ಪೊಲೀಸ್‌ ಅಧಿಕಾರಿಯನ್ನು ಕೊಂದ ಆರೋಪಿಗೆ ವೇದಿಕೆಯಲ್ಲಿ ಪ್ರಮಾಣಪತ್ರ ನೀಡಿದ ಬಿಜೆಪಿ ನಾಯಕ: ವ್ಯಾಪಕ ಖಂಡನೆ

2018 ರಲ್ಲಿ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹತ್ಯೆಯಲ್ಲಿ ಸಂಚು ರೂಪಿಸದ ಆರೋಪಿ ಶಿಖರ್ ಅಗರ್‌ವಾಲ್ ಅವರಿಗೆ ಬುಲಂದ್‌ಶಹರ್ ಬಿಜೆಪಿ ಮುಖಂಡ ಅನಿಲ್ ಸಿಸೋಡಿಯಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ ವಿವಾದ ಸೃಷ್ಠಿಸಿದ್ದಾರೆ.

2018 ರಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದ ಗುಂಪುಥಳಿತ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ಆಗಿನ ಬಿಜೆಪಿ ಯುವ ಘಟಕದ ಅಧ್ಯಕ್ಷನಾಗಿದ್ದ ಶಿಖರ್ ಅಗರ್‌ವಾಲ್ ಪ್ರಮುಖ ಆರೋಪಿಯಾಗಿದ್ದಾರೆ.

ಜುಲೈ 14 ರಂದು “ಪ್ರಧಾನ್ ಮಂತ್ರಿ ಜನ್ ಕಲ್ಯಾಣ್‌ಕಾರಿ ಯೋಗಿ ಜಾಗೃತ ಅಭಿಯಾನ” ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುಲಂದ್‌ಶಹರ್‌ನ ಬಿಜೆಪಿ ಅಧ್ಯಕ್ಷ ಅನಿಲ್ ಸಿಸೋಡಿಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂಘಟನೆಯು ದೇಶಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವ ಉದ್ದೇಶ ಹೊಂದಿದ್ದು ಬಿಜೆಪಿಯ ಉನ್ನತ ನಾಯಕರನ್ನು ಅದರ ಮಾರ್ಗದರ್ಶಕರಾಗಿ ಹೊಂದಿದೆ ಎಂದು ತಿಳಿಸಿದೆ. ಈ ಕಾರ್ಯಕ್ರಮದಲ್ಲಿ ಪೊಲೀಸ್ ಕೊಂದ ಆರೋಪಿ ಶಿಖರ್ ಅಗರ್‌ವಾಲ್‌ಗೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂಬ ಪ್ರಮಾಣ ಪತ್ರವನ್ನು ಬಿಜೆಪಿ ಮುಖಂಡ ಹಸ್ತಾಂತರಿಸಿದ್ದಾರೆ. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಲೆಗಾರರನ್ನು ಬಿಜೆಪಿ ಅಭಿನಂದಿಸುತ್ತದೆ ಎಂದು ಟೀಕಿಸಲಾಗಿದೆ.

2018 ರಲ್ಲಿ, ಅಕ್ರಮ ಗೋಹತ್ಯೆಯ ವದಂತಿಗಳ ಮೇಲೆ ಹಿಂಸಾಚಾರ ಭುಗಿಲೆದ್ದ ನಂತರ ಈ ಪ್ರದೇಶದಲ್ಲಿ ಶಾಂತತೆಯನ್ನು ಪುನಃಸ್ಥಾಪಿಸಲು ಹೋದಾಗ ಸುಮಾರು 400 ಜನರ ಗುಂಪಿನಿಂದ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಲಾಯಿತು. ಕೊಡಲಿಯಿಂದ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಅವರ ಎರಡು ಬೆರಳುಗಳನ್ನು ಕತ್ತರಿಸಿ ಪೊಲೀಸರ ತಲೆಗೆ ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಿಖರ್ ಅಗರ್‌ವಾಲ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆತ ಜೈಲಿನಿಂದ ಹೊರಬಂದ ಸಂಧರ್ಭದಲ್ಲಿಯೂ ಸಹ ಯುವ ಬಿಜೆಪಿ ಘಟಕ ಸೇರಿದಂತೆ ಹಲವಾರು ಹಿಂದುತ್ವಪರ ಕಾರ್ಯಕರ್ತರು ಹೂವಿನ ಹಾರ ಹಾಕಿ, ಜೈ ಶ್ರೀರಾಮ್ ಘೋಷಣೆ ಕೂಗಿ ಸಂಭ್ರಮಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights