ತಂದೆ-ಮಗನನ್ನು ಹೊಡೆದು ಕೊಂದ ಪೊಲೀಸರು! ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ ಭಾಗಿ?

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನಂಕುಳಂನ ಪೊಲೀಸ್ ಲಾಕಪ್‌ನಲ್ಲಿ ಮೃತಪಟ್ಟ ಜಯರಾಜ್(50) ಹಾಗೂ ಅವರ ಮಗ ಬೆನಿಕ್ಸ್(31) ಪ್ರಕರಣದಲ್ಲಿ ಪೊಲಿಸರ ವಿರುದ್ದ ಹಲವಾರು ಆರೋಪಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ ಮ್ಯಾಜಿಸ್ಟ್ರೇಟ್ ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಜೂನ್ 19 ಶುಕ್ರವಾರ ರಾತ್ರಿ ಜಯರಾಜ್ ಹಾಗೂ ಬೆನಿಕ್ಸ್ ಅವರು ತಮ್ಮ ಮೊಬೈಲ್ ಅಂಗಡಿಯಯನ್ನು ಸಮಯಮೀರಿ ತೆರೆದಿದ್ದಕ್ಕೆ ಸಾಥನಂಕುಳಂ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.

ಇದನ್ನೇ ಕಾರಣವಾಗಿಟ್ಟುಕೊಂಡ ಪೊಲೀಸರು ಜಯರಾಜ್ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ತನ್ನ ತಂದೆಯನ್ನು ಬಂದಿಸಿದ್ದನ್ನು ಕೇಳಲು ಹೋದ ಬೆನಿಕ್ಸ್ ಅವರನ್ನೂ ವಿಚಾರಣೆಗಾಗಿ ಬಂಧಿಸಿದ ಪೊಲೀಸರು ಮೂರು ದಿನಗಳ ನಂತರ ಪೊಲೀಸ್ ಠಾಣೆಗಿಂತ 100 ಕಿ.ಮೀ. ದೂರದ ನಗರವಾದ ಕೋವಿಲ್ಪಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರಿಗೆ ತಿಳಿಸಿದ್ದಾರೆ.

ಪೊಲೀಸರು ತಮ್ಮ ವರದಿಯಲ್ಲಿ ಶನಿವಾರದಂದು ಇಬ್ಬರನ್ನೂ ವೈದ್ಯಕೀಯ ತಪಾಸಣೆ ಬಳಿಕ ಕೋವಿಲ್‌ಪಟ್ಟಿ ಸಬ್‌ಜೈಲ್‌ಗೆ ಕಳುಹಿಸಲಾಗಿದ್ದು, ಅಂದು ಸಂಜೆ ಫೆನಿಕ್ಸ್‌ಗೆ ಎದೆನೋವು ಕಾಣಿಸಿಕೊಂಡಿದ್ದು, ಜಯರಾಜ್ಗೆ ತೀವ್ರ ಜ್ವರ ಬಂದಿತ್ತು. ಇದಕ್ಕಾಗಿ ಇಬ್ಬರನ್ನೂ ಕೋವಿಲ್‌ಪಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಸೋಮವಾರ ಸಂಜೆ ಬೆನಿಕ್ಸ್ ಮೃತಪಟ್ಟರೆ, ಜಯರಾಜ್ ಮಂಗಳವಾರ ಬೆಳಗ್ಗೆ ಉಸಿರಾಟದ ತೊಂದರೆಯಿಂದ ಅಸುನೀಗಿದರು ಎಂದು ಉಲ್ಲೇಖಿಸಿದ್ದಾರೆ.

ಆದರೆ ಜಯರಾಜ್ ಪತ್ನಿ ಸೆಲ್ವಮಣಿ ಪೊಲೀಸರ ದೌರ್ಜನ್ಯದಿಂದ ತನ್ನ ಪತಿ ಹಾಗೂ ಮಗ ಸಾವಿಗೀಡಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಸಾವಿನ ಬಗ್ಗೆ ತಮಿಳುನಾಡಿನಾದ್ಯಂತೆ ಆಕ್ರೋಶ ವ್ಯಕ್ತವಾಗಿದ್ದು ಸ್ವತಃ ಮದ್ರಾಸ್ ಹೈಕೋರ್ಟಿನ ಮಧುರೈ ನ್ಯಾಯಪೀಠ ಬುಧವಾರ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ಮಾಡಲು ಮುಂದಾಗಿದೆ.

ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ಕತೆಗಳು ಒಂದೊಂದಾಗಿ ಹೊರಬರುತ್ತಿದೆ. ಜಯರಾಜ್ ಅವರ ಮಗಳು ಪರ್ಸಿ ಜೂನ್ 24 ರಂದು ಮಾಧ್ಯಮಗಳ ಜೊತೆ ಮಾತನಾಡಿತ್ತಾ, “ಪೊಲೀಸರು ನನ್ನ ತಂದೆ ಹಾಗೂ ಸಹೋಧರನಿಗೆ ಸುಮಾರು ಎರಡು ಗಂಟೆಯ ಕಾಲ ಬಾಗಿಲು ಹಾಕಿ ಥಳಿಸಿದ್ದಾರೆ. ನನ್ನ ಸಹೋದರನ ಸ್ನೇಹಿತರು ವಕೀಲರೊಂದಿಗೆ ಹೋಗಿ ಠಾಣೆಯ ಮುಂದೆ ನಿಂತರು. ಆದರೆ ಪೊಲೀಸರು ಅವರನ್ನು ಒಳಗೆ ಬಿಡಲಿಲ್ಲ. ಅವರು ನನ್ನ ಸಹೋದರ ಮತ್ತು ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಜಾಮೀನು ಅರ್ಜಿಯನ್ನು ಸಲ್ಲಿಸಿದ ವಕೀಲ ಮಣಿಮಾರನ್ “ತಂದೆ ಮತ್ತು ಮಗ ತುಂಬಾ ರಕ್ತ ಸಿಕ್ತವಾಗಿದ್ದರು, ಇಬ್ಬರೂ ರಕ್ತದಲ್ಲಿ ತೊಯದಿದ್ದರಿಂದ ಅವರು ಆರು ಲುಂಗಿಗಳನ್ನು ಬದಲಾಯಿಸಬೇಕಾಗಿತ್ತು” ಎಂದು ಹೇಳಿದ್ದಾರೆ.

ಜೂನ್ 20 ರಂದು ಅವರು ಮೊದಲು ಬೆನಿಕ್ಸ್ ಮತ್ತು ಜಯರಾಜ್ ಅವರನ್ನು ವೈದ್ಯಕೀಯ ಫಿಟ್ನೆಸ್ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಇಬ್ಬರನ್ನೂ ಸಾಥಂಕುಲಂ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಡಿ. ಸರವಣನ್ ಅವರ ಬಳಿಗೆ ಕರೆದೊಯ್ದರು ಎಂದು ಪೊಲೀಸರು ಹೇಳುತ್ತಾರೆ.

ಆದರೆ ಅವರಿಬ್ಬರ ಪರಿಸ್ಥಿತಿಯನ್ನೂ ನೋಡಿಯೂ ಯಾಂತ್ರಿಕವಾಗಿ ರಿಮಾಂಡ್ ಆದೇಶಗಳನ್ನು ಜಾರಿಗೊಳಿಸದ ಮ್ಯಾಜಿಸ್ಟ್ರೇಟ್ ವಿರುದ್ದ ಕೂಡಾ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಪಾತ್ರವನ್ನೂ ತನಿಖೆ ಮಾಡಬೇಕು ಎಂದು ಆಗ್ರಹಗಳು ಕೇಳಿ ಬಂದಿದೆ.

ಘಟನೆಯನ್ನು ವಿರೋಧಿಸಿ ಪ್ರತಿಭಟನೆಗಳು ಭುಗಿಲೇಳುತ್ತಿದ್ದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights