ರಾಜ್ಯದಲ್ಲಿ ಒಂದು ತಿಂಗಳ ಸಂಡೇ ಲಾಕ್‌ಡೌನ್, ವಾರದಲ್ಲಿ 2 ದಿನ ರಜೆ!

ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ತೆರವುಗೊಳಿಸುವ ಬಗೆಗೆ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ರಾಜ್ಯದ್ಯಂತ ಲಾಕ್‌ಡೌನ್ ಮಾಡಬೇಕೆಂಬ ಒತ್ತಾಯಗಳೂ ಕೇಳಿಬರುತ್ತಿವೆ. ಹಾಗಾಗಿ ನಿನ್ನೆ ಸಂಪುಟ ಸಭೆ ನಡೆಸಿರುವ ಸರ್ಕಾರ ಲಾಕ್​ಡೌನ್ ನಿಯಮಾವಳಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ.

ಮೂರು ಪ್ರಮುಖ ಅಂಶಗಳನ್ನ ಸೇರಿಸಿ ಕೊರೋನಾ ನಿಯಂತ್ರಣಕ್ಕೆ ಪ್ರಯತ್ನಿಸಿದೆ. ಮೊದಲ ಅಂಶವಾಗಿ, ಲಾಕ್ ಡೌನ್ ಅನ್ನು ಸಂಪೂರ್ಣ ತೆರವುಗೊಳಿಸುವುದರ ಬದಲು ಭಾನುವಾರ ಮಾತ್ರ ಲಾಕ್​ಡೌನ್ ಮಾಡಲು ನಿರ್ಧರಿಸಿದೆ. ಜುಲೈ 5ರಿಂದ ಆಗಸ್ಟ್ 2ರವರೆಗೆ, ಅಂದರೆ ಮುಂಬರುವ 5 ಭಾನುವಾರಗಳಂದು ಇಡೀ ರಾಜ್ಯವನ್ನ ಸಂಪೂರ್ಣವಾಗಿ ದಿಗ್ಬಂಧನ ಮಾಡಲಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಈ ಆದೇಶ ಹೊರಡಿಸಿದ್ದಾರೆ.

ಭಾನುವಾರ ಸಂಪೂರ್ಣವಾಗಿ ಲಾಕ್​ಡೌನ್ ಇರುತ್ತದೆಯಾದರೂ ಅಗತ್ಯ ಸರಕು ಸರಂಜಾಮುಗಳ ಸಾಗಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಗತ್ಯ ಸೇವೆಗಳನ್ನ ನೀಡುವ ಮೆಡಿಕಲ್ ಸ್ಟೋರ್ ಇತ್ಯಾದಿ ಅಂಗಡಿ, ಕಚೇರಿಗಳನ್ನ ತೆರೆಯಲು ಅವಕಾಶ ಇರುತ್ತದೆ. ಈ ಹಿಂದೆ ಒಮ್ಮೆ ಈ ಭಾನುವಾರದ ಲಾಕ್​ಡೌನ್ ಪ್ರಯೋಗ ಮಾಡಲಾಗಿತ್ತು. ಈಗ ತಜ್ಞರ ಸಲಹೆ ಮೇರೆಗೆ ಮತ್ತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸೇರ್ಪಡೆಯಾದ ಎರಡನೇ ಅಂಶ ಸರ್ಕಾರಿ ಕಚೇರಿಗಳನ್ನ ಬಂದ್ ಮಾಡುವುದು. ತುರ್ತು ಮತ್ತು ಅಗತ್ಯ ಸೇವೆ ಒದಗಿಸುವ ಕಚೇರಿ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗಳು ಪ್ರತೀ ಶನಿವಾರ ಮತ್ತು ಭಾನುವಾರ ಬಂದ್ ಆಗಲಿವೆ. ಇದು ಜುಲೈ 10ರಿಂದ ಅನ್ವಯವಾಗಲಿದ್ದು ಆಗಸ್ಟ್ 8ರವರೆಗೆ ಚಾಲನೆಯಲ್ಲಿರುತ್ತದೆ.

ಲಾಕ್​ಡೌನ್ ತೆರವುಗೊಳಿಸುವ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಈಗ ಈ ಅವಧಿಯಲ್ಲಿ ಒಂದು ಗಂಟೆ ವಿಸ್ತರಿಸಲಾಗಿದೆ. ರಾತ್ರಿ 9ರ ಬದಲು ರಾತ್ರಿ 8ರಿಂದಲೇ ಕರ್ಫ್ಯೂ ಪ್ರಾರಂಭವಾಗಲಿದೆ. ಇದು ನಿತ್ಯ ಇರುವ ನಿಷೇಧಾಜ್ಞೆಯಾಗಿದೆ. ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆ ಹೊರತುಪಡಿಸಿ ಬೇರೆ ಯಾವ ಕಾರಣಕ್ಕೂ ವ್ಯಕ್ತಿಗಳು ಸಾರ್ವಜನಿಕವಾಗಿ ಓಡಾಡುವಂತಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights