Women’s day spl :ಮನೆಯಲ್ಲೇನಿರುತ್ತೆ ಮಹಿಳೆಯರಿಗೆ ಕೆಲಸ..? ಇಲ್ಲಿದೆ ಉತ್ತರ…

ಸಾಮಾನ್ಯವಾಗಿ ನೂರರಲ್ಲಿ ಎಂಬತ್ತರಷ್ಟು ಗಂಡಸರು ತಮ್ಮ ಪತ್ನಿಗೆ ನಿಂದಿಸುವ ಸಂದರ್ಭದಲ್ಲಿ ಕೇಳುವಂತಹ ಏಕೈಕ ಪ್ರಶ್ನೆ ಮನೆಯಲ್ಲೇನಿರುತ್ತೆ ಮಹಿಳೆಯರಿಗೆ ಕೆಲಸ..? ಈ ಪ್ರಶ್ನೆಯ ಹಿಂದಿರುವ ಅರ್ಥವೇನೆಂದರೆ ಮಹಿಳೆಯರು ತುಂಬಾನೇ ಫ್ರೀ. ಅವರಿಗೆ ಮನೆಯಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಇದ್ದರೂ ಆ ಕೆಲಸ ಗಂಡಸರಿಗಿಂತ ಅತೀ ಕಡಿಮೆ ಒತ್ತಡವಿರುವ, ಶ್ರಮವಿಲ್ಲದ, ಹೆಚ್ಚು ಆಯಾಸವಾಗದ ಕೆಲಸ ಎನ್ನುವುದು. ಹೀಗಾಗಿ ಮನೆಯಲ್ಲಿ ಯಾವುದಾದರೂ ಸಮಸ್ಯೆ ಬಂದರೆ ಅಥವಾ ಕಿರಿಕಿರಿಯಾಗುವಂತಹ ಸಂದರ್ಭಗಳು ಬಂದಲ್ಲಿ ಮೊದಲು ಗಂಡಸರು ಆರೋಪ ಮಾಡುವುದು ಮಹಿಳೆಯರ ಮೇಲೇನೇ. ಹಾಗಾದ್ರೆ ಮಹಿಳೆಯರು ತುಂಬಾ ಫ್ರೀ ಆಗಿರುತ್ತಾರಾ..? ಅವರಿಗೆ ಗಂಡಸರಷ್ಟು ಒತ್ತಡದ ಕೆಲಸ ಇರುವುದಿಲ್ಲವೇ..? ಹೀಗೆಂದು ಪ್ರಶ್ನೆ ಗಂಡಸರು ಹೆಣ್ಣಿಗೆ ಹಾಕಿದರೆ ಕೋಪ ಬರದೆ ಉತ್ತರ ಕೊಡಬೇಕು ಅನ್ನೋ ತಾಳ್ಮೆ ಯಾವ ಮಹಿಳೆಯಲ್ಲೂ ಇರೋದಿಲ್ಲ. ಯಾಕೆ ಗೊತ್ತಾ..? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಸುಖ ಸಂಸಾರದಲ್ಲಿ ಹೆಣ್ಣಿನ ಪಾತ್ರ:-

ಸಾಮಾನ್ಯವಾಗಿ ಒಂದು ಕುಟುಂಬವನ್ನು ಸರಿದಾರಿಗೆ ನಡೆಸಿಕೊಂಡು ಹೋಗುವಲ್ಲಿ ಮಹಿಳೆಯ ಪಾತ್ರ ಅತೀ ಮುಖ್ಯವಾದದ್ದು. ಸುಖ ಸಂಸಾರಕ್ಕೆ ಆಕೆಯ ಜಾಣತನ, ತಾಳ್ಮೆ, ಚಾಕಚಕ್ಯತೆ, ಲವಲವಿಕೆ, ನಗುಮುಖ ಎಲ್ಲವೂ ಕಾರಣವಾಗುತ್ತವೆ. ಹೀಗಾಗಿನೇ ಹಿರಿಯರು ಹೇಳೋದು “ಪ್ರತಿಯೊಬ್ಬ ಪುರುಷನ ಸಾಧನೆಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ” ಎಂದು. ಹೆಣ್ಣಿಗಾಗಿ ದೇಶಗಳು ಉರುಳಿವೆ. ದೇಶಗಳನ್ನ ಕಟ್ಟಲಾಗಿದೆ. ಆಕೆ ಮುನಿದರೆ ಮಾರಿ ಒಲಿದರೆ ನಾರಿ ಅನ್ನೋ ಮಾತು ಇಂದಿಗೂ ಜನಜನಿತ.ಇಂತಹ ಅದ್ಬುತ ಶಕ್ತಿ ಹೆಣ್ಣಿಗೆ ಇರುವುದರಿಂದಲೇ ಎಲ್ಲಾ ಕ್ಷೇತ್ರದಲ್ಲಿ ಪುರುಷರಷ್ಟೇ ಸರಿಸಮಾನಳಾಗಿ ತನ್ನನ್ನ ಗುರುತಿಸಿಕೊಂಡಿದ್ದಾಳೆ.

ತಾಯಿಯಾಗಿ, ತಂಗಿಯಾಗಿ, ಹೆಂಡತಿ, ಮಗಳಾಗಿ ಹೀಗೆ ಎಲ್ಲಾ ಪಾತ್ರವನ್ನು ಜೀವನದುದ್ದಕ್ಕೂ ಅಚ್ಚುಕಟ್ಟಾಗಿ ನಿಭಾಯಿಸುವ ಜಾಣ್ಮೆ ಹೊಂದಿದವಳು ಹೆಣ್ಣು. ಇದಕ್ಕಾಗಿ ನಮ್ಮ ಸಮಾಜದಲ್ಲಿ ಹೆಣ್ಣಿಗೆ ಗುರು ಹಾಗೂ ದೇವರು ಎಂದು ಅತ್ಯುನ್ನತ ಸ್ಥಾನ ನೀಡಿ ಗೌರವದಿಂದ ಕಾಣಲಾಗುತ್ತದೆ. ಇಂಥಹ ಪ್ರತಿಯೊಬ್ಬ ಮಹಿಳೆಯರು ತಮ್ಮ ಜೀವನದಲ್ಲಿ ಗಂಡಸರಿಂದ ಹೀಗೊಂದು ಪ್ರಶ್ನೆಯನ್ನು ಕೇಳಿಸಿಕೊಂಡಿರುತ್ತಾರೆ. ಅದು ಮನೆಯಲ್ಲೇನಿರುತ್ತೆ ಮಹಿಳೆಯರಿಗೆ ಕೆಲಸ..?. ಆದರೆ ಈ ಪ್ರಶ್ನೆ ಕೇಳಿಸಿಕೊಂಡ ಮಹಿಳೆಯರೆಲ್ಲರೂ ಇದಕ್ಕೆ ಉತ್ತರ ಕೊಡುವುದಕ್ಕಿಂತ ಮುನಿಸಿಕೊಂಡು, ಜಗಳವಾಡಿರುವ ಸಂದರ್ಭಗಳೇ ಹೆಚ್ಚಿರುತ್ತವೆ. ಯಾಕೆ ಇಂಥಹ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲ ಅನ್ನೋದನ್ನ ಅವಲೋಕಿಸಿದಾಗ ಅನೇಕ ವಿಚಾರಗಳು ಗೋಚರವಾಗುತ್ತವೆ.

ನಮ್ಮ ಸಮಾಜದಲ್ಲಿ ಮದುವೆ ಅನ್ನೋದು ತುಂಬಾ ಪಾವಿತ್ರ್ಯತೆ ಪಡೆದ ಸಂಬಂಧ. ಒಂದು ಗಂಡು ಹೆಣ್ಣು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಅವರ ಜೀವನದ ದಾರಿ ಬದಲಾಗುತ್ತಾ ಹೋಗುತ್ತದೆ. ತಾಳಿ ಎನ್ನುವ ಮೂರು ಗಂಟು ಬಿದ್ದರೆ ಸಾಕು ಹೆಣ್ಣಿನ ಜೀವನದ ಜಗತ್ತಿನಲ್ಲಿ ಎಲ್ಲವೂ ಹೊಸತೆ. ಹೊಸ ಜೀವನ, ಹೊಸ ಜನ, ಹೊಸ ಜಾಗ, ಹೊಸ ಪಾತ್ರ ಹೀಗೆ ಎಲ್ಲವೂ ಹೊಸದೇ. ಜೊತೆಗೆ ತವರು ಮನೆಗಿಂತ ಹೆಣ್ಣಿಗೆ ಗಂಡನ ಮನೆಯಲ್ಲಿ ಹೆಚ್ಚು ಜವಬ್ದಾರಿಗಳು, ಇತಿಮಿತಿಯಲ್ಲಿ ಜೀವನ ನಡೆಸಬೇಕಾದ ಅನಿವಾರ್ಯತೆ, ಗಂಡನ ಜೊತೆಗೆ ಮನೆ ಮಂದಿಯಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು, ಬಂಧು ಮಿತ್ರರೊಂದಿಗೆ ನಗುನಗುತ್ತಾ ದಿನ ಕಳೆಯುವುದು ಎಂದರೆ ಒಂದು ದೊಡ್ಡ ಸವಾಲೇ ಸರಿ.

ಸೊಸೆ ಬಂದಳು ಇನ್ನೇನು ನನಗೆ ಕೆಲಸವಿಲ್ಲ ಅನ್ನೋ ಅತ್ತೆಗೂ, ಪ್ರತಿನಿತ್ಯ ಹೆಂಡತಿ ಮಾಡಿದ ಊಟ ತಿಂದು ಬೇಜಾರಾಗಿದೆ ಅನ್ನೋ ಮಾವನಿಗೂ, ಮದುವೆ ವಯಸ್ಸಿಗೆ ಬಂದ ಗಂಡನ ತಂಗಿಗೋ-ತಮ್ಮನಿಗೂ, ಮಕ್ಕಳಿಗೂ ಆಕೆ ಒಬ್ಬಳೇ ಶಕ್ತಿ. ಆಕೆ ಮಾತ್ರ ಇವರೆಲ್ಲರು ಬಯಸಿದ ಕೆಲಸವನ್ನು ನಿರ್ವಹಿಸುವಂತವಳಾಗಿರುತ್ತಾಳೆ. ಮನೆಯ ಸಂಪೂರ್ಣ ಜವಬ್ದಾರಿಯನ್ನ ಹೊತ್ತುಕೊಳ್ಳುವಂತವಳಾಗಿರುತ್ತಾಳೆ. ಹೀಗಾಗಿ ಆಕೆಗೆ ದಿನವಿಡೀ ಅಡುಗೆ ಮಾಡುವ, ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ಮನೆ ಸ್ವಚ್ಚವಾಗಿಡುವ ಕೆಲಸಗಳ ಜೊತೆಗೆ ಇನ್ನಿತರ ಕೆಲಸಗಳು ಅಧಿಕ.

ಗಂಡಸರ ಆಲೋಚನೆ  :-

ಇದನ್ನ ಓದುವ ಗಂಡಸರು “ ಅಯ್ಯೋ.. ನಮ್ಮ ಮನೆಯಲ್ಲಿ ವಾಶಿಂಗ್ ಮಷೀನ್ ಇದೆ, ಪಾತ್ರೆ ತೊಳೆದು ಮನೆ ಒರೆಸಿ ಅಡುಗೆ ಮಾಡಲು ಕೆಲಸದಮ್ಮ ಬರುತ್ತಾಳೆ. ಸಾಲದಕ್ಕೆ ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಮತ್ತು ಮಕ್ಕಳು ಮಾತ್ರ ಇರೋದು “ ಅಂತ ಥಟಂತ ಅಂದುಕೊಂಡು ಮುಂದೆ ಓದುವುದನ್ನೇ ನಿಲ್ಲಿಸಿಬಿಡಬೇಡಿ. ಯಾಕಂದ್ರೆ ಮನೆಯಲ್ಲೇನಿರುತ್ತೆ ಮಹಿಳೆಯರಿಗೆ ಕೆಲಸ..? ಎನ್ನುವ ಪ್ರಶ್ನಗೆ ಉತ್ತರ ಆರಂಭವಾಗೇ ಇಲ್ಲ.

ಮನೆಯಲ್ಲಿ ಎಲ್ಲಾ ಕೆಲಸ ಮಾಡುವ ಯಂತ್ರೋಪಕರಣಗಳು ಇರಬಹುದು. ಕೆಲಸ ಮಾಡುವ ಕೆಸದಾಕೆ ಕೂಡ ಮನೆಗೆ ಬಂದು ಹೋಗಬಹುದು. ಆದ್ರೆ ಇದರ ಹೊರತಾಗಿಯೂ ಮಹಿಳೆಯರಿಗೆ ಮನೆಯಲ್ಲಿರುವ ಕೆಲಸಗಳೇನು..? ಆಕೆ ಯಾಕೆ ತುಂಬಾನೇ ಬ್ಯೂಸಿ. ಅನ್ನೋದಕ್ಕೆ ಈಗ ಉತ್ತರ ನೋಡೋಣ.

ತನ್ನ ಜೀವನದಲ್ಲಯೇ ಇನ್ನೊಂದು ಜೀವವನ್ನು ಮಾಡುವ ಶಕ್ತಿ ಇರುವುದು ಹೆಣ್ಣಿಗೊಂದು ವರದಾನ. ಒಂಬತ್ತು ತಿಂಗಳ ಕಾಲ ಜೀವದಲ್ಲಿಯೇ ಬೆರೆತ ಮಗು ಹೊರ ಪ್ರಪಂಚಕ್ಕೆ ಬಂದು, ನಿಧಾನವಾಗಿ ತನ್ನ ವಿಕಾಸವನ್ನು ಕಾಣುತ್ತದೆ. ತಾಯಿಯ ಜೀವನದಲ್ಲಿ ಬೆರೆತು ಸೂಕ್ತ ಸಮಯದ ನಂತರ ಹೊರ ಬರುವ ನೈಸರ್ಗಿಕ ಪ್ರಕ್ರಿಯೆಯು ಬಹಳ ಪ್ರಮುಖವಾದ್ದು. ಈ ಪ್ರಕ್ರಿಯೆಯ ಬಳಿಕ ತಾಯಿ ತನ್ನ ಜೀವನದುದ್ದಕ್ಕೂ ಕೆಲ ಸಮಸ್ಯೆಗಳನ್ನು ಶಾಶ್ವತವಾಗಿ ಅನುಭವಿಸುವ ಅನಿವಾರ್ಯತೆ ಇರುತ್ತದೆ. ಇದರಲ್ಲಿ ಸೋಂಟ ನೋವು, ಬೆನ್ನು ನೋವು, ಕೈ, ಕಾಲು ನೋವು ಹೀಗೆ ಅನೇಕ ಸಮಸ್ಯೆಗಳು ಜೀವನದುದ್ದಕ್ಕೂ ಅನಿವಾರ್ಯವಾಗಿ ಬಿಡುತ್ತವೆ. ಈ ಎಲ್ಲಾ ನೋವುಗಳನ್ನ ನುಗ್ಗಿಕೊಂಡು ಹೆಣ್ಣು ತನ್ನ ದೈನಂದಿನ ಕಾರ್ಯಗಳಲ್ಲಿ ನಿರತಳಾಗಿರುತ್ತಾಳೆ.

ಮನೆಯಲ್ಲಿ ಮಹಿಳೆಗಿರುವ ಕೆಲಸಗಳೇನು…?

ಹಾಗೇ ಒಂದು ಬಾರಿ ಬೆಳಿಗ್ಗೆಯಿಂದ ಸಂಜೆಯವರೆಗೂ ಒಬ್ಬ ಗೃಹಿಣಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಮೆಲುಕು ಹಾಕುತ್ತಾ ಹೋಗೋಣ. ಬಹುತೇಕ ಮನೆಗಳಲ್ಲಿ ಬೆಳಗಿನಜಾವ ಮೊದಲು ಏಳುವುದು ಗಂಡಸರಿಗಿಂತ ಮಹಿಳೆಯರೇ ಹೆಚ್ಚು. ಅವರ ದಿನ ಶುರುವಾಗುವುದು ಟೀ-ಕಾಫಿಯಿಂದ. ಇದೊಂದು ಕೆಲಸವನ್ನ ಶುರು ಮಾಡಲು ಆಕೆ ಅದೆಷ್ಟು ಶ್ರಮ ವಹಿಸುತ್ತಾಳೆ ಗೊತ್ತಾ..? ಹಾಲು ಮನೆಗೇ ಬರುವಂತಿದ್ದರೆ, ಹಾಲು ಕೊಡುವಾತ ಯಾವಾಗಾ ರಜೆಯನ್ನು ತೆಗೆದುಕೊಂಡಿದ್ದ…? ಯಾವ ದಿನ ಆತ ಹಾಲನ್ನು ಕಡಿಮೆ ಕೊಟ್ಟಿದ್ದ…? ಆತನಿಗೆ ಈ ತಿಂಗಳು ಕೊಡಬೇಕಾದ ಹಣವೆಷ್ಟು..? ಹಾಲು ಬಂದ ವೇಳೆ ನಾವಿರದ ದಿನ ಯಾವುದು..? ಹೀಗೆ ಹಾಲು, ಮೊಸರು, ಪೇಪರ್, ಪ್ರತಿನಿತ್ಯ ಕೊಡುವ ತರಕಾರಿ, ಹೂವು ಇತ್ಯಾದಿ ಬಗ್ಗೆ ಲೆಕ್ಕವನ್ನಿಟ್ಟಿರುತ್ತಾಳೆ. ಇವೆಲ್ಲವೂ ಮನೆ ಬಾಗಿಲಿಗೆ ಬಂದಾ ಪ್ರತೀ ಬಾರಿಯೂ ಗೃಹಿಣಿಯರೇ ಸಂಗ್ರಹಿಸುತ್ತಾರೆ. ಮಾರಾಟಗಾರರೊಂದಿಗೆ ಚೌಕಾಸಿಗಿಳಿದು ಲೆಕ್ಕ ಪಕ್ಕ ಮಾಡಿಕೊಂಡು ಅದರಲ್ಲಿ ಒಂದು ಚೂರು ಹಣ ಉಳಿದ್ರೂ ಅದನ್ನ ಜೋಪಾನವಾಗಿ ಕಾಪಾಡುತ್ತಾರೆ.

ಇನ್ನೂ ಕಾಫಿ ಅಥವಾ ಟೀ ಮಾಡಿ ಮನೆ ಮಂದಿಯನ್ನೆಲ್ಲಾ ಎಬ್ಬಿಸುವುದು ಗೃಹಿಣಿಯರು ಮಾಡುವ ಮೊದಲ ಕೆಲಸ. ಇಲ್ಲಿಂದಲೇ ಅವರ ಕೆಲಸ ಆರಂಭವಾಗೋದು. ಗಂಡನಿಗೆ ಕಾಫಿ- ಮಕ್ಕಳಿಗೆ ಹಾಲು ಅಥವಾ ಬೂಸ್ಟ್ ಅಂತಲೇ ಇಟ್ಟುಕೊಂಡ್ರು ಎರಡೂ ಪ್ರತ್ಯೇಕ ಕೆಲಸ ಅನ್ನೋದನ್ನ ಮರಿಬಾರದು. ಕಾಫಿ ಹಾಗೂ ಹಾಲು ಕುಡಿದ ಲೋಟಗಳನ್ನ ತೆಗೆದು ಅಡುಗೆ ಮನೆಗೆ ಶಿಫ್ಟ್ ಮಾಡುವುದು ಒಂದು ಕೆಲಸವೇ. ಗಂಡ ಓದಿದ ನ್ಯೂಸ್ ಪೇಪರ್ ನನ್ನು ಅಚ್ಚುಕಟ್ಟಾಗಿ ಮಡಚಿ ಇಡುವುದು ಒಂದು ಕೆಲಸವೇ. ಪ್ರತೀ ಬಾರಿ ಮನೆ ಬಾಗಿಲಿಗೆ ಬರುವ ವ್ಯಾಪಾರಿಗಳ ಮುಂದೆ ನಿಂತು ಜಾಣ್ಮೆಯಿಂದ ವ್ಯವಹರಿಸುವುದು ಕೆಲಸವೇ. ಗಂಡ-ಮಕ್ಕಳು ಕೇಳುವ ವಸ್ತುಗಳನ್ನು ಹುಡುಕಿ ಕೊಡುವುದು ಒಂದು ಕೆಲಸವೇ. ಈ ಕೆಲಸಗಳನ್ನ ಮಾಡುವಾಗ ಆಕೆ ಅದೆಷ್ಟು ಓಡಾಡುತ್ತಾಳೆ..? ಅದೆಷ್ಟು ಮಾತನಾಡುತ್ತಾಳೆ….? ಅನ್ನೋದನ್ನೂ ಲೆಕ್ಕಕ್ಕೆ ಇಡುವುದು ಸೂಕ್ತ. ಕೇಳುವವರಿಗೆ ಇದು ಸಣ್ಣ ಕೆಲಸಗಳೇ ಆದರೂ ನಾವಿನ್ನೂ ಬೆಳಗಿನ ಉಪಾಹಾರಕ್ಕೆ ಬಂದಿಲ್ಲ. ಅದಾಗಲೇ ಗೃಹಿಣಿಯರು ಇಷ್ಟೆಲ್ಲಾ ಓಡಾಡಿರುತ್ತಾರೆ. ಇದಿಷ್ಟನ್ನೇ ಶ್ರಮ ಎಂದೇಳು ನಾವು ಹೊರಟಿಲ್ಲ. ‘ಫಿಲ್ಮ್ ಅಭಿ ಬಾಕಿ ಹೈ..’

ಇಷ್ಟರ ಹೊತ್ತಿಗೆ ಬೆಳಗಿನ ಸ್ನಾನ ಆಗಬೇಕು. ಪೂಜೆ ಆಗಿರಬೇಕು. ಮಕ್ಕಳಿಗೆ ವಸ್ತ್ರಗಳನ್ನ ಕೊಡಬೇಕು, ನೀರು ಬಿಸಿಯಾಗಿರುವುದರ ಬಗ್ಗೆ ಆಗಾಗ ಪರಿಶೀಲಿಸುತ್ತಿರಬೇಕು. ಶಾಲೆಗೆ ಹೋಗುವ ಮಕ್ಕಳಾದರೆ ಬ್ಯಾಗ್ ರೆಡಿ ಮಾಡಬೇಕು. ಚಿಕ್ಕ ಮಕ್ಕಳಾದರೆ ಸ್ನಾನ ಮಾಡಿಸಬೇಕು. ಈ ಕೆಲಸಗಳನ್ನು ಮಕ್ಕಳು ಒಪ್ಪುವ ಸಮಯದಲ್ಲೇ ಮಾಡಬೇಕು. ಇಲ್ಲವಾದರೆ ಮಕ್ಕಳು ಹಟ ಹಿಡಿದು ಶಾಲೆಗೆ ಕಳಿಸುವುದು ಕಷ್ಟವೇ. ಹೀಗೆ ಪ್ರತೀ ಬಾರಿ ಮಕ್ಕಳಿಗೆ ಶಾಲೆಗೆ ಹೋಗುವ ಬಗ್ಗೆ ಎಚ್ಚರಿಸುತ್ತಿರಲೇಬೇಕು. ಮಕ್ಕಳು ಮಾಡುವ ತರ್ಲೆಗಳನ್ನ ಸಹಿಸಿಕೊಂಡು ಅವರು ಹೇಳುವ ಸವಾಲುಗಳನ್ನ ಒಪ್ಪಿಕೊಂಡು ಶಾಲೆಗೆ ರೆಡಿ ಹೊತ್ತಿನಲ್ಲಿ ಬೆಳಗಿನ ತಿಂಡಿ ರೆಡಿಯಾಗಿರಬೇಕು. ಶಾಲೆಗೆ ಹೋಗುವ ಮಕ್ಕಳಿಗೆ ತಿಂಡಿ ತಿನ್ನಿಸುವುದು ಅಂದರೆ ಅದಕ್ಕಿಂತ ದೊಡ್ಡ ಕೆಲಸ ಬಹುಶ: ಮಹಿಳೆಯರಿಗೆ ಇರಲಿಕ್ಕಿಲ್ಲ ಬಿಡಿ.

ಮಹಿಳೆ ಹಾಗೂ ಗಂಡಸು ಮಾಡುವ ಕೆಲಸದಲ್ಲಿರುವ ವ್ಯತ್ಯಾಸ :-

ಇನ್ನೂ ಆ ಮಕ್ಕಳಿಗೆ ಬಾಕ್ಸ್ ರೆಡಿ ಮಾಡುವುದು ಅಂದ್ರೆ ಬೇಗ ಮುಗಿದು ಹೋಗುತ್ತೆ ಅಲ್ವಾ..? ಅದೆಷ್ಟೊತ್ತು? ಮಾಡಿರುವ ಅಡುಗೆಯನ್ನ ಬಾಕ್ಸ್ ಗೆ ಹಾಕೋದು ಅಷ್ಟೇ ಅಂತ ಗಂಡಸರು ಹೇಳಿ ಬಿಡಬಹುದು. ಆದರೆ ಇದರಲ್ಲೂ ಗೈಹಿಣಿಯರು ನಿರ್ವಹಿಸುವ ಪಾತ್ರ ದೊಡ್ಡದು. ಹೇಗೆ ಗೊತ್ತಾ..? ಶಾಲೆಗೆ ಹೋಗುವ ಮಕ್ಕಳಿಗೆ ತಾಯಿಯಂದಿರು ಹೆಚ್ಚು ಕಾಳಜಿ ವಹಿಸುತ್ತಾರೆ. ಎಂದಿನ ಆಹಾರಕ್ಕಿಂತ ಹೆಚ್ಚು ಪೌಷ್ಠಿಕಾಂಶವಿರುವ ಆಹಾರ ನೀಡುವತ್ತ ಮಹಿಳೆಯರು ಕಾಳಜಿ ವಹಿಸುತ್ತಾರೆ.  ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಬಾಕ್ಸ್ ಗೆ ಹಾಕಿ ಕಳುಸುತ್ತಾರೆ. ಇದೇ ಕೆಲಸವನ್ನು ಗಂಡಸರಿಂದ ನಿರೀಕ್ಷೆ ಮಾಡಿದರೇ… ತಯಾರಿಸಿದ ಊಟವನ್ನೇ ಬಾಕ್ಸ್ ಗೆ ಹಾಕಿ ಕಳುಹಿಸಿಬಿಡುತ್ತಾರೆನೋ..? ಇದೇ ಒಬ್ಬ ಮಹಿಳೆಗೂ ಹಾಗೂ ಗಂಡಸರಿಗೂ ಕೆಲಸದಲ್ಲಿರುವ ವ್ಯತ್ಯಾಸ. ಇದೊಂದೇ ಕೆಲಸವಲ್ಲ. ಮನೆಯಲ್ಲಿ ಇಂಥಹ ಅದ್ಯಾವ ಕೆಲಸವಾದರೂ ಮಹಿಳೆ ಇದೇ ರೀತಿ ಆರೋಗ್ಯದ ಕಡೆಗೆ ಕಾಳಜಿ ವಹಿಸುತ್ತಾಳೆ. ಕೆಲಸದವರು ತೊಳೆದ ಪಾತ್ರೆ, ತೊಳೆದ ಬಟ್ಟೆ, ಗುಡಿಸಿದ ಮನೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಸ್ವಚ್ಚತೆ ಕಂಡುಬರದಿದ್ದಲ್ಲಿ ಅದನ್ನ ಪುನ: ಮಾಡುವ ತಾಳ್ಮೆ ಹೊಂದಿರುತ್ತಾಳೆ. ತೊಳೆದ ಪಾತ್ರೆ ಜೋಡಿಸುವುದು, ಬಟ್ಟೆ ಒಣಗಿ ಹಾಕುವುದು, ಒಣಗಿದ ಬಟ್ಟೆಗಳನ್ನ ಅಚ್ಚುಕಟ್ಟಾಗಿ ಮಡಚಿ ಇಡುವುದು. ಇದು ನಿತ್ಯದ ಕೆಲಸ. ಅದೆಷ್ಟೋ ಗೃಹಿಣಿಯರು ಇದೆಲ್ಲದರ ಕೆಲಸದ ಮಾಡಿ ಮುಗಿಸಿದ ಬಳಿಕವಷ್ಟೇ ಅಂದರೆ ಸರಿಸುಮಾರು 11 ಗಂಟೆಯ ನಂತರವೇ ಅಲ್ಪಾಹಾರವನ್ನ ಸೇವಿಸುವುದು. ಆದರೆ ಇದ್ಯಾವುದರ ಕಡೆಗೆ ಗಂಡಸರು ತಲೆ ಹಾಕಿಕೂಡ ನೋಡುವುದಿಲ್ಲ. ತಲೆ ಹಾಕಿ ನೋಡುವುದಿರಲಿ ಈ ಕೆಲಸ ಮಹಿಳೆಯರು ಮನೆಯಲ್ಲಿ ಮಾಡಿದ್ದಾರೆ ಅನ್ನೋದು ಕೂಡ ಅವರ ಅರಿವಿಗೆ ಇರುವುದಿಲ್ಲ.

ಕೆಲಸ ಮಾಡುವ ಗಂಡಸರ ಅಂಕಿ-ಅಂಶ :-

ನೀವು ನಂಬುತ್ತೀರೋ ಇಲ್ವೋ ಗೊತ್ತಿಲ್ಲ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ(ಒಇಸಿಡಿ) ನಡೆಸಿದ ಸಮೀಕ್ಷೆ ಪ್ರಕಾರ ಗೃಹಕೃತ್ಯಗಳಲ್ಲಿ ಅತಿ ಕಡಿಮೆ ಸಮಯ ವಿನಿಯೋಗಿಸುವುದರಲ್ಲಿ ಭಾರತದ ಪುರುಷರು, ಇಡೀ ಪ್ರಪಂಚದಲ್ಲೇ ನಂ 1 ಸ್ಥಾನ ಅಲಂಕರಿಸಿದ್ದಾರೆ. ಕೇವಲ 19 ನಿಮಿಷ ಮಾತ್ರ ಅವರು ಮನೆಗೆಲಸ ಮಾಡುತ್ತಾರೆ. ಜಪಾನೀಯರು-24 ನಿಮಿಷ, ಕೊರಿಯನ್ಸ್-21, ಹಾಗೂ ಚೀನಿಯರು 48 ನಿಮಿಷ ಮನೆಯಲ್ಲಿ ಪತ್ನಿಗೆ ನೆರವಾಗುತ್ತಾರೆ.

ಇನ್ನೂ ನಿತ್ಯದ ಕೆಲಸದ ಹೊರತಾಗಿ ಪಾತ್ರೆ ಇಡುವ ಜಾಗದಲ್ಲಿ, ಬಟ್ಟೆ ಇಡುವ ವಾರ್ಡ್ರೋಬ್ ಗಳಲ್ಲಿ, ಪುಸ್ತಕ ಇಡುವ ಸ್ಥಳ, ಶೋಕೇಸ್, ವಾಶ್ ರೂಮ್ ನಲ್ಲಿರುವ ಕಬೋಡ್ ಗಳು ಹೀಗೆ ಮನೆಯಲ್ಲಿರುವ ಪ್ರತಿಯೊಂದು ಸ್ಥಳಗಳನ್ನು ಸೂಕ್ಷ್ಮವಾಗಿ ಗಮನಿಸಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಒಂದೊಂದಾಗಿ ಸ್ವಚ್ಚ ಮಾಡುವ ಯೋಜನೆ ಮೊದಲೇ ಹಾಕಿಕೊಂಡಿರುತ್ತಾರೆ ಮಹಿಳೆಯರು. ಅದಕ್ಕಾಗಿ ಹಿರಿಯರು ಹೇಳೋದು “ಹೆಣ್ಣಿರುವ ಮನೆ ಬೃಂದಾವನಕ್ಕೆ ಸಮಾನ” ಎಂದು.

ಮನೆಯಲ್ಲಿ ಮಹಿಳೆ ಕೆಲಸಕ್ಕಾಗಿ ನೀಡುವ ಸಮಯ :-

ಗೃಹಿಣಿ ಗೃಹ ಮುಚ್ಚತೆ, ಹೆಣ್ಣು ಎಂದರೆ ಹೀಗೇ ಇರಬೇಕು ಎನ್ನುವ ‘ಪುರುಷಸೂಕ್ತ’ಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳು ಅಡುಗೆ ಮಾಡುವುದು, ತೊಳೆಯುವುದು, ಬೆಳಗುವುದು, ಮಕ್ಕಳು ಮರಿಗಳನ್ನು ಸಾಕುವುದು, ಒಟ್ಟಾರೆ ಮನೆಯ ಸಮಸ್ತ ಜವಾಬ್ದಾರಿಯನ್ನು ನಿಭಾಯಿಸುವುದಕ್ಕೆ 298 ನಿಮಿಷ ಅಂದರೆ ಸುಮಾರು 5 ಗಂಟೆ ವಿನಿಯೋಗಿಸುತ್ತಾರೆ ಎಂದು ಒಇಸಿಡಿ ಲೆಕ್ಕ ಹಾಕಿದೆ.

ಮನೆಯ ಎಲ್ಲಾ ಕೆಲಸದ ನಡುವೆಯೋ ಮನೆಗೆ ಬೇಕಾದ ವಸ್ತುಗಳನ್ನ ಖರೀದಿ ಮಾಡುವುದು ಒಂದು ಕೆಲಸವೇ. ಹೇಳಿ ಕೇಳಿ ಮಹಿಳೆಯರು ಸೌಂದರ್ಯ ಪ್ರೀಯರು. ಒಂದು ಹೆಣ್ಣಿಗೆ ತನ್ನ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ  ತಾನು ಬೆಳಗುವ ಮನೆಯ ಸೌಂದರ್ಯ ಕೂಡ ಅಷ್ಟೇ ಮುಖ್ಯ. ಮನೆಗೆ ಬೇಕಾಗುವ ಸಾಮಾನುಗಳ ಖರೀದಿ ಕೂಡ ಮಹಿಳೆಯರೇ ಮಾಡುವುದು ಹೆಚ್ಚು. ಕಾರಣ ಗಂಡಸರಿಗೆ ವ್ಯವಹರಿಸುವ ಜ್ಞಾನ ಇರುವುದಿಲ್ಲ ಎನ್ನುವುದು ಹೆಚ್ಚು ಮಹಿಳೆಯರ ಅಭಿಪ್ರಾಯ.

ಮಕ್ಕಳು ಶಾಲೆಯಿಂದ, ಗಂಡ ಆಫೀಸ್ ನಿಂದ ಬರುವ ಹೊತ್ತಿಗೆ ಊಟಕ್ಕೆ ಕೊಡುವುದೋ ಅಥವಾ ಸಂಜೆಯಾದರೆ ಸ್ಕ್ಯಾಕ್ಸ್ ಗಳನ್ನ ಕೊಡುವುದು ಮಾಡುತ್ತಾರೆ. ಕಳಚಿದ ಬಟ್ಟೆಗಳನ್ನ ಮಡಿಚಿ, ಶೂಗಳನ್ನ ಒಂದೆಡೆ ಜೋಡಿಸುವುದು ಇವೆಲ್ಲವೂ ಕೆಲಸಗಳೇ. ಕೇಳುವುದಕ್ಕೆ ಸಣ್ಣ ಪುಟ್ಟ ಕೆಲಸಗಳೇ ಆದರೂ ಅದರಲ್ಲಿ ಗೃಹಿಣಿ ಹಾಕುವ ಶ್ರಮ, ಆಲೋಚನೆ, ಜಾಣ್ಮೆಯನ್ನ ಗಂಡಸರು ಹಾಕಲು ಸಾಧ್ಯವಿಲ್ಲ.

ಇದೆಲ್ಲಾವೂ ಮನೆಯಲ್ಲಿ ಕೆಲಸದವರು ಇದ್ದೂ ಮಾಡುವಂತಹ ಕೆಲಸಗಳು, ಮನೆಯಲ್ಲಿ ಕೊಂಚ ದೊಡ್ಡ ಮಕ್ಕಳು ಇರುವಂತಹ ವೇಳೆ ಇರುವ ಕೆಲಸಗಳು, ಕೆಲಸಕ್ಕೆ ಹೋಗದೇ ಇರುವಂತಹ ಮಹಿಳೆಯರ ಕೆಲಸಗಳು, ಒಂದು ವೇಳೆ ಮನೆ ಕೆಲಸದಾಕೆ ಇಲ್ಲವಾದಲ್ಲಿ, ಕೆಲವೊಂದು ದಿನ ಬಾರದೇ ಹೋದಲ್ಲಿ, ಚಿಕ್ಕ ಮಕ್ಕಳಿದ್ದಲ್ಲಿ, ಕೆಲಸಕ್ಕೆ ಹೋಗುವ ಮಹಿಳೆಯಾದಲ್ಲಿ, ಮನೆ ತುಂಬಾ ಜನ ಇದ್ದಲ್ಲಿ ಇನ್ನೋ ದುಪ್ಪಾಟಾಗಿ ಕೆಲಸ ಮಾಡ ಬೇಕಾದ ಸಂದರ್ಭಗಳು ಇರುತ್ತವೆ. ಇದರಲ್ಲಿ ಗಂಡಸರು ಕೊಂಚ ಕೆಲಸಗಳನ್ನ ಶೇರ್ ಮಾಡಿಕೊಂಡರೂ ಗೃಹಿಣಿಯರಿಗಿರುವಷ್ಟು ಜವಬ್ದಾರಿ ಹೋರಲು ಸಾಧ್ಯವಿಲ್ಲ.

ಗಂಡಸಿನ ದೃಷ್ಟಿಯಲ್ಲಿ ಮಹಿಳೆ ಮಾಡುವುದು ಸಂಬಳವಿಲ್ಲದಚಿಲ್ಲರೆಕೆಲಸ :-

ಗೃಹಕೃತ್ಯಗಳೇನಿದ್ದರೂ ಮಹಿಳೆಯರಿಗೇ ಸೇರಿದ್ದು ಎಂಬ ನಂಬಿಕೆ ಆಳವಾಗಿ ಬೇರೂರಿರುವುದರಿಂದ ಮತ್ತು ಇಂತಹ ಸಂಬಳವಿಲ್ಲದ ‘ಚಿಲ್ಲರೆ’ ಕೆಲಸ ಮಾಡುವುದಕ್ಕೆ ಹೆಂಗಳೆಯರೇ ಲಾಯಕ್ಕು ಎನ್ನುವ ಧೋರಣೆಯಿಂದ ಗಂಡಸರು ಮನೆ ಕೆಲಸ ಮಾಡುವುಕ್ಕೆ ಹಿಂದೇಟು ಹಾಕುತ್ತಾರೆ.

ಈಗಿನ ಕಾಲದಲ್ಲಿ ಮಹಿಳೆಯರು ದುಡಿದು ಮನೆ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಆದರೆ ಅದೆಷ್ಟು ಗಂಡಸರು ಮನೆಯ ಇಂತೆಲ್ಲಾ ಕೆಲಸಗಳನ್ನ ಸಂಪೂರ್ಣವಾಗಿ ಮಾಡಿ ಹೊರಗಡೆ ಕೆಲಸಕ್ಕೆ ಹೋಗಬಲ್ಲರು..? ಮನೆಯಲ್ಲಿ ಅಡುಗೆ ಮಾಡಿ, ಬಟ್ಟೆ ತೊಳೆದು, ಪಾತ್ರೆ ತೊಳೆದು, ಕಸ ಗುಡಿಸಿ ಆಫೀಸ್ ಹೋಗೋ ಗಂಡಸರು ಸಿಗಬಹುದು. ಆದರೆ ಮಹಿಳೆಯರಂತೆ ಆರೋಗ್ಯ ಭರಿತವಾಗಿ ಸ್ವಚ್ಚತೆಯನ್ನು ಕಾಪಾಡುವಂತಹ ಗಂಡಸರು ಬಹುತೇಕ ಕಡಿಮೆ. ಯಾಕಂದ್ರೆ ಗಂಡಸರ ಕೆಲಸ ಆಲೋಚನೆಗಳು ಶುರುವಾಗುವ ಗೊತ್ತಿಗೆ ಮಹಿಳೆಯರ ಕೆಲಸಗಳು ಆರಂಭವಾಗಿರುತ್ತವೆ. ಗಂಡ ಆಫೀಸ್ ನಿಂದ ಬಂದರೂ ಆಕೆಯ ಕೆಲಸ ಮುಗಿದಿರುವುದಿಲ್ಲ. ರಾತ್ರಿ ಮಲಗುವವರಿಗೆ ಹೀಗೆ ಒಂದಲ್ಲಾ ಒಂದು ಕೆಲಸಗಳಿಗೆ ಓಡಾಡುತ್ತಲೇ ಕೆಲಸ ಮಾಡುತ್ತಲೇ ಇರುತ್ತಾಳೆ. ಹೀಗಾಗಿ ಹೆಣ್ಣಿನ ಸ್ಥಾನವನ್ನ ಗಂಡು ತುಂಬಲು ಸಾಧ್ಯವಿಲ್ಲ. ಆಕೆಗೆ ಸರಿಸಾಟಿಯಾಗಿ ಮನೆ ಜವಬ್ದಾರಿಯನ್ನು ಹೊತ್ತುಕೊಳ್ಳುವಂತ ಗಂಡಸರು ತೀರಾ ವಿರಳ.

ಪರಿಹಾರವೇನು..?

ಹೆಣ್ಣು ಕಣ್ಣು ಇದ್ದಂತೆ ಅವಳು ಯಾರ ಮನೆಯಲ್ಲಿ ಜನಿಸುತ್ತಾಳೋ ಅವರ ಮನೆಯಲ್ಲಿ ಭಾಗ್ಯದ ಮಹಾಲಕ್ಷ್ಮಿಯೇ ಮನೆಗೆ ಬಂದಂತೆ. ಆ ಮನೆ ನಿಜವಾಗಲೂ ನಂದಾದೀಪವೇ ಸರಿ. ಹೆಣ್ಣು ಇರುವ ಮನೆಯಲ್ಲಿ ಚಿಂತೆಗೆ ಜಾಗವಿಲ್ಲ ಹೆಣ್ಣಿರುವ ಪ್ರಪಂಚದಲ್ಲಿ ಹರ್ಷಕ್ಕೆ ಪಾರವೇ ಇಲ್ಲ.

ಹೀಗಾಗಿ ‘‘ಮನೆಯಲ್ಲಿ ನಮ್ಮ ಮಗ ಒಂದು ಹುಲ್ಲು ಕಡ್ಡಿ ಇತ್ತಕಡೆಯಿಂದ ಅತ್ತ ಕಡೆ ಹಾಕೋದಕ್ಕೆ ನಾವ್ ಬಿಡೋಲ್ಲ ’’ ಎಂದು ಅನೇಕ ತಾಯಿಂದರು ತುಂಬ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಬಸವ ಆಟ ಆಡಲು ಹೋದನು, ಕಮಲ ಪಾತ್ರೆ ತೊಳೆಯಲು ಹೋದಳು- ಎನ್ನುವಂತಹ ಪಾಠಗಳ ಮೂಲಕ ಇಲ್ಲಿ ‘ಅವಳ’ಕೆಲಸ ಮತ್ತು ‘ಅವನ’ ಕೆಲಸವನ್ನು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ವಿಂಗಡಿಸಿರಲಾಗಿರುತ್ತದೆ. ಕೆಲಸದ ಈ ಲಿಂಗೀಯ ವಿಭಜನೆಗೆ ವಿದ್ಯುನ್ಮಾನ ವಾಹಿನಿಗಳು, ಸಿನಿಮಾಗಳು ಜಾಹೀರಾತುಗಳು ಪೋಷಕವಾಗಿವೆ. ಮನೆಗೆಲಸ ಮಾಡುವ ಗಂಡಸರನ್ನು ಬಫೂನ್‌ಗಳಂತೆ, ಹೆಣ್ಣಿಗನಂತೆ ನೋಡಲಾಗುತ್ತದೆ. ಈ ದೃಷ್ಟಿಕೋನ ಬದಲಾದರೆ ಮನೆ ಕೆಲಸದಲ್ಲಿ ಹೆಣ್ಣಿನಷ್ಟೇ ಗಂಡಸರು ಪಾಲ್ಗೊಳ್ಳುವುದು ಸಾಧ್ಯವಿದೆ.

– ಸುನೀತಾ ಭಂಡಾರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights