Lockdown: 1,70,000 ಕೋಟಿ ಪ್ಯಾಕೇಜ್ ಘೋಷಿಸಿದ ನಿರ್ಮಲಾ ಸೀತಾರಾಮನ್

ಕೊರೊನಾ ಲ್ಯಾಕ್‌ಡೌನ್‌ನಿಂದಾಗಿ ಆಪತ್ತಿನಲ್ಲಿರುವ ಜನರಿಗೆ ನೆರವಾಗಲು ಕೇಂದ್ರ ಸರ್ಕಾರ ಅಂತೂ ಮುಂದೆ ಬಂದಿದ್ದು, ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯ ಹೆಸರಿನಲ್ಲಿ 1,70,000 ಕೋಟಿ ಪ್ಯಾಕೇಜ್‌ ಅನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಘೋಷಿಸಿದ್ದಾರೆ.

ಕರೋನಾ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ವೈದ್ಯರು, ದಾದಿಯರು, ಅರೆವೈದ್ಯರು, ಆಶಾ ಕಾರ್ಯಕರ್ತರಿಗೆ ಎಲ್ಲರಿಗೂ ಸರ್ಕಾರವು ಪ್ರತಿ ವ್ಯಕ್ತಿಗೆ 50 ಲಕ್ಷ ರೂಗಳ ಇನ್ಸೂರೆನ್ಸ್‌ ಘೋಷಿಸಿದ್ದಾರೆ.

“ಮಹಿಳೆಯರು, ವಲಸೆ ಕಾರ್ಮಿಕರು ಮತ್ತು ಸಮಾಜದ ಹಿಂದುಳಿದ ವರ್ಗವನ್ನು ತಲುಪಲು ಸರ್ಕಾರ ಕೆಲಸ ಮಾಡುತ್ತಿದೆ. ಈ ಜನರ ಕಳವಳಗಳನ್ನು ಪರಿಹರಿಸುವ ಪ್ಯಾಕೇಜ್‌ನೊಂದಿಗೆ ನಾವು ಹೊರಬಂದಿದ್ದೇವೆ. ನಾವು ಎರಡು ಅಂಶಗಳನ್ನು ನೋಡುತ್ತಿದ್ದೇವೆ: ನಗದು ವರ್ಗಾವಣೆ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ಕ್ರಮಗಳು” ಎಂದು ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ಯಾರಾದರೂ ಹಸಿವಿನಿಂದ ಅಥವಾ ಹಣವಿಲ್ಲದೆ ಇರಬೇಕೆಂದು ನಾವು ಬಯಸುವುದಿಲ್ಲ. ಆದ್ದರಿಂದ ನಾವು ಸಾಕಷ್ಟು ನೀಡುತ್ತೇವೆ” ಎಂದು ಅವರು ನಗರ ಮತ್ತು ಗ್ರಾಮೀಣ ಬಡವರಿಗೆ 1,70,000 ಕೋಟಿ ರೂ ಘೋಷಿಸುತ್ತೆವೆ ಎಂದಿದ್ದಾರೆ.

ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಎಷ್ಟು?

ಬಡವರಿಗೆ ಮತ್ತು ನಿರ್ಗತಿಕರಿಗೆ ಮುಂದಿನ ತಿಂಗಳುಗಳಲ್ಲಿ 5 ಕೆಜಿ ಹೆಚ್ಚುವರಿ ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೀಡಲಾಗುವುದು. ಮುಂದಿನ ಮೂರು ತಿಂಗಳವರೆಗೆ ಅವರಿಗೆ 1 ಕೆಜಿ ದ್ವಿದಳ ಧಾನ್ಯಗಳನ್ನು ಉಚಿತವಾಗಿ ನೀಡಲಾಗುವುದು.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 5 ಕೋಟಿ ಕುಟುಂಬಗಳಿಗೆ: ಕೂಲಿ 182ರಿಂದ 202ಕ್ಕೆ ಏರಿಕೆ. 2000/- ಒಬ್ಬ ಕಾರ್ಮಿಕನಿಗೆ ಮೀಸಲು.

ರೈತರಿಗೆ: 8.69 ಕೋಟಿ ರೈತರಿಗೆ ತಲಾ 2000 ರೂ ಕೊಡುವ ಯೋಜನೆ ಏಪ್ರಿಲ್‌ 1ರಂದು ರೈತರ ಖಾತೆಗೆಳಿಗೆ ವರ್ಗಾವಣೆ.

ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಮತ್ತು ವಿಕಲಚೇತನರಿಗೆ: 1000/- ರೂಗಳನ್ನು ಎರಡು ಕಂತುಗಳಲ್ಲಿ, 3 ತಿಂಗಳಲ್ಲಿ ನೀಡಲಾಗುವುದು. ನೇರ ಅವರ ಖಾತೆಗೆ ವರ್ಗಾವಣೆಯಾಗಲಿದೆ. ಇದು 3 ಕೋಟಿ ಜನರಿಗೆ ಅನ್ವಯಲಾಗಲಿದೆ.

ಬಡಮಹಿಳೆಯರಿಗೆ: 20 ಕೋಟಿ ಮಹಿಳಾ ಜನಧನ್‌ ಅಕೌಂಟ್‌ಗಳಿಗೆ ತಿಂಗಳಿಗೆ 500 ರೂಗಳಂತೆ ಮುಂದಿನ ಮೂರು ತಿಂಗಳು ಹಾಕಲಾಗುವುದು.

ಉಜ್ವಲ ಯೋಜನೆಯ ಗ್ಯಾಸ್‌ ಯೋಜನೆಯ 8.3 ಕೋಟಿ ಬಿಪಿಲ್‌ ಕುಟುಂಬಗಳಿಗೆ 3 ತಿಂಗಳು ಉಚಿತ ಗ್ಯಾಸ್‌ ಸಿಲಿಂಡರ್‌ ಒದಗಿಸಲಾಗುತ್ತದೆ.

ಮಹಿಳಾ ಸ್ವಸಹಾಯ ಗುಂಪುಗಳಿಗೆ : 63 ಲಕ್ಷ ಸ್ವಸಹಾಯ ಸಂಘಗಳ 7 ಕೋಟಿ ಕುಟುಂಬಗಳಿಗೆ ದೀನ್‌ ದಯಾಳ್‌ ಉಪಾಧ್ಯಾಯ ಯೋಜನೆಯ ಭಾಗವಾಗಿ 10 ಲಕ್ಷದ ಸಾಲದ ಬದಲಿಗೆ 20 ಲಕ್ಷ ಸಾಲ ಮಂಜೂರು.

ಇಪಿಎಫ್‌ ಹಣವನ್ನು ಮೂರು ತಿಂಗಳಿಗೆ ಸರ್ಕಾರವೇ ಭರಿಸಲಿದೆ. ಅಂದರೆ  ಉದ್ಯೋಗಿಯ 12% ಮತ್ತು ಸರ್ಕಾರದ 12% ಎರಡನ್ನೂ ಸರ್ಕಾರವೇ ಭರಿಸಲಿದೆ.

ಕಟ್ಟಡ ಕಾರ್ಮಿಕರಿಗೆ: ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 3.5 ನೋಂದಾಯಿತ ಕಾರ್ಮಿಕರಿಗೆ ಕಲ್ಯಾಣ ನಿಧಿಯಿಂದ 31,000 ಕೋಟಿ ಹಣವನ್ನು ಬಳಸಲು ಮುಂದಾಗಿದೆ. ರಾಜ್ಯ ಸರ್ಕಾರದ ಮೂಲಕ ಅದರ ಬಳಕೆಗೆ ನಿರ್ದೇಶನ ನೀಡಲಾಗುವುದು.

ಜಿಲ್ಲಾ ಮಿನರಲ್‌ ಫಂಡ್‌: ಮೆಡಿಕಲ್‌ ಟೆಸ್ಟ್‌, ಸ್ಕ್ರೀನಿಂಗ್‌ ಸೇರಿದಂತೆ ಉಳಿದ ಕೆಲಸಗಳಿಗೆ ಬಳಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights