಆಗದೇ ಇರುವ ಮಾತು ಎಂಬುದು ಎಲ್ಲಾ ವರ್ಗಗಳಿಂದ ಬರುತ್ತಿರುವ ಒಮ್ಮುಖ ಅಭಿಪ್ರಾಯ. ಇದರಲ್ಲಿ ಸರ್ಕಾರಗಳ ಸರಿಯಾದ ಕಾರ್ಯಯೋಜನೆಗಳಿಲ್ಲದ್ದರ ಪಾಲುದಾರಿಕೆಯೂ ಇದೆ.

ಕೊರೊನಾ ವೈರಸ್‌ ಕಾಣಿಸಿಕೊಂಡ ಚೀನಾದಲ್ಲಿ ಈಗ ಕೊರೋನಾ ಸೋಂಕು ಹರಡುವಿಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಇಂದಿನ ಅಂಕಿ ಅಂಶಗಳ ಪ್ರಕಾರ ಚೀನಾದ ಕೊರೋನಾ ಸೋಂಕಿತರ ಸಂಖ್ಯೆ 82,918. ಇವರಲ್ಲಿ ಈಗಾಗಲೇ 78,144 ಜನರು ಗುಣಮುಖರಾಗಿದ್ದಾರೆ. ಚಿಕಿತ್ಸೆ ಹಂತದಲ್ಲಿರುವವರು 141. ಆದರೆ, ಭಾರತದಲ್ಲಿ 70,756 ಪ್ರಕರಣಗಳು ದೃಢಪಟ್ಟಿದ್ದು, ಅವರಲ್ಲಿ ಇನ್ನು 46,008 ಪ್ರಕರಣಗಳು ಆ್ಯಕ್ಟೀವ್ ಆಗಿವೆ. 22,455 ಸೋಂಕಿತರು ಮಾತ್ರ ಗುಣಮುಖರಾಗಿದ್ದಾರೆ.

ಚೀನಾ ಮತ್ತು ಭಾರತದಲ್ಲಿನ ಸೋಂಕಿತರ ವ್ಯತ್ಯಾಸ 12,116 ಪ್ರಕರಣಗಳಷ್ಟೇ. ಚೀನಾದಲ್ಲಿ ಕಳೆದೊಂದುವಾರದಿಂದ ಪ್ರತಿನಿತ್ಯ ಒಂದೋ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ. ಆದ್ದರಿಂದ, ಭಾರತದಲ್ಲಿ ತ್ವರಿತಗತಿಯಲ್ಲಿರುವ ಸೋಂಕಲಿನ ಹರಡುವಿಕೆ ಹೀಗೆ ಮುಂದುವೆರೆದರೆ ಇನ್ನು ಮಾರು ಅಥವಾ ನಾಲ್ಕು ದಿನಗಳಲ್ಲಿ ಚೀನಾವನ್ನು ಹಿಂದಿಕ್ಕುವ ಸಾಧ್ಯತೆಗಳು ಹೆಚ್ಚಾಗಿವೆ.

ಪ್ರಧಾನಿ ಮೋದಿಯವರು ಇಂದು (ಮೇ 12) ರಾತ್ರಿ 08 ಗಂಟೆಗೆ ದೇಶವನ್ನು ಉದ್ದೇಶಿಸಿ ಮತ್ತೊಮ್ಮೆ ಮಾತನಾಡಲಿದ್ದಾರೆ. ಹಿಂದಿನಂತೆ ಚಪ್ಪಾಳೆ, ಮೇಣದ ಬತ್ತಿಯಂತಹ ಮಾತುಗಳನ್ನಾಡದೆ, ತುರ್ತು ಕಾರ್ಯಯೋಜನೆಗಳ ಹಾಗೂ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಹೆಚ್ಚು ಮಾತನಡುವರೇ?  ಕೊರೊನಾ ನಿಯಂತ್ರಣಕ್ಕೆ ಹೊಸ ಕಾರ್ಯಯೋಜನೆಯೇನಾದರೂ ಸಿದ್ದವಾಗಿದೆಯೇ ಕಾದುನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights