ಕೊರೊನಾ ಸಂಕಷ್ಟದಲ್ಲಿರುವವರ ನೆರವಿಗೆ ಬಂದ ರಿಯಲ್ ಹೀರೋಸ್….!
ಕೊರೊನಾ ವೈರಸ್ ನಿಂದ ದೇಶವೇ ಲಾಕ್ಡೌನ್ ಆಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಹಸಿದವರಿಗೆ ನೆರವು ನೀಡಲು ಸಿನಿ ಸ್ಟಾರ್ಸ್ ಮುಂದಾಗಿದ್ದಾರೆ.
ಹೌದು… ಸ್ಯಾಂಡಲ್ ವುಡ್ ನ ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕೊರೊನಾ ಸಂಕಷ್ಟದಲ್ಲಿರುವವರ ನೆರವಿಗೆ ಮುಂದೆ ಬಂದಿದ್ದಾರೆ.ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮತ್ತು ಹಸಿದವರಿಗೆ ಊಟದ ವ್ಯವಸ್ತೆಯನ್ನು ಮೈಸೂರಿನ ಡಿಬಾಸ್ ಅಭಿಮಾನಿಗಳು ಮಾಡುತ್ತಿದ್ದಾರೆ. ಇದರ ಜೊತೆಗೆ ಆರೋಗ್ಯದ ತೊಂದರೆಯಾದರೆ ಅಂತವರಿಗೆ ನೆರವಾಗಲು ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಡಿಬಾಸ್ ಅಭಿಮಾನಿಗಳು ರಾತ್ರಿ ಕೂಡ ಹಸಿದವರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಇನ್ನೂ ಕೊರೊನಾ ವೈರಸ್ನಿಂದಾಗಿ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದು, ಇದರ ಬಿಸಿ ಸಿನಿಮಾ ಕ್ಷೇತ್ರದ ದಿನಗೂಲಿ ನೌಕರರಿಗೂ ತಟ್ಟಿದೆ. ಇದನ್ನರಿತ ತೆಲುಗು, ತಮಿಳು ಕಲಾವಿದರು ಸಹಾಯಕ್ಕೆ ಮುಂದಾಗಿದ್ದು, ಸ್ಯಾಂಡಲ್ವುಡ್ನಲ್ಲಿಯೂ ಹಲವು ನಟ, ನಟಿಯರು ಸಹಾಯಕ್ಕೆ ಮುಂದಾಗಿದ್ದಾರೆ. ಇವರ ಸಾಲಿಗೆ ಇದೀಗ ನಿಖಿಲ್ ಕುಮಾರಸ್ವಾಮಿಯವರೂ ಸೇರಿಕೊಂಡಿದ್ದು, ಕಾರ್ಮಿಕರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.ಯೂನಿಟ್ ಬಾಯ್ಸ್, ಮೇಕಪ್ ಬಾಯ್ಸ್, ಲೈಟ್ ಬಾಯ್ಸ್, ಫೈಟರ್ಸ್, ಸಹ ನೃತ್ಯಗಾರರು ಹೀಗೆ ಸಾಕಷ್ಟು ವಿಭಾಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಕಷ್ಟದಲ್ಲಿದ್ದಾರೆ. ಈ ಎಲ್ಲ ಕಾರ್ಮಿಕರಿಗೂ ಸಂಘಗಳಿದ್ದು, ಈ ಸಂಘಗಳ ಮೂಲಕ ಸಹಾಯ ಮಾಡಲು ಯೋಚಿಸಿದ್ದಾರೆ.ಅವರ ಖಾತೆಗಳಿಗೆ ನೇರವಾಗಿ ಹಣ ಹಾಕಲು ನಿಖಿಲ್ ಕುಮಾರಸ್ವಾಮಿ ನಿರ್ಧರಿಸಿದ್ದಾರಂತೆ.3 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ತಲಾ ಒಂದು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಈ ಮೂಲಕ ಒಟ್ಟು 30 ಲಕ್ಷ ರೂ. ಹಣವನ್ನು ಕಾರ್ಮಿಕರಿಗಾಗಿ ನಿಖಿಲ್ ನೀಡುತ್ತಿದ್ದಾರೆ.
ಬಾಹುಬಲಿ ಪ್ರಭಾಸ್ ಕೊರೊನಾ ವಿರುದ್ಧದ ಹೋರಾಟಕ್ಕೆ 4 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಗುರುವಾರ ಪ್ರಭಾಸ್ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ 3 ಕೋಟಿ ರೂ. ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಪ್ರಭಾಸ್ ಒಟ್ಟು ನಾಲ್ಕು ಕೋಟಿ ರೂ. ದಾನ ಮಾಡಿದ್ದಾರೆ.
ನಟ ಪವನ್ ಕಲ್ಯಾಣ ಎರಡು ಕೋಟಿ ಆರ್ಥಿಕ ನೆರವು ನೀಡಿದ್ದರು. ಈ ಪೈಕಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ನೆರವು ನೀಡಿದ್ದಾರೆ. ಟಾಲಿವುಡ್ನ ಮತ್ತೋರ್ವ ನಟ ಮಹೇಶ್ ಬಾಬು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಪವನ್ ಕಲ್ಯಾಣ ಆರ್ಥಿಕ ಸಹಾಯ ಮಾಡಿದ್ದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರಿಂದ ಪ್ರೇರಣೆಗೊಂಡ ನಟ ರಾಮ್ಚರಣ್ 70 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಕೇಂದ್ರ ಸರ್ಕಾರ ಮತ್ತು ಆಂಧ್ರ ಪ್ರದೇಶ, ತೆಲಂಗಾಣ ಸರ್ಕಾರ ಪರಿಹಾರ ನಿಧಿಗೆ ಹಂಚಿಕೆ ಮಾಡಿದ್ದಾರೆ.

