ಜುಲೈ 14ರ ರಾತ್ರಿಯಿಂದ ವಾರದ ಲಾಕ್ಡೌನ್: ಏನು ಲಭ್ಯ, ಯಾವುದಕ್ಕೆ ಬ್ರೇಕ್!
ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ 06 ಜಿಲ್ಲೆಗಳಲ್ಲಿ ಲಾಕ್ಡೌನ್ ಮಾಡಲು ಸರ್ಕಾರ ಅವಕಾಶ ನೀಡಿದೆ. ಬೆಂಗಳೂರಿನಲ್ಲಿ ಲಾಕ್ಡೌನ್ ಕಡ್ಡಾಯವೆಂದಿದ್ದು, ಉಳಿದ 06 ಜಿಲ್ಲೆಗಳ ಲಾಕ್ಡೌನ್ ವಿಚಾರವನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದೆ.
ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಮಂಗಳವಾರ) ರಾತ್ರಿ 08 ಗಂಟೆಯಿಂದ ಲಾಕ್ಡೌನ್ ಆರಂಭವಾಗಲ್ಲಿದ್ದು, ಜುಲೈ 23ರ ಬೆಳಗ್ಗೆ 05 ಗಂಟೆಯವರೆಗೆ ಲಾಕ್ಡೌನ್ ಇರಲಿದೆ. ಕಟ್ಟುನಿಟ್ಟಾಗಿ ಲಾಕ್ಡೌನ್ ಪಾಲಿಸಬೇಕೆಂದು ಸರ್ಕಾರ ಸೂಚಿಸಿದೆ.
ಲಾಕ್ಡೌನ್ ಚಾಲ್ತಿಯಲ್ಲಿದ್ದರೂ ಸಹ ಕಟ್ಟಡ ನಿರ್ಮಾಣ ಕಾಮಗಾರಿ, ಹೋಟೆಲ್ಗಳು (ಪಾರ್ಸೆಲ್ ಮಾತ್ರ), ಮೆಡಿಕಲ್, ತರಕಾರಿ ಮಳಿಗೆಗಳು, ಹಾಪ್ಕಾಮ್ಸ್, ಹಾಲಿನ ಅಂಗಡಿಗಳು, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಸರಾಗವಾಗಿ ನಡೆಯಲು ಅವಕಾಶ ಮಾಡಿಕೊಡಲಾಗಿದೆ.
ಉಳಿದಂತೆ, ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ತೆರೆಯುವಂತಿಲ್ಲ. ಬಿಎಂಟಿಸಿ, ಕೆಎಸ್ಆರ್ಟಿಸಿ, ಆಟೋ, ಕ್ಯಾಬ್, ಟ್ಯಾಕ್ಸಿಗಳೂ ರಸ್ತೆಗೆ ಇಳಿಯುವಂತಿಲ್ಲ.
ಅಲ್ಲದೆ, ಮೊದಲ ಹಂತದ ಲಾಕ್ಡೌನ್ ಹೇರಿದಾಗಿನಿಂದಲೂ ಮುಚ್ಚಲಾಗಿರುವ ಶಾಲಾ-ಕಾಲೇಜು, ಕೊಚಿಂಗ್ ಸೆಂಟರ್, ಚಿತ್ರಮಂದಿರ, ಶಾಪಿಂಗ್ ಮಾಲ್, ಸಭಾಭವನ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಿಕೆಗಳು ಯಥಾ ಪ್ರಕಾರ ಮುಚ್ಚಿರುತ್ತವೆ ಎಂದು ಸರ್ಕಾರ ತಿಳಿಸಿದೆ.
ಇದೆಲ್ಲದರ ನಡುವೆ, ತುರ್ತ ಸೇವೆಗಳಿಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದೆ. ನಾಳೆಯಿಂದ ಒಂದು ವಾರಗಳ ಕಾಲ ತುರ್ತು ಸೇವೆಗಳಿಗಾಗಿ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೂ ಕೇವಲ 134 ಬಿಎಂಟಿಸಿ ಬಸ್ ಸೇವೆ ಲಭ್ಯ ಇರಲಿದೆ.
ಅಗತ್ಯ ಸೇವೆಗಾಗಿ ಮಾತ್ರ ಬಿಎಂಟಿಸಿ ಬಸ್ನಲ್ಲಿ ಸಂಚಾರ ಮಾಡಬಹುದಾಗಿದೆ. ಯಾರಾದರೂ ಪರೀಕ್ಷೆ ಬರೆಯುವುದಾದಲ್ಲಿ ಹಾಲ್ ಟಿಕೆಟ್ ತೋರಿಸಿ ವಿದ್ಯಾರ್ಥಿಗಳು ಪ್ರಯಾಣ ಮಾಡಬಹುದು. ಜತೆಗೆ ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ತುರ್ತು ನಾಗರಿಕ ಸೇವಾ ಸಿಬ್ಬಂದಿ, ಪತ್ರಕರ್ತರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

