Election : ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಬಿಟ್ಟುಕೊಡಲು ಸಿದ್ದರಾಮಯ್ಯ ವಿರೋಧ

ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮುಂದಿನ ತಿಂಗಳು ನಡೆಯಬೇಕಿರುವ ಚುನಾವಣೆಗೆ ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಮೂರೂ ಪಕ್ಷಗಳು ಕಸರತ್ತು ಆರಂಭಿಸಿವೆ. ಖಾಲಿ ಆಗಲಿರುವ ನಾಲ್ಕು ಸ್ಥಾನಗಳ ಪೈಕಿ ಆಡಳಿತ ಪಕ್ಷ ಬಿಜೆಪಿ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ  ಕಾಂಗ್ರೆಸ್‌ ಅಭ್ಯರ್ಥಿ ಆಗುವುದು ಬಹುತೇಕ ಖಚಿತ.

ನಾಲ್ಕನೇ ಅಭ್ಯರ್ಥಿ ಯಾರು ಎಂಬುದೇ ಈಗ ಕುತೂಹಲ ಮೂಡಿಸಿದೆ. ಮಾಜಿ ಪ್ರಧಾನಿ ದೇವೇಗೌಡರನ್ನು ನಾಲ್ಕನೇ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಕಳಿಸುವ ಲೆಕ್ಕಾಚಾರ ನಡೆಯುತ್ತಿದೆ.  ಆದರೆ ಈ  ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಮತ ವ್ಯಕ್ತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಈ ಪ್ರಸ್ತಾಪಕ್ಕೆ ವಿರೋಧ ಸೂಚಿಸಿದ್ದರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಗೌಡರ ಪರ ಒಲವು ವ್ಯಕ್ತಪಡಿಸಿ, ಜೆಡಿಎಸ್ ಜತೆ ಹೊಂದಾಣಿಕೆಗೆ ಒಲವು ತೋರಿದ್ದಾರೆ. ಆದರೆ ಸಿದ್ದರಾಮಯ್ಯ ಇದಕ್ಕೆ ಬಿಲ್ಕುಲ್ ವಿರೋಧ ವ್ಯಕ್ತಪಡಿಸಿದ್ದು ಇದರಿಂದ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ತಲೆದೋರಿದೆ.

ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಸರಾಗವಾಗಿ ಎರಡು ಸ್ಥಾನಗಳನ್ನು ಪ್ರಥಮ ಪ್ರಾಶಸ್ತ್ಯದ ಮತಗಳ ಮೂಲಕ ಗೆಲ್ಲಬಹುದು. ವಿಧಾನಸಭೆಯಲ್ಲಿ ಪಕ್ಷೇತರರೂ ಸೇರಿದಂತೆ ಆ ಪಕ್ಷದ ಬಲ 120.

ಗೆಲ್ಲಲು ಒಬ್ಬ ಅಭ್ಯರ್ಥಿಗೆ ಗರಿಷ್ಟ 48 ಮೊದಲ ಪ್ರಾಶಸ್ತ್ಯದ ಮತಗಳು ಬೇಕು. ಪಕ್ಷದಿಂದ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆ ಬಿಜೆಪಿಯಲ್ಲಿ ನಡೆದಿದೆ.

ಪ್ರಥಮ ಪ್ರಾಶಸ್ತ್ಯದ ಹೆಚ್ಚುವರಿ 14 ಮತಗಳು ಹಾಗೂ 96 ದ್ವಿತೀಯ ಪ್ರಾಶಸ್ತ್ಯದ ಮತಗಳು ಹಾಗೂ ಪ್ರತಿಪಕ್ಷಗಳ ಕಡೆಯಿಂದ ಅಡ್ಡ ಮತದಾನ ನಡೆದರೆ, ಗೆಲ್ಲಬಹುದು ಎಂಬುದೊಂದು ಲೆಕ್ಕಾಚಾರ.

ವಿಧಾನ ಸಭೆಯಲ್ಲಿ ಜೆಡಿಎಸ್‌ 34 ಶಾಸಕರನ್ನು ಹೊಂದಿದೆ. ತೆನೆ ಪಕ್ಷದ ಐದಾರು ಶಾಸಕರು ಬಿಜೆಪಿ ಜತೆ ಸಂಪರ್ಕದಲ್ಲಿ ಇರುವುದು ಗುಟ್ಟಾಗೇನೂ ಉಳಿದಿಲ್ಲ.

ಈ ನಡುವೆ ಜೆಡಿಎಸ್‌ ಬೆಂಬಲಿಸುವ ಬಗ್ಗೆ ಕಾಂಗ್ರೆಸ್‌ನಲ್ಲೇ ಗೊಂದಲಗಳಿವೆ. ಪ್ರತಿಪಕ್ಷದ ನಾಯಕರೂ ಆದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಇದಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಕಾಂಗ್ರೆಸ್ಸಿನ 20 ಹೆಚ್ಚುವರಿ ಮತಗಳು ಯಾರ ಪಾಲಾಗುತ್ತವೆ ಎಂಬುದೇ ಈಗ ನಿಗೂಢ .

ಇದೇ ವೇಳೆ ಕಾಂಗ್ರೆಸ್‌ನಿಂದ ನೇರ ಬೆಂಬಲ ಪಡೆಯುವುದು ಜೆಡಿಎಸ್‌ಗೂ ಪಥ್ಯವಿಲ್ಲ. ಕಳೆದ ಲೋಕಸಭಾ ಚುಣಾವಣೆಯಲ್ಲಿ ಆದ ಕಹಿ ಅನುಭವವನ್ನು ಪಕ್ಷ ಮರೆತಿಲ್ಲ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿಯಲು ಮನಸ್ಸು ಮಾಡಿಲ್ಲ ಎಂಬ ಮಾತೂ ಕೇಳಿಬರುತ್ತಿದೆ.

ಹಾಗೊಂದು ವೇಳೆ ಯಾವುದೇ ಪಕ್ಷಕ್ಕೆ ಸೇರದವರು ಪಕ್ಷೇತರ ಅಭ್ಯರ್ಥಿ ಆಗುವುದಾದರೆ ಆಗ ನೋಡೋಣ, ಆಗಲೂ ಕಾಂಗ್ರೆಸ್ ಪಕ್ಷವನ್ನು‌ ಒಪ್ಪಿಸುವುದು ಅವರದೇ ಜವಾಬ್ದಾರಿ ಎಂಬ ನಿಲುವಿಗೆ ಜೆಡಿಎಸ್‌ ಬಂದಿದೆ.

ಇಲ್ಲೂ ಪರಸ್ಪರ ಲಾಭದ ಪ್ರಶ್ನೆ ಇರುವುದರಿಂದ, ಗೌಡರ ಹೊರತಾಗಿ ಪಕ್ಷೇತರ ಅಭ್ಯರ್ಥಿಯನ್ನು ಕಾಂಗ್ರೆಸ್‌ ಕೂಡ ಬೆಂಬಲಿಸುವ ಸಾಧ್ಯತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights