ಮೈಸೂರು ಅತ್ಯಾಚಾರಿಗಳ ಕ್ರೈಂ ಡೈರಿ ತೆರೆದಿಟ್ಟ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್!
ಭಾರೀ ಸಂಚಲನವನ್ನೇ ಮೂಡಿಸಿದ ಮೈಸೂರು ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಬಗ್ಗೆ ಡಿಜಿ ಐಜಿಪಿ ಪ್ರವೀಣ್ ಸೂದ್ ಸುದ್ದಿಗಾರರಿಗೆ ಕೆಲ ವಿವರವನ್ನು ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿ ಐಜಿಪಿ ಪ್ರವೀಣ್ ಸೂದ್, “ಮೈಸೂರು ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರು ಆರೋಪಿಗಳಲ್ಲಿ ಐವರನ್ನು ಬಂಧಿಸಲಾಗಿದೆ. ಓರ್ವ ತಲೆಮರಿಸಿಕೊಂಡಿದ್ದಾನೆ. ಇವರೆಲ್ಲಾ ತಮಿಳುನಾಡಿನ ತಿರುಪೂರು ಜಿಲ್ಲೆಯವರು. ಆಗಾಗ ಮೈಸೂರು ಜಿಲ್ಲೆಗೆ ಬರುತ್ತಿದ್ದರು. ಇವರಲ್ಲಿ ಚಾಲಕ, ಕಾರ್ಪೆಂಟರ್, ಕೂಲಿ ಕೆಲಸ ಮಾಡುವವರು ಇದ್ದರು. ಐವರಲ್ಲಿ ಇಬ್ಬರು 7,8ನೇ ತರಗತಿ ಓದಿದ್ದಾರೆ. ಕೆಲವರು ಓದಿಲ್ಲ. ಓರ್ವ 17 ವರ್ಷದ ಬಾಲಾರೋಪಿ ಇದ್ದಾನೆ. ಇವರಲ್ಲಿ ಕೆಲವರಿಗೆ ತಮಿಳುನಾಡಿನಲ್ಲಿ ಕ್ರಿಮಿನಲ್ ಹಿನ್ನೆಲೆ ಇದೆ. ಇವರಿಂದ ಪ್ರಾಥಮಿಕ ವರದಿ ಪಡೆದಿದ್ದೇವೆ” ಎಂದು ಹೇಳಿದರು.
ಜೊತೆಗೆ “ಆರೋಪಿಗಳು ಬಂಡಿಪಾಳ್ಯ ಮಾರ್ಕೆಟ್ ಗೆ ಬರುತ್ತಿದ್ದರು. ಆಗ ಮದ್ಯ ಸೇವಿಸಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಯುವತಿ-ಯುವಕ ಇವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಯಾವುದೇ ಮಾಹಿತಿ ಆರೋಪಿಗಳ ಬಗ್ಗೆ ಸಿಕ್ಕಿಲ್ಲ. ಯುವತಿ ಕೂಡ ಯಾವುದೇ ಮಾಹಿತಿ ನೀಡಿಲ್ಲ. ಈ ಸಂದರ್ಭದಲ್ಲಿ ಮಾಹಿತಿ ನೀಡುವುದು ಕಷ್ಟವೇ. ಯುವತಿಯ ಸ್ನೇಹಿತ ಸ್ವಲ್ಪ ಮಾಹಿತಿ ನೀಡಿದ್ದನು. ಟಿಕ್ನಕಲ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಹೇಳಿದರು.
ಆರಂಭದಲ್ಲಿ 3 ಲಕ್ಷ ಹಣಕ್ಕಾಗಿ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಅದಾಗದೇ ಇದ್ದಾಗ ಕೃತ್ಯವೆಸಗಿ ಪರಾರಿಯಾಗಿದ್ದಾರೆಂದು ಪ್ರವೀಣ್ ಸೂದ್ ಹೇಳಿದ್ದಾರೆ.

