ತಲೆ ಎತ್ತಲಿದೆ 108 ಅಡಿ ಕೆಂಪೇಗೌಡರ ಪ್ರತಿಮೆ; ಶಂಕು ಸ್ಥಾಪನೆ ಮಾಡಿದ ಯಡಿಯೂರಪ್ಪ!

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪತ್ರಿಮೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೆಂಪೇಗೌಡರ 511 ನೇ ಜಯಂತೋತ್ಸವದ ಭಾಗವಾಗಿ ಇಂದು ಪ್ರತಿಮೆ ಹಾಗೂ 23 ಎಕರೆ ಪ್ರದೇಶದಲ್ಲಿ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಬೆಳಿಗ್ಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ಬೆಂಗಳೂರನ್ನು ಯೋಜನಾ ಬದ್ಧವಾಗಿ ಬೆಳೆಸಲು ಕೆಂಪೇಗೌಡರ ಸೇವೆ ಅಪಾರ. ನದಿ ಮೂಲ ಇಲ್ಲದ ಬೆಂಗಳೂರಿನಲ್ಲಿ ನೂರಾರು ಕೆರೆಗಳ ನಿರ್ಮಾಣ ಮಾಡಿ, ಬೆಂಗಳೂರು ನಗರವನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದು ಕೆಂಪೇಗೌಡರು ಎಂದು ಯಡಿಯೂರಪ್ಪ ಹೇಳಿದ್ದಾರೆ.

ದೂರದೃಷ್ಟಿಯ ಕೆಂಪೇಗೌಡರು ಅಂದು ನಿರ್ಮಾಣ ಮಾಡಿದ ಚಿಕ್ಕಪೇಟೆ, ಅಕ್ಕಿ ಪೇಟೆಗಳೇ ಇಂದು ವಾಣಿಜ್ಯ ಕೇಂದ್ರಗಳಾಗಿವೆ. ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಕೆಂಪೇಗೌಡರ ಹೆಸರು ಚಿರಸ್ಥಾಯಿಗೊಳಿಸಲು ಇಂತಹ ಯೋಜನೆ ಸಹಕಾರಿಯಾಗುತ್ತದೆ.

ಈ ವರ್ಷದಲ್ಲಿ ಪ್ರತಿಮೆಯನ್ನು ಪೂರ್ಣಗೊಳಿಸುತ್ತೇವೆ. ಅದರ ಉದ್ಘಾಟನೆಗೆ ಎಲ್ಲರೂ ಸೇರೋಣ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಪಾಲ್ಗೊಂಡಿದ್ದರು.

ಎಚ್.ಡಿ.ದೇವೇಗೌಡ ಮಾತನಾಡಿ, ಇದೊಂದು ಅಭೂತಪೂರ್ವ ಕಾರ್ಯಕ್ರಮ. ಯಡಿಯೂರಪ್ಪ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವುದ ಜೊತೆಗೆ ಅಧುನಿಕ ಉದ್ಯಾನವನ ‌ನಿರ್ಮಾಣ ಮಾಡುವ ಒಮ್ಮತದ ನಿರ್ಧಾರ ತೆಗೊಂಡಿದ್ದಾರೆ. ಯಾವುದೇ ಪಕ್ಷಭೇದ ಇಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಾಗಿ ಹೇಳಿದರು.

ಪಕ್ಷಭೇದವಿಲ್ಲದೇ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹೆಚ್ಚು ಉತ್ಸಾಹದಿಂದ ಈ ಯೋಜನೆ ಕೈಗೊಂಡಿದ್ದಾರೆ. ಅತೀ ಶೀಘ್ರವಾಗಿ ಪ್ರತಿಮೆ ಕೆಲಸ ಆರಂಭ ಆಗಬೇಕು.ಈ ಕಾರ್ಯಕ್ರಮ ಎಲ್ಲರ ಐಕ್ಯತೆಯಿಂದ ಆರಂಭವಾಗಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ಅತೀ ಹೆಚ್ಚು ಸಂತೋಷ ತಂದ ದಿನ. ದೇವನಹಳ್ಳಿ ಜನರನ್ನು ಯಾರೂ ಸಹ ಮರೆಯಲು ಸಾಧ್ಯವಿಲ್ಲ. ಈ ಭಾಗದ ರೈತರು ಜನರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಜನತೆಗೆ ಕೆಂಪೇಗೌಡರನ್ನು ಪರಿಚಯ ಮಾಡುವ ಕೆಲಸ ಸರ್ಕಾರ ಮಾಡಿದೆ. ಸರ್ಕಾರದ ಈ ಒಳ್ಳೆಯ ಕೆಲಸಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಭಾರತವನ್ನು ಬೆಂಗಳೂರಿನ ಮೂಲಕ ಇಡೀ ವಿಶ್ವವೇ ನೋಡುತ್ತಿದೆ.ಯಡಿಯೂರಪ್ಪ ಅವರ ಈ ದೊಡ್ಡ ಕೆಲಸಕ್ಕೆ ಶುಭಹಾರೈಸುವುದಾಗಿ ಹೇಳಿದರು.

ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಲೆ ಎತ್ತಲಿರುವ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ರಾಜ್ಯದ ಹೆಗ್ಗುರುತುಗಳಲ್ಲಿ ಒಂದಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights