ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳು ಖಾಲಿ; ಯಾವಾಗ ಇವುಗಳ ಭರ್ತಿ
ರಾಜ್ಯದಲ್ಲಿ ನವೆಂಬರ್ ತಿಂಗಳಿನಲ್ಲಿ ಮತ್ತೊಂದು ಸುತ್ತಿನ ಮತ ಸಮರಕ್ಕೆ ವೇದಿಕೆ ಅಣಿಯಾಗುವ ಸೂಚನೆಗಳಿವೆ. ಮಸ್ಕಿ, ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಅಗತ್ಯವಿದ್ದು,ಈ ಮೂರು ಕ್ಷೇತ್ರಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ನವೆಂಬರ್ ಅಂತ್ಯದ ವೇಳೆ ಬಿಹಾರ ವಿಧಾನಸಭೆಯೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಾಕಿ ಇರುವ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಯಡಿಯೂರಪ್ಪನವರ ಸರಕಾರವನ್ನು ಅಸ್ತಿತ್ವಕ್ಕೆ ತರಲು ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ ತಮ್ಮ ಎಂಎಲ್‌ಎ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಕಾರಣದಿಂದಾಗಿ ಆರ್‌ಆರ್ ನಗರ ಹಾಗೂ ಮಸ್ಕಿ ಕ್ಷೇತ್ರಗಳಿಗೆ ಶಾಸಕರು ಇಲ್ಲವಾಗಿದ್ದು, ಈ ಎರಡೂ ಕ್ಷೇತ್ರಗಳು ಒಂದು ವರ್ಷದಿಂದ ಖಾಲಿ ಉಳಿದಿವೆ.
ಇನ್ನೂ ಇತ್ತೀಚೆಗೆ ಶಾಸಕ ಸತ್ಯನಾರಾಯಣ ಅವರ ನಿಧನದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಅನಿವಾರ್‍ಯವಾಗಿದೆ. ಈ ಮೂರು ಕ್ಷೇತ್ರಗಳ ಪೈಕಿ ಶಿರಾ ಹಾಗೂ ಮಸ್ಕಿ ಕ್ಷೇತ್ರಗಳಲ್ಲಿ ಚುನಾವಣೆಗೆ ಯಾವುದೇ ಅಡ್ಡಿ ಕಾಣದಿದ್ದರೂ ರಾಜರಾಜೇಶ್ವರಿ ನಗರದಲ್ಲಿ ತಕರಾರು ಇನ್ನೂ ಊರ್ಜಿತವಿರುವುದರಿಂದ ಮತ ಚಲಾವಣೆ ಅನುಮಾನ ಎನ್ನಲಾಗಿದೆ.
ಮಸ್ಕಿಯಲ್ಲಿ ಪ್ರತಾಪ್‌ಗೌಡ ಪಾಟೀಲರು ಬಿಜೆಪಿ ಅಭ್ಯರ್ಥಿಯಾದರೇ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಶಿರಾದಲ್ಲಿ ಚುನಾವಣೆಗೂ ಮುನ್ನವೇ ಕಣ ರಂಗೇರಿದ್ದು, ಮೂರೂ ಪಕ್ಷಗಳಲ್ಲಿ ಪೈಪೋಟಿ ಜೋರಾಗಿದೆ. ಜೆಡಿಎಸ್‌ನಿಂದ ಸತ್ಯನಾರಾಯಣ ಅವರ ಮಗನಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ.ಕಾಂಗ್ರೆಸ್‌ನಲ್ಲಿ ಜಯಚಂದ್ರ ಹಾಗೂ ರಾಜಣ್ಣ ನಡುವೆ ಪೈಪೋಟಿ ಏರ್ಪಟ್ಟರೇ ಬಿಜೆಪಿ ಸೂಕ್ತ ಅಭ್ಯರ್ಥಿಯ ತಲಾಶೆಯಲ್ಲಿದೆ.
ಇದನ್ನೂ ಓದಿ: ಸಿರಾ ಉಪಚುನಾವಣೆ ಟಿಕೆಟ್‌ಗೆ ಜೆಡಿಎಸ್‌ನಲ್ಲಿ ಪೈಪೋಟಿ; ಸತ್ಯಪ್ರಕಾಶ್ಗೆ ಸಿಗುತ್ತಾ ಟಿಕೆಟ್?