ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವ ಪ್ರಭುತ್ವ, ಕರಾಳ ದಿನಗಳಲ್ಲಿ ಭಾರತ: ಮಹಿಳಾ ಮುನ್ನಡೆ ಆಕ್ರೋಶ

ಎರಡು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಭೀಕರವಾದ ಅತ್ಯಾಚಾರ ಮತ್ತು ಕೊಲೆಯ ಘಟನೆ ದೇಶವನ್ನೇ ಆಘಾತಗೊಳಿಸಿದೆ. ಕಳೆದ ಒಂದೇ ವಾರದಲ್ಲಿ ನಮ್ಮ ಸಮಾಜದ ವಿಕೃತ ಮುಖವೊಂದು ಜಗತ್ತಿನೆದುರು ಬಯಲಾಗಿದೆ. ಉತ್ತರ ಪ್ರದೇಶದ ದಲಿತ ಯುವತಿಯ ಮೇಲೆ ನಡೆದ ಭೀಭತ್ಸವಾದ ಅತ್ಯಾಚಾರ ಮತ್ತು ಕೊಲೆಯು ‘ವಿಶ್ವದ ಅತಿದೊಡ್ಡ ಪ್ರಜಾತಂತ್ರ ಇನ್ನೂ ಮೇಲೆ ಕಾಣುವಷ್ಟು ಪ್ರಜಾತಾಂತ್ರಿಕವಾಗಿಲ್ಲ’ ಎಂಬುದನ್ನು ಸಾಬೀತು ಪಡಿಸಿದೆ ಎಂದು ಮಹಿಳಾ ಮುನ್ನಡೆ ಸಂಘಟನೆ ಹೇಳಿದೆ.

ದೊಡ್ಡ ಗದ್ದಲ ಸೃಷ್ಟಿಸಿದ ಇದೊಂದು ಘಟನೆ ಮಾತ್ರವಲ್ಲದೆ ಸರಣಿ ರೂಪದಲ್ಲಿ ಇದೇ ವಾರದಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ ಮಹಿಳೆಯರು ಮತ್ತು ಬಾಲಕಿಯರ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳು, ನಿಜಕ್ಕೂ ಭಾರತದಲ್ಲಿ ಹೆಣ್ಣುಜೀವ ಅಪಾಯದಲ್ಲಿದೆ ಎಂಬುದರ ಸ್ಪಷ್ಟವಾದ ಸೂಚನೆ ನೀಡಿದವು. ಕೆಲವು ತಿಂಗಳೂಗಳ ಹಿಂದೆ, ಇದೇ ಉತ್ತರಪ್ರದೇಶದ ಉನ್ನಾಂವ್‌ನ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಕೋರ್ಟಿಗೆ ಬರುವ ಹಾದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಅದೇ ಆರೋಪಿಗಳಿಂದ ಬೆಂಕಿಯಿಡಿಸಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಭೀಕರವಾದ ಘಟನೆಯೂ ನಡೆಯಿತು. ಉನ್ನಾವ್ ಪ್ರಕರಣದಲ್ಲಿ ಆ ರಾಜ್ಯದ ಪ್ರಭಾವಿ ಶಾಸಕ ಮತ್ತವನ ಸಂಗಡಿಗರು ಆರೋಪಿಗಳಾದರೆ, ಈಗಿನ ದಲಿತ ಯುವತಿಯ ಪ್ರಕರಣದಲ್ಲಿ ಅದೇ ರಾಜ್ಯದ ಪ್ರಭಾವಿ ಸಮುದಾಯಕ್ಕೆ ಸೇರಿದವರು ಆರೋಪಿಗಳಾಗಿದ್ದಾರೆ. ಕಳೆದ ಕೆಲವು ದಿನಗಳು ಭಾರತದ ಮಾನವೀಯ ಮೌಲ್ಯಗಳ ನಿಟ್ಟಿನಲ್ಲಿ ನೋಡಿದಾಗ ‘ಭಾರತವನ್ನು ತಲ್ಲಣಗೊಳಿಸಿದ ಕರಾಳ ದಿನಗಳು’ ಆಗಿವೆ ಎಂದು ಸಂಘಟನೆಯ ಪೂರ್ಣಿಮಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಮಹಿಳೆ ಮತ್ತು ಬಾಲಕಿಯ ಮೇಲೆ ಮಹಿಳೆಯರಾದ ಕಾರಣಕ್ಕಾಗಿ ನಡೆಯಬಹುದಾದ ಲೈಂಗಿಕ ಹಿಂಸಾಚಾರಗಳು ಒಂದೆಡೆಯಾದರೆ, ಜಾತಿ, ವರ್ಗ, ಧರ್ಮ ಅಥವಾ ರಾಷ್ಟ್ರೀಯತೆಗಳ ಕಾರಣಕ್ಕೆ ಅಂಚಿಗೊತ್ತಲ್ಪಟ್ಟ ಸಮುದಾಯಗಳಿಗೆ ಸೇರಿದ ಹೆಣ್ಣುಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸಾಚಾರಗಳಿಗಿರುವ ಆಯಾಮಗಳು ಇನ್ನೂ ಹಲವು. ಈ ಮಹಿಳೆಯರು ಅನೇಕ ಕಾರಣಗಳಿಗಾಗಿ ದುಪ್ಪಟ್ಟು ಹಿಂಸೆ ಮತ್ತು ಶೋಷಣೆಗೆ ಯಾವಾಗ ಬೇಕಾದರೂ ಗುರಿಯಾಗಬಹುದಾದ ಕತ್ತಿಯಂಚಿನಲ್ಲೇ ಬದುಕು ತಳ್ಳಬೇಕಾಗಿರುತ್ತದೆ. ಮೊದಲೇ ಭಯಂಕರವಾಗಿದ್ದ ಇಂತಹ ಪಿತೃಪ್ರಧಾನತೆಯ ಜೊತೆ ಸೇರಿರುವ ಜಾತೀವಾದಿ, ಕೋಮುವಾದಿ ಮನಸ್ಥಿತಿ, ಈಗಿನ ಮನುವಾದಿ ಸರ್ಕಾರಗಳ ಅಧಿಕಾರಾವಧಿಯಲ್ಲಿ ಮೇರೆ ಮೀರಿ ಹರಿಯುತ್ತಿದೆ!

Hathras Rape Incident: In UP Gang-Rape Tragedy, 2.30 am Cremation By Cops, Family Kept Out

ಇಂತಹ ಅಮಾನವೀಯತೆಗೆ ಪ್ರತಿಯಾಗಿ ‘ಸೋದರಿಯರೇ ಕ್ಷಮಿಸಿ, ನಿಮ್ಮನ್ನು ಉಳಿಸಿಕೊಳ್ಳುವಷ್ಟು ನಾವಿನ್ನೂ ಮನುಷ್ಯರಾಗಿಲ್ಲ’ ಎಂದು ನೊಂದು ನುಡಿಯುತ್ತಿರುವ ಅಪ್ಪಟ ಮಾನವೀಯ ಸ್ಪಂದನೆಗಳೂ ಪ್ರತಿಧ್ವನಿಸುತ್ತಿವೆ. ಅದೇ ಕಾಳಜಿಯಿಂದಲೇ, ‘ಅತ್ಯಾಚಾರದ ಆರೋಪಿಗಳನ್ನು ಗಲ್ಲಿಗೇರಿಸಬೇಕು’, ‘ಕ್ಯಾಂಡಲ್ ಸುಟ್ಟದ್ದು ಸಾಕು, ಅತ್ಯಾಚಾರಿಗಳನ್ನು ಸುಡಬೇಕು’, ‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಹೊಡೆದು ಕೊಲ್ಲಿ’ ಮೊದಲಾದ ಕೂಗುಗಳೂ ಬಲವಾಗಿ ಕೇಳುತ್ತಿವೆ. ಸಾಮಾನ್ಯರು ಮಾತ್ರವಲ್ಲ, ಜವಾಬ್ದಾರಿ ಸ್ಥಾನದಲ್ಲಿರುವ ರಾಜಕಾರಣಿಗಳೂ ಕೂಡಾ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಎಲ್ಲದರ ನಡುವೆ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರವನ್ನು ತಡೆಗಟ್ಟುವುದು ಹೇಗೆ?’ ಎಂಬುದರ ಸುತ್ತ ನಡೆಯುತ್ತಿರುವ ವಾದ-ಪ್ರತಿವಾದಗಳಲ್ಲಿ ಸಿಲುಕಿ ನಿಜವಾಗಿ ಆಗಬೇಕಾದ ಕೆಲಸಗಳ ಕುರಿತ ಚರ್ಚೆ ತೆರೆಮರೆಗೆ ಸರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮುನ್ನಡೆ ಸಂಘಟನೆಯ ಒತ್ತಾಯಗಳು: 

1. ಅತ್ಯಾಚಾರಗಳು ಕೇವಲ ಲೈಂಗಿಕ ವಾಂಛೆಯಿಂದ ನಡೆಯುವುದಿಲ್ಲ. ಹಿಂಸೆಯನ್ನು ಸಣ್ಣ ವಯಸ್ಸಿನಿಂದ ನೋಡಿ ಬೆಳೆದ ಅಥವಾ ಅನುಭವಿಸಿದ ಮಕ್ಕಳು ದೊಡ್ಡವರಾದಾಗ ಹಿಂಸೆಯ ಪ್ರವರ್ತಕರಾಗುವುದು ಶೇ. 70ರಷ್ಟು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಂಡಿರುವ ಸಂಗತಿ. ಮಹಿಳೆಯನ್ನು ದಮನಿಸಬಹುದು, ಅವಮಾನಿಸಬಹುದು, ಹಿಂಸಿಸಬಹುದು ಮತ್ತು ಕೊಲ್ಲಬಹುದು ಎಂಬ ಪರವಾನಿಗೆಯನ್ನು ಗಂಡಸರಿಗೆ ಧಾರಾಳವಾಗಿ ನೀಡುವ ಸಾಂಸ್ಕೃತಿಕ ಮೌಲ್ಯ ಇರುವ ತನಕ ಹಿಂಸೆಗಳು ನಡೆಯುತ್ತವೆ. ಇದನ್ನು ಬದಲಾಯಿಸಲು, ಹಿರಿಯರು ನಡೆಸುವ ಹಿಂಸೆಗಳನ್ನು ನಿಲ್ಲಿಸುವ ಮತ್ತು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸಮಾನತೆಯ ಪಾಠವನ್ನು ಆಳವಾಗಿ ಕಲಿಸಬೇಕಾದ ಅಗತ್ಯವಿದೆ.

2. ತಾರತಮ್ಯಗಳನ್ನು ನಿರಾಕರಿಸುವ, ಸಮಾನತೆಯ ಮನಸ್ಥಿತಿಯನ್ನು ಬೆಳೆಸುವಂತಹ ಪಠ್ಯಕ್ರಮವನ್ನು ಸರ್ಕಾರಗಳು ಶಾಲಾ ಶಿಕ್ಷಣದಲ್ಲಿಯೇ ಒಳಗೊಳ್ಳಬೇಕು.

3. ನಮ್ಮ ಸಮಾಜದಲ್ಲಿ ಪ್ರಚಲಿತವಾಗಿರುವ ‘ಪುರುಷ ಮೇಲಾಧಿಪತ್ಯ’ದ ಪರಿಕಲ್ಪನೆಯ ಪ್ರಕಾರ, ಹೆಣ್ಣನ್ನು ಬಲವಂತದಿAದ ಮಣಿಸುವುದು ಗಂಡಿನ ಗೌರವವನ್ನು ಹೆಚ್ಚುಮಾಡುತ್ತದೆ; ಮಹಿಳೆಯನ್ನು ಅತ್ಯಾಚಾರ ಮಾಡುವ ಮೂಲಕ ಗಂಡಸು ತನ್ನ ‘ಪೌರುಷ’ವನ್ನು ಸಾಬೀತು ಮಾಡಬಹುದು! ಈ ಪೊಳ್ಳು ‘ಪೌರುಷ’ದ ಕಲ್ಪನೆಯು ತಪ್ಪೆಂಬುದನ್ನೂ, ಪರಸ್ಪರರನ್ನು ಗೌರವಿಸುವ ಮೂಲಕ ಮಾತ್ರವೇ ಗಂಡು-ಹೆಣ್ಣುಗಳಿಬ್ಬರೂ ಆರೋಗ್ಯಕರ ಜೀವನ ನಡೆಸಬಲ್ಲರೆಂಬುದನ್ನೂ ಸಮಾಜದಲ್ಲಿ ಸ್ಥಾಪಿಸಬೇಕು.
4. ಅತ್ಯಾಚಾರದ ಸಂದರ್ಭಗಳಲ್ಲಿ ತಮ್ಮ ಕರ್ತವ್ಯ ನಿಭಾಯಿಸುವುದನ್ನು ಬಿಟ್ಟು ಅಸಂಬದ್ಧವಾದ, ಉನ್ಮಾದವನ್ನು ತುಂಬುದ, ಯಾವುದೋ ಒಂದು ಸಮುದಾಯವನ್ನು ಗುರಿಮಾಡುವಂತಹ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೇಲೆ ಕ್ರಿಮಿನಲ್ ಕ್ರಮ ಜರುಗಿಸಬೇಕು.

Patna: Bhim Army protests against Hathras gang rape case #Gallery - Social News XYZ

5. ಹೆಣ್ಣುಮಕ್ಕಳ ಉಡುಪು, ಅವರ ಸ್ವತಂತ್ರವಾದ ಆಯ್ಕೆಗಳು ಮತ್ತು ಚಲನ-ವಲನಗಳಿಂದ ಅತ್ಯಾಚಾರಗಳಾಗುತ್ತವೆಂಬAತಹ ತಪ್ಪುತಪ್ಪಾದ ಕಟ್ಟು ಕಥೆಗಳನ್ನು ಹರಡುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹೀಗೆ, ಮಹಿಳೆಯರನ್ನೇ ಅತ್ಯಾಚಾರಗಳಿಗೆ ಹೊಣೆ ಮಾಡುವ ವಾದಗಳನ್ನು ಮುಂದಿಡುತ್ತಾ ಬಂದಿದ್ದರಿAದಲೇ ಅತ್ಯಾಚಾರಿಗಳಿಗೆ ತಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪದ ಬದಲು ಹೆಮ್ಮೆ ಮೂಡುವಂತಾಗಿದೆ. ಹೀಗೆ ಪರೋಕ್ಷವಾಗಿ ಅತ್ಯಾಚಾರಗಳನ್ನು ಬೆಂಬಲಿಸುವುದನ್ನೂ ಕೂಡಾ ನಿಯಂತ್ರಿಸಬೇಕು.
6. ವಿಕೃತ ಲೈಂಗಿಕತೆಯನ್ನು ಬಿಂಬಿಸುತ್ತಾ ಹದಿವಯಸ್ಸಿನ ಗೊಂದಲದಲ್ಲಿರುವ ಮಕ್ಕಳನ್ನು ತಪ್ಪುದಾರಿಗೆಳೆಯುವ ಜಾಲತಾಣಗಳನ್ನೂ, ಸಿನೆಮಾಗಳನ್ನೂ, ಜಾಹೀರಾತುಗಳನ್ನೂ ನಿರ್ಬಂಧಿಸಬೇಕು.

ಇದನ್ನೂ ಓದಿ: ದೇಶದಲ್ಲಿ ಪ್ರತಿದಿನ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ; 16 ನಿಮಿಷಕ್ಕೊಂದು ದೌರ್ಜನ್ಯ!

7. ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರದ ಪ್ರಕರಣಗಳ ತನಿಖೆ, ಸಾಕ್ಷಿ ಸಂಗ್ರಹ ಮತ್ತು ವಿಚಾರಣೆಯ ಪ್ರತಿ ಹಂತವನ್ನೂ ಅತ್ಯಂತ ಗಂಭೀರತೆಯಿAದ, ಸಂತ್ರಸ್ತ ಮಹಿಳೆಯ ಪರವಾದ ಸಹಾನುಭೂತಿಯಿಂದ ನಡೆಸಿದರೆ, ಆರೋಪಿಗಳು ಬಿಡುಗಡೆಯಾಗಿ ಮತ್ತೆ ಹೋಗಿ ಸಂತ್ರಸ್ತೆಯನ್ನು ಕೊಲ್ಲುವ ಪ್ರಯತ್ನ ಮಾಡಲು ಸಾಧ್ಯವಾಗುವುದಿಲ್ಲ. ನ್ಯಾಯದಾನ ಪ್ರಕ್ರಿಯೆಯನ್ನು ಬಿಗಿಗೊಳಿಸುವುದರಿಂದ ಅತ್ಯಾಚಾರದ ಮನಸ್ಥಿತಿ ಇರುವವರಲ್ಲಿ ಭಯ ಹುಟ್ಟಿಸಬಹುದೇ ಹೊರತು, ಕೆಲವರನ್ನು ಕೊಲ್ಲುವುದರಿಂದಲ್ಲ. ಅತ್ಯಾಚಾರಕ್ಕೆ ಮರಣದಂಡನೆ ಪರಿಹಾರವಲ್ಲ!

8. ಸಂತ್ರಸ್ತರಿಗೆ ಎಲ್ಲ ಬಗೆಯ ನೆರವನ್ನೂ ಒಂದೇ ಛಾವಣಿಯಡಿ ಒದಗಿಸುವ ‘ಏಕಗವಾಕ್ಷಿ’ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲೂ ಆರಂಭಿಸಬೇಕು.

ಇವು, ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳು. ಇವುಗಳ ದಿಕ್ಕಿನಲ್ಲಿ ದೂರಗಾಮಿ ಹೆಜ್ಜೆಗಳನ್ನಿಡದೆ, ಸಾಮಾಜಿಕ ಸಮಸ್ಯೆಗೆ ವ್ಯಕ್ತಿಗತ ಪರಿಹಾರಗಳನ್ನು ಹುಡುಕುವುದು ಅರ್ಥಹೀನ. ಆದ್ದರಿಂದ, ಮಹಿಳೆಯರು ಮತ್ತು ಎಲ್ಲ ನಾಗರೀಕರ ಹಕ್ಕುಗಳ ಬಗ್ಗೆ ಕಾಳಜಿಯುಳ್ಳ, ಸಮಾಜದ ಸ್ವಾಸ್ಥö್ಯವನ್ನು ರಕ್ಷಿಬಯಸುವ ನಾವೆಲ್ಲರೂ ಪ್ರತಿಭಟನಾ ಸಭೆ ನಡೆಸುವ ಮೂಲಕ ‘ಭಾರತದ ಎಲ್ಲ ಜಾತಿ-ವರ್ಗಗಳ ಮಹಿಳೆಯರಿಗೂ ಮಾನವ ಹಕ್ಕುಗಳಿವೆ, ಅದನ್ನು ರಕ್ಷಿಸುವುದು ಎಲ್ಲರ ಹೊಣೆ’ ಎಂದು ಆಗ್ರಹಿಸುತ್ತೇವೆ ಎಂದು ಮಹಿಳಾ ಮುನ್ನಡೆ ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.


ಇದನ್ನೂ ಓದಿ: ಹತ್ರಾಸ್‌ ಅತ್ಯಾಚಾರ ಪ್ರಕರಣ: ಜಗತ್ತಿನ ಮುಂದೆ ಸತ್ಯಬಿಚ್ಚಿಟ್ಟ ದಿಟ್ಟ ವರದಿಗಾರ್ತಿ ತನುಶ್ರೀ ಪಾಂಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights