ಉಚಿತ ಪಡಿತರ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮುಂದುವರೆಸಿದ ಪ್ರಧಾನಿ ಮೋದಿ!

ಲಾಕ್‌ಡೌನ್‌ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರು, ಕಾರ್ಮಿಕರು, ಬಡವರು ಹಾಗೂ ಹಿಂದುಳಿದವರಿಗೆ ಉಚಿತ ಪಡಿತರ ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದ​ವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಗರೀಬ್ ಕಲ್ಯಾಣ್ ಯೋಜನೆಯನ್ನು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲೂ ಮುಂದುವರಿಸಲಾಗುವುದು ಎಂದಿದ್ದಾರೆ.

ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಒಂದು ಕೆ.ಜಿ. ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದ 80 ಕೋಟಿ ಜನರಿಗೆ ಇದರ ಲಾಭವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕನ್ನು ಜನರು ಹಗುರವಾಗಿ ತೆಗೆದುಕೊಳ್ಳಬಾರದು. ಅನ್​ಲಾಕ್ ಘೋಷಣೆ ಆದ ಬಳಿಕ ಜನರು ವೈಯಕ್ತಿಕವಾಗಿ ಬಹಳ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಮನಿಸಿದ್ದೇನೆ. ಇಂಥ ಧೋರಣೆ ತರವಲ್ಲ. ಜನರು ಕೊರೋನಾ ವೈರಸ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲಾಕ್​ಡೌನ್ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಲಾಕ್ ಡೌನ್ ನಿಯಮಗಳಿಂದ ಪ್ರಧಾನಿ ಮೋದಿಯೂ ಹೊರತಲ್ಲ. ಯಾರೇ ಆದರೂ ಲಾಕ್​ಡೌನ್ ನಿಯಮ ಪಾಲಿಸದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ಧಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights